Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Sri Kamalashile BramhiDurgaparameshwari Ammnavara Temple


Sri Brahmi Durgaparameshwari Temple, Kamalashile.

ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀ ದೇವಸ್ಥಾನ, ಕಮಲಶಿಲೆ.


|| ಸರ್ವ ಮಂಗಳ ಮಾಂಗಲ್ಯೇ ಶಿವೆ ಸರ್ವಾರ್ಥ ಸಾಧಕೆ, ಶರಣ್ಯೇ ತ್ರಯಂಬಿಕೆ ಗೌರಿ ನಾರಾಯಣಿ ನಮೋಸ್ತುತೆ ||
ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರು, ಕಮಲಶಿಲೆ
Sri BrahmiDurga ammanavaru, Kamalashile
ಕಲರ ಪಾಲಿಪ ಜಗನ್ಮಾತೆ ಶ್ರೀ ಬ್ರಾಹ್ಮೀ ದುರ್ಗೇಯ ಮಹಿಮೆ-ವಿಲಾಸಗಳ ಬಗ್ಗೆ ಸದ್ಬಕ್ತರಿಗೆ ತಲುಪಿಸುವ ಲೇಖನಕ್ಕೆ ಶ್ರೀ ದೇವಿಯ ಕೃಪೆ ಹಾಗೂ ಪ್ರೇರಣೆ ಕೂಡಿ ಬರಬೇಕೆಂಬುದು ಸತ್ಯದ ಸಂಗತಿ. ಶ್ರೀ ಬ್ರಾಹ್ಮೀ ದುರ್ಗೆಯು ತಾನೂ ‘ಕಮಲಶಿಲೆ’ ಯಲ್ಲಿ ಉದಿಸಿ ಶ್ರೀ ಬ್ರಾಹ್ಮೀ ದುರ್ಗೆಯಾಗಿ ಕುಬ್ಜಾ ನದಿ ತೀರದಲ್ಲಿ ನೆಲೆಸಿ ಬರುವ ಭಕ್ತರ ಪಾಲಿನ ಭಗವತಿಯಾಗಿ, ಸರ್ವರನ್ನು ಪೊರೆಯುವ ಭಾಗ್ಯದಾಯಿನಿ ಆಗಿ ಇಲ್ಲಿನ ಜನರ ತನು-ಮನದಲ್ಲಿ ನೆಲೆಯಾಗಿ ನಿಂದಿದ್ದಾಳೆ.

          ಶ್ರೀ ದೇವಿ ಬ್ರಾಹ್ಮೀ ದುರ್ಗೆಯು ಈ ಭಾಗದ ಜನರ ಮನೆದೇವತೆಯಾಗಿದ್ದಾಳೆ ಎಂದರೆ ತಪ್ಪಾಗಲಾರದು. ಮಾತೆಯು ಈ ಸ್ಥಳದ ಜನರ ತಾಯಿಯಂತೆ ಮಕ್ಕಳನ್ನು ಪೊರೆಯುತ್ತಾ ನಿಂದಿದ್ದಾಳೆ. ದೇವಿಯು ಕೇವಲ ಪೊರೆಯುವ ಕಾರ್ಯವಲ್ಲದೆ ಕಾರಣೀಕವನ್ನು ತೋರುತ್ತಾ ಅನ್ನಪೂರ್ಣೇಶ್ವರೀಯೂ, ಶಾಂತಿದಾಯಿನಿಯೂ ಆಗಿ ನಿಂದಿದ್ದಾಳೆ.
          ಜಗನ್ಮಾತೆ ಬ್ರಾಹ್ಮಿದುರ್ಗೆಯು ಇಲ್ಲಿನ ವನದುರ್ಗೆಯಾಗಿದ್ದಾಳೆ. ವನದ ಹಸಿರಿನಲ್ಲಿ ನೆಲೆಸಿನಿಂದ ದೇವಿಯ ಕ್ಷೇತ್ರವನ್ನು ಸಂದರ್ಶಿಸುವ ಭಕ್ತರಿಗೆ ರುದ್ರ-ರಮಣೀಯ ಪ್ರಕೃತಿಯ ಸೊಬಗು ಕಣ್ಣಿಗೆ ಬೀಳುತ್ತದೆ; ಮೈ ರೋಮಾಂಚನವಾಗುತ್ತದೆ. ಶ್ರೀ ದೇವಿಯನ್ನು, ಅವಳ ಅಲಂಕಾರವನ್ನು ಮತ್ತು ಮಹಾದೇವಿಯ ಮುಗ್ದಮಂದಸ್ಮಿತವಾದ ಮುದ್ದು ಮೊಗವನ್ನು ಎಷ್ಟು ಕಂಡರೂ ತೃಪ್ತಿಯೇ ಆಗಲಾರದಷ್ಟು ಅಮ್ಮನ ಮುಖಾರವಿಂದದಲ್ಲಿ ಅಷ್ಟೊಂದು ವರ್ಚಸ್ಸು ಹೊರ – ಹೊಮ್ಮುತ್ತದೆ.
       
