Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Shree Sharadamba Temple, Sringeri, Chikmagalur Dist.
ಶ್ರೀ ಶಾರದಾಂಬಾ ದೇವಸ್ಥಾನ, ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ||


Shree Sharadamba Ammanavaru, Sringeri
               ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಹಲವಾರು ಪ್ರಸಿದ್ಧ ದೇವಾಲಯಗಳ ಸಾಲಿನಲ್ಲಿ ವಿದ್ಯಾಧಿದೇವತೆ ತುಂಗಾ ತೀರ ನಿವಾಸಿನಿ ಶೃಂಗೇರಿ ಶ್ರೀ ಶಾರದಾಂಬೆಯ(Sringeri Shree Sharadamba) ಸನ್ನಿಧಿಯು ಬಹು ವಿಶೇಷತೆಗಳನ್ನೊಳಗೊಂಡ ಕ್ಷೇತ್ರವಾಗಿದೆ. ಶ್ರೀ ಆದಿಶಂಕರರಿಂದ(Adhishankara) ಪ್ರತಿಷ್ಠಾಪನೆಗೊಂಡ ಜ್ಞಾನದೇವತೆ ಶ್ರೀ ವಾಣಿ ನೆಲೆಸಿದ ಪುಣ್ಯ ತಾಣವೇ ಶೃಂಗೇರಿ. ಇಲ್ಲಿ ಶ್ರೀ ವಿದ್ಯಾಶಂಕರ(VidyaShankara)  ದೇವಾಲಯವಿದ್ದು ಇದು ನಮ್ಮ ಹೆಮ್ಮೆಯ ಭಾರತೀಯ ವಾಸ್ತುಶೈಲಿ ಮತ್ತು ಕಲೆಗೆ ಕನ್ನಡಿ ಹಿಡಿದಂತಿದೆ. ಹಲವಾರು ಕೆತ್ತನೆಗಳೊಂದಿಗೆ ಸುಂದರವಾದ ಕಲ್ಲಿನಿಂದಲೇ ನಿರ್ಮಿಸಲಾದ ಸುಂದರ ದೇವಾಲಯವಾಗಿದೆ. ಇಲ್ಲಿ ಶಿವನೊಂದಿಗೆ ಶಕ್ತಿದೇವತೆ ಪಾರ್ವತಿ ಅಮ್ಮನವರೂ ಮತ್ತು ಗೌರಿಸುತ ವಿನಾಯಕ ಕೂಡಾ ಇದ್ದಾರೆ. ಶಿವಶಕ್ತಿಯ ಜೊತೆಯಲ್ಲಿ ಮಂಗಳ ಸ್ವರೂಪಿಣಿ ಬ್ಮಹ್ಮನ ರಾಣಿ ಶ್ರೀ ಶಾರದೆ ವಿರಾಜಮಾನಳಾಗಿ ನಿಂದಿದ್ದಾಳೆ.
          ಈ ಸ್ಥಳವು ಪುರಾಣದಲ್ಲಿ ಶೃಂಗಗಿರಿ ಎಂದು ಪ್ರಸಿದ್ಧಿಯನ್ನು ಪಡೆದಿತ್ತು. ಪುರಾಣದ ಅನುಸಾರ ಇಲ್ಲಿ
ಋಷ್ಯಶೃಂಗರು ತಪಗೈದ ಸ್ಥಳವಾಗಿದ್ದು, ಇವರು ಶೃಂಗ(ಕೊಂಬು) ಹೊಂದಿದ ಕಾರಣದಿಂದ ಇವರು ತಪಗೈದ ಈ ಭೂಮಿ ಮುಂದೆ 'ಶೃಂಗೇರಿ' ಎಂದು ಆಗಿರಬಹುದು ಎಂದು ಒಂದು ಅಭಿಪ್ರಾಯವಾದರೆ, ಇಲ್ಲಿನ ಗಿರಿಗಳು ಗೋವುಗಳ ಶೃಂಗ(ಕೋಡು)ವನ್ನು ಹೋಲುವುದರಿಂದ ಈ ಊರನ್ನು 'ಶೃಂಗೇರಿ' ಎಂದು ಕರೆಯಲಾಗುತ್ತದೆ ಎಂಬುದು ಇನ್ನೊಂದು ನಂಬಿಕೆ. ಏನೆ ಆದರೂ ಜಗನ್ಮಾತೆ ಶ್ರೀ ಶಾರದಾಂಬೆ ಸ್ಥಿತಳಾದ ಈ ಪುಣ್ಯ ಧರೆಯು ನಿಜಕ್ಕೂ ಪರಮಪವಿತ್ರ ಕ್ಷೇತ್ರ. ಇಲ್ಲಿ ಇಂದಿಗೂ ಗುರುಪರಂಪರೆಯನ್ನು ಕಾಣಬಹುದು. ಹಿಂದಿನಿಂದ ನಡೆದು ಬಂದ ಗುರುಪರಂಪರೆಯು ಇಂದಿಗೂ ಹಲವಾರು ಪಾರಂಪರಿಕ ಕುಟುಂಬಗಳಿಗೆ ಗುರುಪೀಠವಾಗಿ ನಡೆದುಬಂದಿದೆ.
