Shree Janardhana Mahakali Temple,
Ambalapadi, Udupi.
ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನ,
ಅಂಬಲಪಾಡಿ, ಉಡುಪಿ||
Lord Shree Janardhana and Goddess Shree Mahakali, Ambalapadi, Udupi |
ಉಡುಪಿ ಜಿಲ್ಲೆಯ
ಹಲವಾರು ಶಾಕ್ತ ಪರಂಪರೆಯ ದೇವಾಲಯಗಳ ಸಾಲಿನಲ್ಲಿ ವಿಶೇಷವಾದ ಮಹತ್ವವನ್ನು ತನ್ನಲ್ಲಿ ಅಡಗಿಸಿಕೊಂಡು
ಭಕ್ತಜನರ ಆರಾಧ್ಯ ಶಕ್ತಿಯಾಗಿರುವ ದೇವಸ್ಥಾನಗಳಲ್ಲಿ ಉಡುಪಿ ಸಮೀಪದ ಅಂಬಲಪಾಡಿಯಲ್ಲಿರುವ(Ampalpadi)
ಶ್ರೀ ಜನಾರ್ಧನ ಮಹಾಕಾಳಿಯ ಮಂದಿರವು ಒಂದು. ಇಲ್ಲಿ ಕೇವಲ ಶಾಕ್ತ ಪರಂಪರೆ ಮಾತ್ರವಲ್ಲದೆ ವೈಷ್ಣವ
ಪರಂಪರೆಯನ್ನು ಕಾಣಬಹುದು. ವಿಷ್ಣುಮಾಯೆಯಾದ ಶಕ್ತಿ ಮತ್ತು ಶಿವೆಯ ಅಣ್ಣನಾದ ವಿಷ್ಣು ಇಲ್ಲಿ ಒಂದೇ
ಕಡೆಯಲ್ಲಿ ಪೂಜೆಗೊಂಬುದು ವಿಶೇಷವಾಗಿದೆ. ಅಂದರೆ ಶಿವಶಕ್ತಿ ಸ್ವರೂಪಿಣಿ ಮಹಾಕಾಳಿ, ಹಾಗೂ ಕಾಳಿಯ(ಪಾರ್ವತಿಯ
ಅವತಾರಗಳಲ್ಲಿ ಒಂದು) ಸೋದರ ವಿಷ್ಣು ಇಲ್ಲಿನ ಪ್ರದಾನ ದೇವರುಗಳು. ಹೀಗೆ ಅಪರೂಪದಲ್ಲಿ ಅಪರೂಪೆನಿಸಿಕೊಂಡ
ಈ ದೇವಾಲಯವು ತನ್ನದೇ ಆದಂತಹ ರಾಜವೈಭವದ ಪರಂಪರೆಯನ್ನು ಹೊಂದಿದೆ.
ಇಂದು ದೇವಾಲಯ ಇರುವ
ಈ ಸ್ಥಳವು ಹಿಂದೆ ದೊಡ್ಡ ಮರ-ಗಿಡಗಳಿಂದ ಕೂಡಿದ ಹಾಡಿ ಅಂದರೆ ಕಾಡು (ಪಾಡಿ-ತುಳು) ಆಗಿತ್ತಂತೆ. ಇಲ್ಲಿ
ಬಂದು ನೆಲೆಸಿದ ಶಕ್ತಿದೇವಿಯಿಂದ ಇದು 'ಅಮ್ಮನ ಹಾಡಿ'
ಎಂದೂ, ಕಾಲಕ್ರಮೇಣ 'ಅಂಬಲಪಾಡಿ' (Ambalapadi) ಎಂದು ಕರೆಯಲ್ಪಟ್ಟಿತು ಎಂಬು ತಿಳಿದುಬರುತ್ತದೆ.
ಇಲ್ಲಿ ಹಿಂದೆ ದೇವಿಯ ಗುಡಿ ಮಾತ್ರ ಇದ್ದು ಇಲ್ಲಿ ಬಂದು ನೆಲೆಸಿದ ಬಲ್ಲಾಳರ (Ballala) ಕುಟುಂಬದ ಆರಾಧ್ಯ ದೇವರಾದ ಜನಾರ್ಧನನ್ನು ಇಲ್ಲಿ ಪ್ರತಿಷ್ಠಾಪಿಸಿದರು. ಅಂದಿನಿಂದ ಇಲ್ಲಿ ಶ್ರೀ ಮಹಾಕಾಳಿ ಮತ್ತು ಶ್ರೀ ಮಹಾವಿಷ್ಣು ಜೊತೆಯಾಗಿ
ಪೂಜೆಗೊಳ್ಳುತ್ತಾ ಇದ್ದಾರೆ.
