Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Shree Udhbhava Siddivinayaka Temple, Nukyadi, Ampar Village |
ಶ್ರೀ ಉದ್ಭವ ಸಿದ್ಧಿವಿನಾಯಕ ದೇವಸ್ಥಾನ, ನುಕ್ಯಾಡಿ, ಅಂಪಾರು ಗ್ರಾಮ, ಕುಂದಾಪುರ ತಾ||

Shree Udhbhava Siddivinaya, Nukyadi, Ampar Village

            ಕುಂದಾಪುರ ತಾಲೂಕಿನ ಅಂಪಾರು ಗ್ರಾಮದಲ್ಲಿರುವ ನುಕ್ಯಾಡಿ ಶ್ರೀ ಉದ್ಭವ ಸಿದ್ಧಿವಿನಾಯಕ ದೇವಸ್ಥಾನ (Nukyadi Shree Siddivinayaka Temple) ಪ್ರಾಕೃತಿಕ ಸೌಂದರ್ಯವನ್ನು ತನ್ನೊಡಲೊಳಗೆ ಅಡಗಿಸಿಕೊಂಡಿರುವಂಥ ಸುಂದರ ಪ್ರಕೃತಿದೇವಿಯ ರುದ್ರರಮಣೀಯ ಪುಣ್ಯಕ್ಷೇತ್ರದ ಸಾಲಿನಲ್ಲಿ ಸೇರುತ್ತದೆ. ನಾವು ಈ ದೇವಾಲಯವನ್ನು ತಲುಪುವಾಗ ನಮ್ಮ ಕಣ್ಮುಂದೆ ಹಾದು ಹೋಗುವ ಸುಂದರ ವನಸಿರಿ, ನಡೆಯುತ್ತಾ-ನಡೆಯುತ್ತಾ ಸುತ್ತಲೂ ಕಣ್ಣು ಹಾಯಿಸಿದರೆ ಪ್ರಶಾಂತತೆಯ ಮುಗ್ಧ ಅನುಭವವಾಗುತ್ತದೆ. ಅಲ್ಲದೆ ಬೆಟ್ಟದ ತುದಿಯಲ್ಲಿ ನೆಲೆಸಿ ನಿಂದಿರುವ ಕಾರಣೀಕ ಶ್ರೀ ಸಿದ್ಧಿವಿನಾಯಕನ ದರ್ಶನಮಾಡಿದರಂತೂ ನಮ್ಮ ಆಯಾಸಕ್ಕೆ ಅಮೃತ ಕೊಟ್ಟಂತ ಅನುಭವವಾಗುತ್ತದೆ. ಈ ದೇವಾಲಯವು ಸಮುದ್ರ ಮಟ್ಟದಿಂದ ಸರಿಸುಮಾರು 300 ಅಡಿಗಳಷ್ಟು ಎತ್ತರದಲ್ಲಿದೆ. ಸುಂದರ ಕಾನನದ ಮದ್ಯೆ, ನುಕ್ಯಾಡಿ(Nukyadi) ಬೆಟ್ಟದ ತುತ್ತತುದಿಯಲ್ಲಿ ನೆಲೆಸಿರುವ ಶ್ರೀ ಗೌರಿಸುತ ವಿನಾಯಕನು ಅತೀ ಸುಂದರಾತೀ ಸುಂದರವಾಗಿ ಇಲ್ಲಿ ಉದ್ಭವ ರೂಪದ ಬಿಂಬದಲ್ಲಿ ನೆಲೆಸಿದ್ದಾನೆ.