   ಕಮಲಶಿಲೆಯು ಉಡುಪಿ ಜಿಲ್ಲೆಯ ಕುಂದಾಪುರದಿಂದ 35 ಕಿ.ಮೀ ದೂರದಲ್ಲಿದೆ. ಮಲೆನಾಡಿನ ಬೆಟ್ಟ – ಗುಡ್ಡಗಳಿಂದ ಕೂಡಿದ ಹಸಿರು ಬನದ ಮಧ್ಯವಿದೆ. ಕುಬ್ಜಾ ನದಿಯು ದೇವಸ್ಥಾನದ  ಪಕ್ಕದಲ್ಲಿ ಹರಿಯುತ್ತದೆ. ಕಮಲಶಿಲೆಯಲ್ಲಿ ಪ್ರಸಿದ್ದವಾದ ಶ್ರೀ ಬ್ರಾಹ್ಮಿ ದುರ್ಗಾಪರೇಶ್ವರೀ ದೇವಸ್ಥಾನ ಇದೆ. ದೇವಿಯು ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ರೂಪವನ್ನೊಳಗೊಂಡ ಲಿಂಗರೂಪಿಣಿಯಾಗಿದ್ದು ಪಾತಾಳದಿಂದ ಸ್ವಯಂಭೂ ಲಿಂಗವಾಗಿ ಉದ್ಭವಿಸಿದ್ದಾಳೆ.

          1968ನೇ ಇಸವಿಯಲ್ಲಿ ಕುಬ್ಜಾ ನದಿಯಲ್ಲಿ ಪ್ರವಾಹವುಂಟಾಗಿ ದೇವಸ್ಥಾನದ ಗೊಡೆಯು ಕುಸಿದು ದೇವಸ್ಥಾನ 20 ಅಡಿಯಷ್ಟು ನೀರಿನಲ್ಲಿ ಮುಳುಗಿತ್ತು. 1990ನೇ ಇಸವಿಯಲ್ಲಿ ದೇವಸ್ಥಾನವನ್ನು ಜೀರ್ಣೋದ್ದಾರ  ಮಾಡಲಾಗಿದ್ದು, ಹಲಸು ಮತ್ತು ಬೋಗಿ ಮರಗಳನ್ನು ಉಪಯೋಗಿಸಲಾಗಿದೆ.
          ಮುಸಲ್ಮಾನ ರಾಜನಾದ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಇವರ ಕಾಲದಿಂದಲೂ ಸಲಾಮ್ ಪೂಜೆ ಎಂಬ ವಿಶೇಷ ಪೂಜೆಯು ಇಂದಿಗೂ ಸಹ ಸಾಯಂಕಾಲದ ವೇಳೆ ನಡೆಯುತ್ತದೆ. ವರದಾಪುರದ ಶ್ರೀ ಶ್ರೀಧರ ಸ್ವಾಮೀಜಿ ಮಹಾರಾಜ್ ಅವರು 1952ನೇ ಇಸವಿಯಲ್ಲಿ ಮಾಡಿದ ಸೂಚನೆಯ ಮೇರೆಗೆ ಭಕ್ತಾದಿಗಳು(ಗಂಡಸರು) ಶರ್ಟು ಮತ್ತು ಬನಿಯನನ್ನು ತೆಗೆದು ದೇವಸ್ಥಾನದ  ಒಳಗಿನ ಆವರಣಗಳನ್ನು ಪ್ರವೇಶಿಸಬೇಕು. ಹೆಂಗಸರು ಸೀರೆ ಅಥವಾ ಚೂಡಿದಾರ್ ಧರಿಸಿ ದೇವಸ್ಥಾನ ಪ್ರವೇಶಿಸಬೇಕಾಗಿ ಹೇಳಿದ್ದಾರೆ.
          ಹೀಗೆ ಶ್ರೀ ದೇವಿಯ ಬಗೆಗಿನ ಪುರಾಣ ಹಾಗೂ ಅಮ್ಮನ ಮಹಾನ್ ಚರಿತ್ರೆಯನ್ನು ನಾವೂ ತಿಳಿದು ಕೃತಾರ್ಥರಾಗೋಣ ಬನ್ನಿ. ಶ್ರೀ ದೇವಿಯು ಹೇಗೆ ಈ ಕಮಲಶಿಲೆಯ ಕುಬ್ಜಾ ತೀರದಲ್ಲಿ ಬಂದು ನೆಲೆಸಿ ಬ್ರಾಹ್ಮಿ ದುರ್ಗೆಯಾದಳು ಎಂಬುದನ್ನು ನಾವು ಪುರಾಣದಿಂಧ ತಿಳಿಯಬಹುದಾಗಿದೆ.
          ಶ್ರೀ ದೇವಿಯ ಉದ್ಬವ ಲಿಂಗವು ಕಮಲವನ್ನು ಹೋಲುವ, ಅಷ್ಟೆ ನುಣುಪಾದ ಶಿಲೆಯಾದ್ದರಿಂದ ಕಮಲಶಿಲೆ ಎಂಬ ನಾಮ ಖ್ಯಾತಿಯನ್ನು ಹೊಂದಿತು. ಹೆಸರೇ ಸೂಚಿಸುವಂತೆ ಕಮಲವು ಮೃದುತ್ವವನ್ನು ಶಿಲೆಯು ಕಠಿಣತ್ವವನ್ನು ಅರ್ಥೈಸಿದರೂ ಇಲ್ಲಿ ಎರಡೂ ಒಂದಾಗಿ ಏಕತೆ ಮತ್ತು ಸಮಾನತೆಯನ್ನು ಸೂಚಿಸುತ್ತದೆ. ಕಮಲಳಾಗಿ ಶಿಷ್ಟಪಾಲನೇ, ಶಿಲೆಯಾಗಿ ದುಷ್ಟರ ನಿಗ್ರಹ ಕಾರ್ಯ ನಡೆಯುತ್ತಿದೆ.
          ಪ್ರಾಕೃತಿಕವಾಗಿ ವಿಶಿಷ್ಟವಾದ ಸ್ಥಾನವನ್ನು ಪಡೆದು ಶ್ರೀ ದೇವಿಯು ಪೃಕೃತಿ ಪ್ರಿಯಳಾಗಿ ಇಲ್ಲಿ ಹುಟ್ಟಿ ಬಂದಿದ್ದಾಳೆ. ಸುತ್ತಲೂ ಅರಣ್ಯ ಪ್ರದೇಶದ ಮಧ್ಯದಲ್ಲಿ ಕುಬ್ಜಾನದಿ ಮತ್ತು ನಾಗತೀರ್ಥಗಳ ಸಂಗಮದಲ್ಲಿ ಪಾತಾಳದಲ್ಲಿ ಲಿಂಗರೂಪಿಯಾಗಿ ಹುಟ್ಟಿ ಬಂದಿದ್ದಾಳೆ. ತಾಯಿ ಹುಟ್ಟಿದ್ದು ನೀರಿನಲ್ಲಿ,, ರೂಪ ಕಲ್ಲು, ಆಭರಣ ಮಣ್ಣು(ಮೃತ್ತಿಕೆ) ಅದ್ಭುತ ಶಕ್ತಿವಂತ ವಿಧಿತವಾಗುತ್ತದೆ.
Temple Outr View, ದೇವಾಲಯದ ಹೊರನೋಟ

          ಪ್ರತಿ 15 ದಿನಗಳಿಗೊಮ್ಮೆ ಏಕಾದಶಿಯಂದು ರಾತ್ರಿ ಹದಗೊಳಿಸಿದ ಕೆಂಪುಮಣ್ಣನ್ನು ಲಿಂಗಕ್ಕೆ ಲೇಪಿಸಲಾಗುತ್ತದೆ. ಇದೇ ಮೃತ್ತಿಕಾಷ್ಟಬಂದ. ಬೇರಾವುದೇ ರೀತಿಯ ಅಷ್ಟಬಂದ ಇರುವುದಿಲ್ಲ. ಏಕಾದಶಿಯಂದು ಆ ಮಣ್ಣನ್ನು ತೆಗೆದು ಚಿಕ್ಕ ಉಂಡೆಯಾಗಿ ಮಾಡಿ ಮೃತ್ತಿಕಾ ಪ್ರಸಾದ(ಮೂಲ) ವಾಗಿ ಕೊಡಲಾಗುತ್ತದೆ. 15 ದಿನಗಳಿಂದ ಅಭಿಷೇಕ, ಅರ್ಚನೆ, ಪೂಜಾದಿಗಳು ನಡೆದು ನೀಡುವ ಈ ಪ್ರಸಾದವನ್ನು ತಮ್ಮ ಮನೆಗಳಲ್ಲಿ ತೀರ್ಥವಾಗಿ, ಗಂಧವಾಗಿ(ನೀರಿನಲ್ಲಿ ಕರಗಿಸಿ) ಉಪಯೋಗಿಸಿ ಇಷ್ಟಾರ್ಥ ಸಿದ್ದಿ ಪಡೆದು ಧನ್ಯರಾಗುತ್ತಾರೆ.

          ಬ್ರಾಹ್ಮೀ ಶಕ್ತಿಯ ಸಂಕೇತ, ಭಕ್ತಿಯ ಉಗಮ ಪರಮೇಶ್ವರನ ಮಡದಿ ಆದಿಶಕ್ತಿ ಪರಮೇಶ್ವರೀಯಾಗಿ ಜಗತ್ತಿಗೆ ಬಂದ ದುರ್ಗೆ, ಕಷ್ಟಗಳನ್ನು ಪರಿಹರಿಸಿ ದುರ್ಗೆಯಾಗಿ, ಕ್ರೂರಾಕ್ಷನನ್ನು ವಧಿಸಿದ ಬ್ರಾಹ್ಮೀಣಿಯು ಇದೇ ಲಿಂಗದಲ್ಲಿ ಐಕ್ಯವಾಗಿ ಬ್ರಾಹ್ಮಿಯಾಗಿ, ಹೀಗೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀಯಾಗಿ ಕಮಲಶಿಲೆಯಲ್ಲಿ ನೆಲೆನಿಂತು, ಮುಂದೆ ಇದೇ ಜಗತ್ತಿನ ಏಕೈಕ ಬ್ರಾಹ್ಮೀ ಕ್ಷೇತ್ರವಾಗಿ ಹೊರಹೊಮ್ಮದೆ.

          ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಕಮಲಶಿಲೆಯ ಮಹಿಮೆಯನ್ನು ವರ್ಣಿಸಲಾಗಿದೆ. ಕುಬ್ಜಾ ತೀರದಲ್ಲಿ ಈಗ ದೇವಾಲಯವಿರುವ ಸ್ಥಳವು ಮಹಾ ತಪಸ್ವಿಗಳಾದ ರೈಕ್ವಮುನಿಗಳ ಆಶ್ರಮವಾಗಿತ್ತು. ಗೌರಿ ಶಕ್ತಿಯಿಂದ ಕೂಡಿದ ಬ್ರಾಹ್ಮೀಯು ಖರಾಸುರ, ರಟ್ಟಾಸುರರನ್ನು ನಾಸ್ತಿಕರನ್ನಾಗಿ ಮಾಡಿ ಅವರ ವಧೆಗೆ ಕಾರಣಳಾಗಿ ಕಮಲಶಿಲೆಗೆ ಬಂದ ರೈಕ್ವ ಮಹಾಮುನಿಗಳಿಗೆ ವರಪ್ರಸಾದ ಮಾಡಿ ಶಿವನಾಜ್ಞೆಯಂತೆ ಅದೇ ಲಿಂಗದಲ್ಲಿ ಐಕ್ಯಳಾಗಿ ಬ್ರಾಹ್ಮಿದುರ್ಗಾಪರಮೇಶ್ವರೀಯಾಗಿ ಭಕ್ತರ ಭಕ್ತಿಗೆ ಫಲಪ್ರದೆಯಾಗಿದ್ದಾಳೆ.