ಹಿಂದೆ 'ನಿಡಂಬೂರು ಬೀಡು' ಎಂಬ ಅರಮನೆಯ ಎಂಟು ಗ್ರಾಮಗಳ
ಕೂಟವಾದ ನಿಡಂಬೂರು ಮಾಗಣೆಯನ್ನು ಆಳುತ್ತಿದ್ದ ಬಂಗ
ವಂಶದ ಜೈನರು ತಮಗೆ ಸಹಕಾರ ಮಾಡಿದ ಕಂದಾವರದ ಉಡುಪ
ಕುಟುಂಬಕ್ಕೆ ಸಕಲವನ್ನು ನೀಡಿ ಇಲ್ಲಿಂದ ನಿರ್ಗಮಿಸಿದರು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ.
ಹೀಗೆ ಜೈನರ ಬೀಡು ಪ್ರವೇಶ ಮಾಡಿದ ಉಡುಪರು ಬಲ್ಲಾಳರಾದರು.
ಈ ಬಲ್ಲಾಳ ವಂಶದವರೆ ಇಂದು ಪ್ರಸ್ತುತ ದೇವಾಲಯದ ಆಡಳಿತವನ್ನು ನೋಡಿಕೊಂಡು ಹೋಗುತ್ತಿರುವುದು.
ಈ ತೆರನಾಗಿ ಸುಂದರವಾದ
ಶ್ರೀ ಜನಾರ್ಧನನ ವಿಗ್ರಹವೂ ಕಾಣಲು ಅತ್ಯಾಕರ್ಷಕವೂ ಆಗಿ ಭಕ್ತಿ ರಸವನ್ನು ನಮ್ಮಲ್ಲಿ ಬರುವಂತೆ ಮಾಡುತ್ತದೆ.
ಹೀಗೆ ದುಷ್ಟ ಸಂಹಾರಿಣಿ ಮಹಾಕಾಳಿಯ ಗುಡಿಯು ಇತ್ತಿಚೆಗೆ ನವೀಕರಣಗೊಂಡು ಸುಂದರವಾಗಿ ಕಂಗೊಳಿಸುತ್ತಿದೆ.
ದೇವಿಯ ಮಂದಿರವು ಕಡಲಿಗೆ ಮುಖಮಾಡಿದ್ದು, ದೇವಿಯ ಬಿಂಬವು ಮರದಿಂದ ಮಾಡಿದ ಮೂರ್ತಿಯಾಗಿದೆ. ಶಂಕ-ಚಕ್ರ-ಕಪಾಲ-ಖಡ್ಗ
ಧರಿಸಿರುವ ದೇವಿಯು ಉಗ್ರ ಸ್ವರೂಪದಲ್ಲಿ ಕಂಡು ಬಂದರೂ, ಭಕ್ತರಿಗೆ ಸೌಮ್ಯಸ್ವರೂಪಿಯೂ-ಅಭಯದಾಯಿನಿಯೂ
ಆಗಿ ಕಂಡುಬರುತ್ತಾಳೆ. ಹೀಗೆ ಮಾಘ ಶುದ್ಧ ದ್ವಾದಶಿಯಿಂದ ಬಹುಳ ಪಂಚಮಿಯವರೆಗೆ ಇಲ್ಲಿ ವಾರ್ಷಿಕ ಮಹೋತ್ಸವಗಳು
ನಡೆಯುತ್ತದೆ. ಇಲ್ಲಿ ಅನಂತರ ಬಂದ ಜನಾರ್ಧನನೆ ಪ್ರದಾನವೆಂದು ಪರಿಗಣಿತವಾಗಿಯೂ, ವೈಷ್ಣವಾಗಮ ಪದ್ದತಿಯಂತೆ
ಪೂಜಾದಿಗಳು ನಡೆದುಕೊಂಡು ಬರುತ್ತಿದೆ. ರಥೋತ್ಸವದ ದಿನ ರಥಾರೂಢನಾಗಿ ಬಂದ ತನ್ನ ಅಣ್ಣನನ್ನು ಮಹಾಕಾಳಿ
ಸ್ವಾಗತಿಸಿ ಒಳಕರೆದು, ತನ್ನ ಅಣ್ಣನ ಎದುರಲ್ಲೇ ಆವೇಶಗೊಳ್ಳುತ್ತಾಳೆ. (ಪಾತ್ರಿಯ ಮೂಲಕ)
ಅದೇ ರೀತಿಯಲ್ಲಿ
ಮುಂಜಾನೆ 5.00ರಿಂದ ಮಧ್ಯಾಹ್ನ 12.30ರ ತನಕ, ಹಾಗೂ 3.00ರಿಂದ ರಾತ್ರಿ 8.00ರ ತನಕ
ಅಮ್ಮನವರ ಹಾಗೂ ಸ್ವಾಮಿಯ ಮಂದಿರವು ತೆರೆದಿರುತ್ತದೆ. ಪ್ರತೀ ಶುಕ್ರವಾರದಂದು ಅಮ್ಮನವರ ದರ್ಶನ ಸೇವೆಯು ನಡೆಯುತ್ತದೆ. ಅಲ್ಲದೆ ಅಂದು ಸಾರ್ವಜನಿಕ
ಅನ್ನದಾನ ಕೂಡಾ ಭಕ್ತರಿಗೆ ವಿನಿಯೋಗವಾಗುತ್ತದೆ. ಈ ದೇವಾಲಯ 6ನೇ ಶತಮಾನದಿಂದ ಶಿವಳ್ಳಿ ಬಲ್ಲಾಳ ಕುಟುಂಬದವರಿಂದ
ನಡೆದುಕೊಂಡು ಬಂದಿದೆ.
ಹೀಗೆ ದೇವಿಯನ್ನು
ಅಲಂಕಾರ ಮಾಡಿದ ನಂತರ ದೇವಿಯನ್ನು ಕಾಣುವುದೇ ಒಂದು ಸ್ವರ್ಗಸಮಾನವಾದ ಆನಂದ. ಶ್ರೀ ದೇವಿಯನ್ನು ಇತರ
ಸಂದರ್ಭದಲ್ಲಿ ನಾವು ದೇವಾಲಯದ ಒಂದು ಚಿಕ್ಕ ಕಿಂಡಿಯಲ್ಲಿ ಕಾಣಬಹುದು. ಅಲ್ಲಿ ಒಂದು ಪ್ರತಿಫಲನ ಕನ್ನಡಿಯನ್ನು
ಇರಿಸಲಾಗಿದ್ದು ಅದರ ಮೂಲಕ ನಾವು ಅಮ್ಮನವರನ್ನು ಕಾಣಬಹುದು. ಈ ದೇವಾಲಯವು ಸುಂದರ ಶಿಲಾಮಯವಾಗಿ ರೂಪುಗೊಂಡಿದ್ದು
ನೋಡಲು ಚಿತ್ತಾಕರ್ಷಕವಾಗಿದೆ. ಅಮ್ಮನವರ ದೇವಾಲಯದ ಸುತ್ತಲೂ ನವದುರ್ಗೆಯರ ಮೂರ್ತಿಗಳನ್ನು ಬಹಳ ನಾಜೂಕಾಗಿ
ಕೆತ್ತಲಾಗಿದ್ದು, ಸರ್ವಶಕ್ತಿಯಾದ ಪರಮೇಶ್ವರಿಯ ಸಕಲ ಮಾಯಾಶಕ್ತಿಯ ದರ್ಶನವನ್ನು ನಾವು ಮಾಡಬಹುದು.
ಇಲ್ಲಿ ನವಗ್ರಹ ಹಾಗೂ ಆಂಜನೇಯ ಸ್ವಾಮಿಯ ಗುಡಿ ಇರುವುದನ್ನು ಕಾಣಬಹುದು. ಶ್ರೀ ಜನಾರ್ಧನ ದೇವರ ಮಂದಿರದ
ಬಾಗಿಲ ಬಳಿ ಒಂದು ಅಚ್ಚರಿ ನಡೆದ ಕುರುಹಾಗಿ ದುರ್ಗೆಯ ಒಂದು ಪುಟ್ಟ ವಿಗ್ರಹವಿದೆ. ಹಿಂದೊಮ್ಮೆ ಉರಿಬಿಸಿಲಿನಲ್ಲಿ
ಅಮ್ಮನನ್ನು ಕಾಣಲು ಬಂದ ಓರ್ವ ಗರ್ಭಿಣಿಗೆ ದೇವಿಯ ದರ್ಶನ ಮಾಡಲು ಆಗಲಿಲ್ಲವಂತೆ. ಅಂದರೆ ಆ ವೇಳೆಗಾಗಲೆ
ದೇವಾಲಯದ ಬಾಗಿಲು ಹಾಕಲಾಗಿತ್ತು. ಆ ಸ್ತ್ರೀ ಅಮ್ಮನನ್ನು ಕಾಣಲೇ ಬೇಕು ಎಂಬ ತುಡಿತದಿಂದ ಬಂದು, ಅವಳಲ್ಲೆ
ಧ್ಯಾನಿತಳಾದಾಗ ದೇವಿಯು ಶ್ರೀ ಜನಾರ್ಧನ ದೇವರ ಮುಂಬಾಗದ ಬಾಗಿಲ ಬಳಿ ಪ್ರತ್ಯಕ್ಷಳಾದಳು ಎಂಬುದು ಪ್ರತೀತಿ.
ಹೀಗೆ ಆದಿಮಾಯೆಯಾದ
ಮಹಾಕಾಳಿಯನ್ನು, ಲೋಕಪಾಲಕನಾದ ಶ್ರೀ ಜನಾರ್ಧನನ್ನು ಕಂಡು ನಮ್ಮ ಜೀವನವನ್ನು ನಾವು ಪಾವನಮಯವಾಗಿಸಿಕೊಳ್ಳೋಣ.
ಜಗದ್ದೋದ್ಧಾರಕ ಶ್ರೀ ಕೃಷ್ಣನ ಸೋದರಿ ಕಾಳಿಕೆಯ(ಪಾರ್ವತಿ) ಕಂಡು ಕೃತಾರ್ಥರಾಗೋಣ.
ವಿಳಾಸ :-
ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನ,
ಅಂಬಲಪಾಡಿ, ಉಡುಪಿ ಜಿಲ್ಲೆ ||