          ಶ್ರೀ ದೇವಳದ ಬಗ್ಗೆ ಪೌರಾಣೀಕ ಹಿನ್ನಲೆಯ ಮಾಹಿತಿ ಇನ್ನೂ ಲಭ್ಯವಿಲ್ಲದಿದ್ದರೂ ಕೂಡಾ ಈ ದೇವಸ್ಥಾನ ತನ್ನದೇ ಆದಂತಹ ಇತಿಹಾಸವನ್ನು ಹೊಂದಿದೆ. ಸರಿಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯದಲ್ಲಿ ಶ್ರೀ ವಿನಾಯಕ ದೇವರು ಹಿಂದೆ ಋಷಿಮುನಿಗಳ ತಪದ ಫಲವಾಗಿ ಉದ್ಭವಿಸಿದ್ದು ಎಂಬುದಾಗಿ ಇಲ್ಲಿನ ಅರ್ಚಕರಿಂದ ತಿಳಿದುಬರುತ್ತದೆ. ಕಾಲಕ್ರಮೇಣ ಮುಂದೆ ಇಲ್ಲಿಗೆ ವಲಸೆ ಬಂದಂಥಹ ಬ್ರಾಹ್ಮಣ ಸಮುದಾಯದ 'ಬಿಳಿಯ' ಎಂಬ ಮನೆತನದವರು ಇಲ್ಲಿನ ಕಾನನದಲ್ಲಿ ಸೊಪ್ಪು-ಸದೆ ತರಲೆಂದು ಹೋದಾಗ ನುಕ್ಯಾಡಿಯ ದಟ್ಟ ಕಾನನದ ತುತ್ತು ತುದಿಯಲ್ಲಿ ಶ್ರೀ ಸಿದ್ಧಿವಿನಾಯಕನ ಪುಟ್ಟ ಮುಳಿಹುಲ್ಲಿನ ದೇವಾಲಯ ಗೋಚರಿಸಿತಂತೆ. ಇದನ್ನು ಕಂಡ 'ಬಿಳಿಯ' ಮನೆತನದವರಿಗೆ ಶ್ರೀ ವಿನಾಯಕನ ಪ್ರೇರಣೆಯಾಗಿ ಮುಂದೆ ಆ ಕುಟುಂಬದವರು ಇಲ್ಲಿ ಶ್ರೀ ದೇವರ ಪೂಜಾ-ಕೈಂಕರ್ಯದಲ್ಲಿ ತೊಡಗಿಸಿಕೊಂಡರಂತೆ. ಹೀಗೆ ತರುವಾಯ ಇವರು ಇಲ್ಲಿಂದ ಬೆರೆಡೆಗೆ ವಲಸೆ ಹೋದರಂತೆ.
          ಹೀಗೆ ಇಲ್ಲಿಂದ ಹಿಂದಿನ 'ಬಿಳಿಯ' ಮನೆತನದವರು ವಲಸೆ ಹೋದ ನಂತರ ಇಲ್ಲಿಗೆ 'ಐತಾಳ' ವಂಶದವರು ಬಂದು ನೆಲೆಸುತ್ತಾರೆ. ಇವರು ಕೆಲಸಮಯದ ತನಕ ಪೂಜಾಕೈಂಕರ್ಯವನ್ನು ನಡೆಸಿಕೊಂಡು ಬರುತ್ತಾರೆ. ಹೀಗೆ ದೇವಳದ ಒಳಗಡೆ ಒಂದು ಚಿಕ್ಕ ತೀರ್ಥಬಾವಿ ಇದ್ದು ಅದನ್ನು ದೊಡ್ಡದಾಗಿ ಮಾಡುವ ಉದ್ದೇಶದಿಂದ ಬಾವಿಯನ್ನು ದೊಡ್ಡದಾಗಿ ಮಾಡುವ ಕಾರ್ಯದಲ್ಲಿ ತೊಡಗುತ್ತಾರೆ. ಆದರೆ ಈ ಕಾರ್ಯ ದೇವರ ಕೋಪಕ್ಕೆ ಕಾರಣವಾಗಿ ತೀರ್ಥಬಾವಿಯು ಸಂಪೂರ್ಣ ಹಾಳಾಗುತ್ತದೆ. ಹಾಗೂ ಈ ಕುಟುಂಬ ಬಹಳವಾಗಿ ಕಷ್ಟ-ನಷ್ಟವನ್ನು ಅನುಭವಿಸುವಂತಾಗುತ್ತದೆ. ಅಂದಿನಿಂದ ಗರ್ಭಗುಡಿಯ ಒಳಗಡೆ ಇರುವ ತೀರ್ಥಬಾವಿಯ ನೀರು ಹಾಳಾಗಿ ಹೋಯಿತಂತೆ.
          ಹೀಗೆ 'ಐತಾಳ' ವಂಶಜರ ನಂತರ ಬಂದವರೆ 'ಅಡಿಗ' ಮನೆತನದವರು. ಸರಿಸುಮಾರು 1890ರಲ್ಲಿ 'ಮೊಗೆಬೆಟ್ಟು ನಿವಾಸಿಯಾದ ಕೋಟೇಶ್ವರ ಅಡಿಗ' ಎಂಬವರು ನುಕ್ಯಾಡಿಗೆ ಬಂದು ನೆಲೆಸುತ್ತಾರೆ. ಇವರು ಬಂದ ನಂತರ ಇಲ್ಲಿನ ಪೂಜಾ ಕಾರ್ಯವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ನಂತರ 1930ರಿಂದ 1992ರ ತನಕ 'ನರಸಿಂಹ ಅಡಿಗ' ರವರು ಪೂಜೆಯನ್ನು ನಡೆಸಿಕೊಂಡು ಹೋಗುತ್ತಾರೆ. ಪ್ರಸ್ತುತ 1992ರಿಂದ ಸೂರ್ಯನಾರಾಯಣ ಅಡಿಗರವರು ಇಲ್ಲಿನ ಪೂಜೆ ನಡೆಸಿಕೊಂಡು ಬರುತ್ತಿರುವ ಮುಖ್ಯ ಅರ್ಚಕರಾಗಿದ್ದಾರೆ. ಇವರ ಪುತ್ರ 'ವಿಘ್ನರಾಜ ಅಡಿಗ' ಇಂದು ಇತರ ದಿನದಲ್ಲಿ ಇಲ್ಲಿ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
          ಈ ದೇವಾಲಯವು 2004ರ ಮೇ ತಿಂಗಳಿನಲ್ಲಿ ಊರವರ ಸಹಕಾರ ಹಾಗೂ ದಾನಿಗಳ ಸಹಕಾರದಿಂದ ಜೀರ್ಣೋದ್ದಾರವಾಗಿ ಸುಂದರ ಶಿಲಾಮಯ ಗರ್ಭಗುಡಿ ನಿರ್ಮಾಣವಾಗಿದ್ದು, ಅತ್ಯಂತ ಕಲಾತ್ಮಕವಾಗಿ ದೇವಳವನ್ನು ನಿರ್ಮಾಣ ಮಾಡಲಾಗಿದೆ. ಈ ದೇವಾಲಯವು ಪಶ್ಚಿಮಾಭಿಮುಖವಾಗಿದ್ದು ಚಿಕ್ಕ ಗುಡಿಯಾದರೂ, ನೋಡಲು ಚಿತ್ತಾಕರ್ಷಕವಾಗಿ ಕಾಣಿಸುತ್ತದೆ. ಇನ್ನೂ ಹಲವಾರು ಜೀರ್ಣೋದ್ದಾರ ಕಾರ್ಯಗಳು ನಡೆಯಬೇಕಿದ್ದು ದೇವಳದ ಮುಂಭಾಗದ ಹೆಬ್ಬಾಗಿಲು ಪೌಳಿಯ ನವೀಕರಣ ಮಾಡುವ ಉದ್ದೇಶವನ್ನು ಹೊಂದಿದ್ದು ಭಕ್ತರ ಸಹಕಾರವು ಅವಶ್ಯಕವಾಗಿ ಬೇಕಾಗಿದೆ. ಮಣ್ಣಿನ ರಸ್ತೆಯಿದ್ದು ಸುಸಜ್ಜಿತ ರಸ್ತೆ ವ್ಯವಸ್ಥೆ ಆದಲ್ಲಿ ಖಂಡಿತಾ ಈ ಕ್ಷೇತ್ರ ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಲ್ಲಿ ಪ್ರತೀ ವರ್ಷ ಮೇ ತಿಂಗಳ ಶುಭ ನಕ್ಷತ್ರದಂದು ವಾರ್ಷಿಕ ಪ್ರತಿಷ್ಠಾ ಉತ್ಸವವು ಬಹಳ ವಿಜೃಂಭಣೆಯಿಂದ ನಡೆಯುತ್ತದೆ.
          ಇಲ್ಲಿ ಶ್ರೀ ಸಿದ್ಧಿವಿನಾಯಕನಿಗೆ ಹೆಚ್ಚಾಗಿ ಗಂಟೆಯನ್ನು ಅರ್ಪಿಸುವ ಪದ್ದತಿ ಇದ್ದು ದೇವಳದ ಸುತ್ತ ನೂರಾರು ಗಂಟೆಯನ್ನು ಕಟ್ಟಿರುವುದನ್ನು ನಾವು ಕಾಣಬಹುದು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ಗಂಟೆಯನ್ನು ದೇವರಿಗೆ ಅರ್ಪಣೆ ಮಾಡುತ್ತಾರೆ. ಅಲ್ಲದೆ ಇಲ್ಲಿ ಪ್ರತೀ ಸಂಕಷ್ಟಿ(ಶುದ್ಧ/ಬಹುಳ) ಯಂದು 'ಗಣಹೋಮ' ನಡೆಯುತ್ತದೆ. ಅಲ್ಲದೆ ಶ್ರೀ ವಿನಾಯಕನ ಪ್ರೀತ್ಯರ್ಥ ಮೂಡುಗಣಪತಿ, ರಂಗಪೂಜೆ, ಸಂಕ್ರಾಂತಿ ಪೂಜೆ, ಸತ್ಯನಾರಾಯಣ ಪೂಜೆ, ಸೋಣೆಯಾರತಿ ಸೇವೆ ನಡೆಯುತ್ತದೆ. ಚೌತಿಯಂದು ಇಲ್ಲಿ ವಿಶೇಷ ಪೂಜಾದಿಗಳೊಂದಿಗೆ ಗಣಹೋಮಾದಿಗಳು ನಡೆಯುತ್ತದೆ.
          ಹೀಗೆ ಈ ದೇವಾಲಯದಲ್ಲಿ ಪರಿವಾರ ಶಕ್ತಿಯಾಗಿ 'ಬೊಬ್ಬರ್ಯ' ದೈವವಿದ್ದು ಪ್ರತೀ ಸಂಕ್ರಾಂತಿಗೆ ಇಲ್ಲಿ ಹಣ್ಣು-ಕಾಯಿ ಸಮರ್ಪಣೆ ನಡೆಯುತ್ತದೆ. ಇಲ್ಲಿ ಸುತ್ತ-ಮುತ್ತಲೂ ಇರುವ ನೆಲ್ಲಿ ಮರಗಳು ಪೃಕೃತಿ ಪ್ರಿಯರನ್ನು ಕಂಡಿತಾ ಮಂತ್ರಮುಗ್ಧರನ್ನಾಗಿಸದೇ ಇರದು. ಅಲ್ಲದೇ ನಾವು ಇಲ್ಲಿ ಕಾಡುಕೋಣ ಇತ್ಯಾದಿ ವನ್ಯಮೃಗಗಳನ್ನು ಕಣ್ಣಾರೆ ಕಾಣಬಹುದಾಗಿದೆ. ಈ ದೇವಾಲಯವು ಸಮುದ್ರ ಮಟ್ಟದಿಂದ ಸರಿಸುಮಾರು 300 ಅಡಿಗಳಷ್ಟು ಎತ್ತರದಲ್ಲಿದೆ.
          ವನಸಿರಿಯ ಮದ್ಯೆ ನೆಲೆಸಿ ನಿಂದಿರುವ ಶ್ರೀ ವಿನಾಯಕನ ದರ್ಶನ ನೀವೂ ಒಮ್ಮೆ ಮಾಡಿ, ಶ್ರೀ ವಿನಾಯಕನ ಕೃಪೆಗೆ ಪಾತ್ರರಾಗುವುದು ಮಾತ್ರವಲ್ಲದೆ ಇಲ್ಲಿನ ಸುಂದರ ಪ್ರಕೃತಿ ಮಾತೆಯ ಸೌಂದರ್ಯವನ್ನು ಸ್ವತಃ ಅನುಭವಿಸಿ, ಪ್ರಸನ್ನರಾಗಿ.

ವಿಳಾಸ : -
          ಶ್ರೀ ಉದ್ಭವ ಸಿದ್ಧಿವಿನಾಯಕ ದೇವಸ್ಥಾನ,
          ನುಕ್ಯಾಡಿ, ಅಂಪಾರು ಗ್ರಾಮ, ಕುಂದಾಪುರ ತಾ||

ದಾರಿಯ ವಿವರ : ತಾಲೂಕು ಕೇಂದ್ರ ಕುಂದಾಪುರದಿಂದ ಅಂಪಾರು ಜಂಕ್ಷನ್ನಿಂದ ಸರಿಸುಮಾರು 3.5ಕಿ.ಮಿ. ಕ್ರಮಿಸಿದರೆ ದೇವಳದ ಸ್ವಾಗತಗೋಪುರ ನಮಗೆ ಕಾಣಸಿಗುತ್ತದೆ. ಅಲ್ಲಿಂದ ನಾವು ಬೆಟ್ಟವನ್ನು ತಲುಪಲು ಸರಿಸುಮಾರು 2.5ಕಿ.ಮಿ ಸಾಗಿದರೆ ಬೆಟ್ಟದ ತುದಿಯಲ್ಲಿ ದೇವಳ ಕಂಗೊಳಿಸುತ್ತದೆ. (ದೇವಳಕ್ಕೆ ತೆರಳುವವರು ಬೆಳಿಗ್ಗೆ 10.00ರಿಂದ ಮಧ್ಯಾಹ್ನ 12.30ರ ತನಕ ತೆರಳಬೇಕು. ಇನ್ನಿತರ ಹೊತ್ತಿನಲ್ಲಿ ದೇವಳ ತೆರೆದಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ಇಲ್ಲಿನ ಅರ್ಚಕರ ಮೊಬೈಲ್ ಸಂಖ್ಯೆಯನ್ನು ನೀಡಲಾಗಿದ್ದು, ತಾವೂ ಅವರನ್ನು ಸಂಪರ್ಕಿಸಬಹುದು.)


ಹೆಚ್ಚಿನ ಮಾಹಿತಿಗಾಗಿ :-
• ಸೂರ್ಯನಾರಾಯಣ ಅಡಿಗ - 9740557975
• ವಿಘ್ನರಾಜ ಅಡಿಗ - 9449572637