          ಹಿಂದೆ ಕೈಲಾಸದಲ್ಲಿ ಶಿವ ಸಾನಿಧ್ಯದಲ್ಲಿ ಪಿಂಗಳೆ ಎಂಬ ನರ್ತಕಿಯು ಪ್ರತಿದಿನ ನರ್ತನ ಸೇವೆ ಮಾಡುತ್ತಿದ್ದಳು, ಒಂದು ದಿನ ಸಂಜೆ ಶಿವ-ಪಾರ್ವತಿಯರ ಸಮ್ಮುಖದಲ್ಲಿ ತನ್ನ ರೂಪ, ಮದದಿಂದ ಗರ್ಭಿತಳಾಗಿ ನರ್ತನ ಮಾಡುವುದಿಲ್ಲ ಎಂದಳು. ಆಗ ಕೋಪಗೊಂಡ ಪಾರ್ವತಿಯು ಆಕೆಗೆ ಅಂಕು-ಡೊಂಕಿನ ಗೂನುಬೆನ್ನಿನ ಕುಬ್ಜೆಯಾಗು ಎಂದು ಶಾಪ ಕೊಡುತ್ತಾಳೆ.

          ಆದಿಶಕ್ತಿಯ ಶಾಪದ ಫಲದಿಂದ ಪಿಂಗಳೆಯು ತತ್ ಕ್ಷಣವೇ ಕುಬ್ಜೆಯಾಗುತ್ತಾಳೆ. ತನ್ನ ತಪ್ಪಿನ ಅರಿವಾಗಿ ಆದಿಶಕ್ತಿಯಲ್ಲಿ ಪರಿ-ಪರಿಯಾಗಿ ವಿನಂತಿ ಮಾಡುತ್ತಾಳೆ. ಆಗ ಪಾರ್ವತಿಯು ಪ್ರಸನ್ನಳಾಗಿ ಪಿಂಗಳಾ ನಾನು ಖರರಟ್ಟಾಸುರರನ್ನು ವಧಾರ್ಥವಾಗಿ ಶ್ರಾವಣ ಕೃಷ್ಣನವಮಿ ಶುಕ್ರವಾರದಂದು ಮಹಾ ಪುಣ್ಯಕರವಾದ ರೈಕ್ವಶ್ರಮದಲ್ಲಿ ಪಾತಾಳದಿಂದ ಲಿಂಗರೂಪದಲ್ಲಿ ಶೋಭಿಸುತ್ತೇನೆ.  ಅದು ಮುಂದೆ ದೊಡ್ಡ ಕ್ಷೇತ್ರವಾಗಿ ಕಮಲಶಿಲೆ ಎಂಬುದಾಗಿ ಮೆರೆಯುತ್ತದೆ. ನೀನು ಅಲ್ಲಿಗೆ ಹೋಗಿ ಸುಪಾರ್ಶ್ವ ಗುಹಾದ್ವಾರದಿಂದ ಹೊರಡುವ ನಾಗತೀರ್ಥದ ಬಳಿ ಆಶ್ರಯ ರಚಿಸಿಕೊಂಡು ತನ್ನ ಅನುಗ್ರಹಕ್ಕಾಗಿ ತಪಸ್ಸನ್ನು ಮಾಡು ಎಂದು ಆಜ್ಞಾಪಿಸುತ್ತಾಳೆ.

          ಭಕ್ತಾಧಿಗಳು ಈ ಪುಣ್ಯ ನದಿಯಲ್ಲಿ ಸ್ನಾನಮಾಡಿ ಶ್ರೀ ಬ್ರಾಹ್ಮಿದೇವಿಯನ್ನು ಆರಾಧಿಸಿ ಧನ್ಯರಾಗುತ್ತಾರೆ. ಕುಬ್ಜೆಯು ಪ್ರತಿ ಮಳೆಗಾಲದಲ್ಲಿ ಮಹಾದ್ವಾರದ ಮೂಲಕ ಒಳಪ್ರವೇಶಿಸಿ ಶ್ರೀ ದೇವಿಯ ಲಿಂಗಕ್ಕೆ ಸ್ವಯಂ ಸ್ನಾನ ಮಾಡಿಸುತ್ತಾಳೆ. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಬಂದು ