Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Sri Padhemata Vereshwara Temple, Sri Kshethera Padhemata


Sri Veereshwara Swamy Temple, Padhemata ,Kenjooru
ಶ್ರೀ ವಿರೇಶ್ವರ ಸ್ವಾಮಿ ದೇವಸ್ಥಾನ, ಪಾದೆಮಠ , ಕೆಂಜೂರು.

Sri Veereshwara Swamy, Padhemutt

        ರಶಿವನ ಮಾನಸ ಪುತ್ರನಾದ ಶ್ರೀ ವೀರಭದ್ರೇಶ್ವರನು ಇಲ್ಲಿನ ಪಾದೇಮಠ ಕ್ಷೇತ್ರದಲ್ಲಿ “ಶ್ರೀ ವೀರೇಶ್ವರ ಸ್ವಾಮಿ”(Sri Veereshwara) ಯಾಗಿ ನೆಲೆಸಿ ನಿಂದ ಮಹಾದೇವ ಕುವರನಾಗಿದ್ದಾನೆ. ಈತನ ಮಹಿಮೆಯನ್ನು ಬಣ್ಣಿಪುವುದೆಂತು, ಪಾಡುವುದೆಂತು. ಈತನ ಮಹಿಮೆಯನ್ನು ಪಾಡಿ-ಪೊಗಳಲು ನಮಗೆ ಜನುಮಗಳೇ ಸಾಲದು.
          ಶ್ರೀ ಕ್ಷೇತ್ರ ಪಾದೇಮಠವು ಕೊಕ್ಕರ್ಣೇಯಿಂದ ಸರಿಸುಮಾರು 5 ರಿಂದ 6 ಕಿ.ಮೀ ಅಂತರದಲ್ಲಿದೆ. ಕೊಕ್ಕರ್ಣೆ ಮೂಲಕ ನಾವು ಹೆಬ್ರಿಗೆ ಸಾಗುವ ಮಾರ್ಗದಲ್ಲಿ ಮುಂದುವರದಂತೆ ಕೆಂಜೂರು ಎಂಬ ಗ್ರಾಮದಲ್ಲಿ ಶ್ರೀ ಕ್ಷೇತ್ರ ಪಾದೇಮಠ(Padhemutt) ವು ವಿರಾಜಮಾನವಾಗಿದೆ. ಇಲ್ಲಿಗೆ ಶ್ರೀ ವಿರೇಶ್ವರ ಸ್ವಾಮಿಯು ಬಂದು ನೆಲೆಸಿದ ಕಾರಣದಿಂದ ‘ಪಾದೆಮಠ’ ಎಂಬ ಹೆಸರು ಬಂದಿದೆ.

ದಂತ ಕಥೆ : ಹಿಂದೆ ಪರಮೇಶ್ವರನು ಲೋಕಕಲ್ಯಾಣಾರ್ಥವಾಗಿ ಭೂಲೋಕದಲ್ಲಿ ನೆಲೆಸಲೋಸುಗ ಕೈಲಾಸದಿಂದ ತಾನು ಭುವಿಗಿಳಿದು ಬಂದನು. ಹೀಗೆ ಮಹಾದೇವನು ಭೂಮಿಗಿಳಿದು ಬರಲು ಒಂದು ರಾಕ್ಷಸನು ಕಾರಣೀಭೂತನಾಗಿರುತ್ತಾನೆ. ಆ ರಾಕ್ಷಸನು ಕ್ರೂರಿಯಾಗಿದ್ರೂ ಕೂಡಾ ಮಹಾದೇವನ ಆರಾಧಕನಾಗಿರುತ್ತಾನೆ.


ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು
         ಒಮ್ಮೆ ಕ್ರೂರ ರಾಕ್ಷಾಸನು ಪರಮೇಶನ ಮೂರು ಜ್ಯೋತಿರ್ಲಿಂಗಗಳನ್ನು ಹೊತ್ತು ತರುವಾಗ ಮೊದಲೆರಡು ಲಿಂಗಗಳು ಭೂ ಸ್ಪರ್ಶವಾಗಿ ಅವೆರಡು ಪುಣ್ಯ ಕ್ಷೇತ್ರಗಳಾದವು. ಹಾಗೇ ಮುಂದುವರೆದು ಒಂದು ಲಿಂಗ ಭೂಮಿಗೆ ಸ್ಪರ್ಶವಾದ ಸ್ಥಳವೆ “ಸೂರಲು”. ಇಲ್ಲಿ ಮಹಾಲಿಂಗೇಶ್ವರನಾಗಿ ನೆಲೆಸಿ ಇರುವ ಮಹಾದೇವನೊಂದಿಗೆ ಕೈಲಾಸದ ಗಣಗಳೂ ಕೂಡಾ ಬಂದವು. ಅಂತೆಯೇ ಮಹಾದೇವನು ಭೂಲೋಕಕ್ಕೆ ಬರುವಾಗ ಮೊದಲಾಗಿ ಲೋಕದೊಡತಿ ‘ಮಹಾದೇವಿಯು’ ಕೂಡಾ ಸ್ವಾಮಿಯೊಂದಿಗೆ ನಾನು ನಿಮ್ಮೊಂದಿಗೆ ಬರುತ್ತೇನೆ ಎಂದು ಹೇಳುತ್ತಾಳೆ. ಆಗ ತಾಯಿಯು ತೆರಳುತ್ತಾಳೆಂಬುದನ್ನು ತಿಳಿದು ಪಾರ್ವತಿಯ ಕುವರ ವಿನಾಯಕನು ಕೂಡಾ ನಾನು ನಿಮ್ಮೊಂದೊಗೆ ಬರುವೆನು ಎಂದು ಹೇಳುತ್ತಾನೆ. ಅಂತೆ ಅನ್ನ ಮಡದಿ ಮಕ್ಕಳನ್ನು ಕರೆದುಕೊಂಡು ತೆರಳುವ ವೇಳೆಯಲ್ಲಿ ಈಶನ ಮಾನಸ ಪುತ್ರ “ಶ್ರೀ ವೀರಭದ್ರನು” ಕೂಡಾ ನಾನು ಬರುವೆನು ತಂದೆ ಎಂದು ಹೇಳುತ್ತಾನೆ.
          ಹೀಗೆ ಮಹಾದೇವನ ಅಣತಿಯಂತೆ ವೀರಭದ್ರನು ಕೂಡಾ ಭೂಮಿಗಿಳಿದು ಬರುತ್ತಾನೆ. ಈ ರೀತಿಯಲ್ಲಿ ತಾನು ಭೂಮಿಗಿಳಿದು ಬರುವಾಗ ಮೊದಲು ತನ್ನ ಪಾದವನ್ನು ಊರಿದ(ಇರಿಸಿದ) ಸ್ಥಳವೇ ಇಂದಿನ ‘ಪಾದೇಮಠ’ ಎಂದಾಯ್ತು ಎಂಬುದಾಗಿ ತಿಳಿಯುತ್ತದೆ. ಆದರೆ ಈ ಬಗ್ಗೆ ಕೂಲಂಕೂಶವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಸ್ಥಳಕ್ಕೆ ಸಂಬಂಧಪಟ್ಟ ಉಲ್ಲೇಖಗಳ ಬಗ್ಗೆ ಪೂರ್ಣ ಮಾಹಿತಿ ನಮಗೆ ದೊರಕಿರುವುದಿಲ್ಲ. ಮುಂದೆ ಶ್ರೀ ವೀರಭದ್ರನು ಇಲ್ಲಿ ಶ್ರೀ ವಿರೇಶ್ವರ ಸ್ವಾಮಿ ಎಂಬ ನಾಮದಿಂದ ತನ್ನ ಪರುವಾರವನ್ನು ಕೂಡೊಕೊಂಡು ಇಲ್ಲಿ ನೆಲೆಯಾದನು.

ದೇವತೆಗಳು ಮತ್ತು ಪರಿವಾರಗಳು : ಈ ಸ್ಥಳದಲ್ಲಿ ಶ್ರೀ ವಿರೇಶ್ವರನೊಂದಿಗೆ ಅಬ್ಬಗ-ದಾರಗರು ನೆಲೆಸಿ ನಿಂದರೆ ಪ್ರಾಕಾರದಲ್ಲಿ ಮಹಾಗಣಪತಿ ನೆಲೆಸಿದ್ದಾನೆ. ದ್ವಾರಪಾಲಕರಾಗಿ ನಂದಿ ಮತ್ತು ಇತರೆ ದೈವಗಳಿವೆ. ಅಲ್ಲದೆ ಆದಿಶಕ್ತಿಯಾದ “ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ” ಪ್ರತ್ಯೇಕ ಗುಡಿಗಳು ಕೂಡಾ ಇದೆ. ಅಲ್ಲದೆ ಮಾಸ್ತಿ(Sri Mahasathi), ಯಕ್ಷಿ, ಮಲಯಾಳಿ ಬೊಬ್ಬರ್ಯ, ಹಾಯಿಗುಳಿ, ಕಲ್ಕುಡ, ಪಂಜುರ್ಲಿ ಅಲ್ಲದೆ ಹಲವಾರು ದೈವಗಳು ಇಲ್ಲಿ ನೆಲೆಯಾಗಿವೆ. ದೇವಾಲಯದ ಹೊರಗೆ ‘ಮಹಾವಿಷ್ಣು’ವಿನ ಗುಡಿಯೂ ಕೂಡಾ ಇದೆ. ಅಲ್ಲದೆ ಇಲ್ಲೇ ಸಮೀಪದ ಕಾಡಿನಲ್ಲಿ “ಬೈಕಾಡ್ತಿ ದೇವಿಯ”ಯ ಸುಂದರ ಕಾಷ್ಠದಿಂದ ನಿರ್ಮಿತವಾದ ಗುಡಿಯು ಇದೆ. ಅಲ್ಲದೇ ನಾಗದೇವರ ಸಾನ್ನಿದ್ಯದೊಂದಿಗೆ ಪುಷ್ಕರ್ಣಿ ಕೂಡಾ ಸುಂದರ ಮನಮೋಹಕವಾಗಿದೆ. ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ‘ಮಲಯಾಳಿ ಬೊಬ್ಬರ್ಯನ’ ಬೃಹತ್ ಗಾತ್ರದ ಹುತ್ತ. ಸರಿಸುಮಾರು 15-20 ಅಡಿ ಎತ್ತರವಿರುವ ಈ  ಹುತ್ತ ಮೇಲ್ಮಾಡಿಗೆ ತಾಗುತ್ತದೆ. ಅಷ್ಟೇ ಎತ್ತರದ ಮರದ ವಿಗ್ರಹ ಕೂಡಾ ಇದೆ. ಹಲವಾರು ಪರಿವಾರ ದೈವಗಳು ಇಲ್ಲಿದ್ದು ಇಲ್ಲಿದೆ ಸಮೀಪದಲ್ಲಿ ಒಂದು ‘ಕೋಟಿ-ಚೆನ್ನಯ್ಯ’ ಗರಡಿ ಕೂಡಾ ಇದೆ. ಅಲ್ಲಿ ಸನ್ಯಾಸಿ ದೈವದೊಂದಿಗೆ, ಬಲ್ಲಾಳ್ತಿ, ಜಟ್ಟಿಗೇಶ್ವರ ಹಾಗೂ ಮುಂತಾದ ದೈವಗಳಿವೆ.
ಇಲ್ಲಿ ಪ್ರತಿ ವರ್ಷ ಮೇ 15-16 ರಂದು (ವೃಷಭ ಮಾಸದ ಪಾಢ್ಯದಿಂದ) ಜಾತ್ರಾ ಮಹೋತ್ಸವವು ನಡೆಯುತ್ತದೆ. ಅಲ್ಲದೆ ಇಲ್ಲಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ(Sri Durgaparameshwari) ಹಾಲು ಹಬ್ಬ, ಗೆಂಡೋತ್ಸವಗಳು(Kenda seve) ಕೂಡಾ ಹಬ್ಬದ ದಿನದಂದು ನಡೆಯಲ್ಪಡುತ್ತದೆ. ಇಲ್ಲಿನ ರಥವು ಸುಂದರವಾಗಿದ್ದು ಮನಮೋಹಕವಾಗಿದೆ. ಹಬ್ಬದ ದಿನದಂದು ನಾಗತಂಬಿಲ, ಡಕ್ಕೆ ಬಲಿ ಇತ್ಯಾದಿಗಳು ನಡೆಯುತ್ತದೆ. ಅಲ್ಲದೆ ಇಲ್ಲಿನ ದೇವ, ದೈವಗಳಿಗೆ ಮುಡಿಬಿಟ್ಟ ಅಂದರೆ ದರ್ಶನ ಪಾತ್ರಿಗಳು ಒಂದು ದಿನ ಸೇರಿ ಅಮ್ಮನವರ ಮುಂಬಾಗದಲ್ಲಿ ಆವೇಶಗೊಳ್ಳುತ್ತಾರೆ. ಇಲ್ಲಿನ ದೇವರನ್ನು ನಂಬಿದವರು ಎಲ್ಲಿಯೇ ಇದ್ದರೂ ಇಲ್ಲಿನ ಹಬ್ಬದ ದಿನದಂದು ಇಲ್ಲಿಗೆ ಬಂದು ದೇವರ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಈ ದೇವಾಲಯವು ಇಂದು ಕೆಲವೊಂದು ಜೀರ್ಣಾವಸ್ಥೆಯ ಹಂತವನ್ನು ತಲುಪಿದೆ. ದೈವ-ದೇವತೆಗಳ ಬಿಂಬಗಳು ತುಂಬಾ ಶಿಥಿಲತೆಯನ್ನು ತಲುಪಿದೆ. ಭಕ್ತಾದಿಗಳ ಸಹಕಾರ ಮತ್ತು ಉತ್ತಮ ಆಡಳಿತದಿಂದ ಈ ದೇವಾಲಯವನ್ನು ನವೀಕರಿಸಿದಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚುವುದಲ್ಲದೆ ಶ್ರೀ ದೇವರ ಕೃಪೆಯು ಆಗುವುದು.
ದಾರಿಯ ವಿವರ : ನಾವು ಕುಂದಾಪುರದಿಂದ ಹೋಗುವುದಾದರೆ ಕುಂದಾಪುರ – ಮಂದಾರ್ತಿ – ಕೊಕ್ಕರ್ಣೆ ಯ ಮೂಲಕ ಶ್ರೀ ಕ್ಷೇತ್ರವನ್ನು ತಲುಪಬಹುದು. ಹೆಬ್ರಿಯ ಮೂಲಕವಾದರೆ ಹೆಬ್ರಿ – ಸಂತೆಕಟ್ಟೆ – ಮೂಲಕ ಪಾದೆಮಠವನ್ನು ತಲುಪಬಹುದು. ಹಾಗೇ ಬ್ರಹ್ಮಾವರದ ಮೂಲಕ ಬಾರ್ಕೂರು – ಮಂದಾರ್ತಿಯನ್ನು ತಲುಪಿ ಅಲ್ಲಿಂದ ಕೊಕ್ಕರ್ಣೆ ತಲುಪಿ ದೇವಾಲಯವನ್ನು ತಲುಪಬಹುದು. ಇಲ್ಲಿಗೆ ಬಸ್ಸಿನ ಸಂಚಾರ ವಿರಳವಾದರೂ ಸ್ವಂತ ವಾಹನದ ಮೂಲಕ ಹೋಗಲು ಅನುಕೂಲವಿದೆ.

ವಿಳಾಸ :-
          ಶ್ರೀ ವಿರೇಶ್ವರ ದೇವಸ್ಥಾನ,
          ಪಾದೇಮಠ, ಕೆಂಜೂರು,
          ಉಡುಪಿ- ತಾ & ಜಿಲ್ಲೆ ||