          ಶ್ರೀ ಕ್ಷೇತ್ರದಲ್ಲಿ ಶ್ರೀ ವಿದ್ಯಾಶಂಕರ ಮತ್ತು ಶ್ರೀ ಶಾರದಾಂಬೆ ಗುಡಿಗಳೊಂದಿಗೆ ಹಲವಾರು ದೇವರುಗಳ ಸಾನ್ನಿಧ್ಯವಿದೆ. ಶಕ್ತಿಗಣಪತಿ, ತೋರಣಗಣಪತಿ, ಕಾಲಭೈರವ, ಹರಿಹರೇಶ್ವರ, ಆಂಜನೇಯ, ದುರ್ಗಾಂಬಾ, ಕಾಳಿಕಾಂಬಾ, ರತ್ನಗರ್ಭಗಣಪತಿ ಇನ್ನೂ ಹಲವಾರು ಗುಡಿಗಳಿವೆ.
          ಹಿಂದೆ ಆದಿಶಂಕರರಿಂದ ನಿರ್ಮಾಣವಾದ ಈ ಸುಂದರ ದೇವಾಯಲ ಇಂದು ಜಗದಗಲ ತಮ್ಮ ಭಕ್ತರನ್ನು ಹೊಂದಿದೆ. ಕರ್ನಾಟಕ, ಆಂದ್ರ, ತಮಿಳುನಾಡು, ಕೇರಳ ಹಾಗೂ ಉತ್ತರಭಾರತೀಯರೂ ಕೂಡಾ ಇಲ್ಲಿ ದೇವಿಯ ದರ್ಶನವನ್ನು ಪಡೆದು ಕೃತಾರ್ಥರಾಗುತ್ತಾರೆ. ಇದೇ ತೆರನಾಗಿ ಜ್ಞಾನರೂಪಿಣಿ ಶ್ರೀ ಶಾರದೆಯನ್ನು ಇಲ್ಲಿ ಶಂಕರರು ಪ್ರತಿಷ್ಠಾಪನೆ ಮಾಡಲು ಒಂದು ದಂತಕಥೆ ಇದೆ. ಹಿಂದೆ ತುಂಗಾತೀರದಲ್ಲಿ ಶಂಕರರು ಬರುತ್ತಿರುವಾಗ ಧಾರಾಕಾರ ಮಳೆಯಲ್ಲಿ ಒಂದು ಕಪ್ಪೆ ಪ್ರಸವವೇದನೆಯಿಂದ ನರಳುತ್ತಿರುವಾಗ ಹಾವೊಂದು ತನ್ನ ಹೆಡೆಯನ್ನು ಬಿಚ್ಚಿ ಆ ಗರ್ಭಿಣಿ ಕಪ್ಪೆಗೆ ರಕ್ಷಣೆ ನೀಡಿತ್ತಂತೆ. ಹೀಗೆ ವೈರಿಗಳು ಮಿತ್ರರಾಗಿರುವಂಥ ಈ ಪುಣ್ಯಭೂಮಿಯಲ್ಲಿ ದೇವಿ ಶಾರದೆಯನ್ನು ಶಂಕರರು ಪ್ರತಿಷ್ಠಾಪನೆಗೈದರು ಎಂಬುದು ತಿಳಿದುಬರುತ್ತದೆ. ಇಂದಿಗೂ ತುಂಗೆಯ ತಟದ ದಡದ ಮೇಲೆ ಕಪ್ಪೆ-ಹಾವುಗಳ ಒಂದು ಸ್ನೇಹಪೂರ್ವಕವಾದ ಶಿಲ್ಪವನ್ನು ಕಾಣಬಹುದು.
          ಇಲ್ಲಿನ ಇನ್ನೊಂದು ಆಕರ್ಷಣೆ ಎಂದರೆ ಇಲ್ಲಿನ ಝುಳು-ಝಳು ಹರಿಯುವ ತುಂಗೆಯ ಒಡಲಲ್ಲಿ
ದೊಡ್ಡ-ದೊಡ್ಡ ಕಪ್ಪು ಬಣ್ಣದ ಸುಂದರ ಮೀನುಗಳು. ಇವುಗಳನ್ನು ಕಾಣುವುದೇ ಒಂದು ಆನಂದ. ಇವುಗಳಿಗೆ ಇಲ್ಲಿ ಯಾತ್ರಿಕರು ಮುಂಡಕ್ಕಿಯನ್ನು ಹಾಕುವ ಪರಿಪಾಠವನ್ನು ನಾವು ಕಾಣುತ್ತೇವೆ. ಹೀಗೆ ಅಮ್ಮನವರ ದೇವಾಲಯದಿಂದ ತುಂಗೆಯ ಒಂದು ತೀರದಿಂದ ಇನ್ನೊಂದು ತೀರಕ್ಕೆ ಒಂದು ಸೇತುವೆ ಇದ್ದು, ಇಲ್ಲಿಂದ ನಾವು ಗುರುಗಳ ಮಠಕ್ಕೆ ತೆರಳಬಹುದು. ಇಲ್ಲಿ ಗೋಶಾಲೆ, ಗುರುಮಠ, ವೇದಶಾಲೆ ಮುಂತಾದವುಗಳನ್ನು ನಾವು ಕಾಣಬಹುದು.
          ದೇವಾಲಯದಲ್ಲಿ ನಾವು ನಿತ್ಯ ಪೂಜೆಯೊಂದಿಗೆ ಅನ್ನಪ್ರಸಾದವನ್ನು ಉಂಡು ತೃಪ್ತರಾಗಲು ಅನ್ನಪ್ರಸಾದ ವ್ಯವಸ್ಥೆ ಕೂಡಾ ಇದೆ. ಅಲ್ಲದೆ ಇಲ್ಲಿ ಯಾತ್ರಿ ನಿವಾಸ ಕೂಡಾ ಇದ್ದು, ಬರುವ ಭಕ್ತಾಧಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ಕೂಡಾ ಇದೆ. ಇಲ್ಲಿ ಮಕ್ಕಳಿಗೆ ವಿದ್ಯಾಸರಸ್ವತೀ ಪೂಜೆ ಮಾಡಿಸಿದರೆ ಮಕ್ಕಳು ವಿದ್ಯಾವಂತಿಕೆಯೊಂದಿಗೆ, ಬುದ್ದಿವಂತರಾಗುತ್ತಾರೆ ಎಂಬುದು ನಂಬಿಕೆ.
          ಅಮ್ಮನವರ ದೇವಾಲಯವು ವಿಶಾಲವಾಗಿದ್ದು ದೇವಾಲಯದ ಒಳಗಡೆ ಕರಿಶಿಲೆಯಲ್ಲಿ ನಿರ್ಮಿಸಿದ ಅಮ್ಮನವರ ಗರ್ಭಗುಡಿ ಅತೀ ಸುಂದರವಾಗಿದೆ. ದೇವಿಯ ಮೂಲಬಿಂಬವು ಪಂಚಲೋಹದ ವಿಗ್ರಹವಾಗಿದ್ದು ನಾಲ್ಕು ಕರದಲ್ಲಿ ಪುಸ್ತಕ, ಕುಂಭ, ಜಪಮಾಲೆ ಹಾಗೂ ಅಭಯಹಸ್ತಳಾಗಿ, ಪದ್ಮಾಸನ ಸ್ಥಿತಳಾಗಿ ಕುಳಿತ ಭಂಗಿಯಲ್ಲಿರುವ ದೇವಿಯ ಬಿಂಬವು ನೋಡಲು ಅತೀ ಸುಂದಾರಾತಿ ಸುಂದರವಾಗಿದೆ. ದೇವಿಗೆ ನವರಾತ್ರಿಯಲ್ಲಿ ನವವಿಧವಾದ ಅಲಂಕಾರವನ್ನು ಮಾಡಲಾಗುತ್ತದೆ. ಶ್ರೀ ಶಾರದಾಂಬೆಯ ಚಿನ್ನದ ವೀಣೆಯು ಅತ್ಯಂತ ಸೂಕ್ಷ್ಮ ಕೆತ್ತನೆಯನ್ನು ಹೊಂದಿದ್ದು ಚಿನ್ನದ ವೀಣೆಯನ್ನು ಪಿಡಿದ ಅಮ್ಮನವರನ್ನು ಕಾಣುವುದೇ ಏಳೆಳು ಜನ್ಮದ ಪುಣ್ಯವೆಂಬಂತೆ ಅನಿಸುತ್ತದೆ.
          ಜ್ಞಾನ ರೂಪಿಣಿ ಜಗನ್ಮಾತೆ ಶ್ರೀ ಶಾರದಾಂಬೆಯ ಚರಣಕಮಲಗಳಿಗೆ ನಮ್ಮ ಭಕ್ತಿಪೂರ್ವಕ ನಮನಗಳನ್ನು ಅರ್ಪಣೆ ಮಾಡೋಣ. ನಮ್ಮ ಜ್ಞಾನವನ್ನು ಬೆಳಗು ತಾಯೆ ಎಂದು ಬೇಡುತ್ತಾ ಅಮ್ಮನ ದರ್ಶನವನ್ನುಗೈಯ್ಯೋಣ. ಶ್ರೀ ಸಂಗೀತ ವಿಶಾರದೆ ಶಾರದೆ ನಿಮಗೆಲ್ಲರಿಗೂ ಜ್ಞಾನಾಮೃತವನ್ನು ನೀಡಿ ಹರಸಲಿ.

ವಿಳಾಸ :-
ಶ್ರೀ ಶಾರದಾಂಬಾ ದೇವಸ್ಥಾನ,
ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ||

ದಾರಿಯ ವಿವರ : ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ 90ಕಿ.ಮೀ ಅಂತರವಾದರೆ, ಕುಂದಾಪುರ ಮಾರ್ಗವಾಗಿ ಆಗುಂಬೆಗೆ ಸಾಗಿ ಅಲ್ಲಿಂದ ನಾವು ಶೃಂಗೇರಿಯನ್ನು ತಲುಪಬೇಕು.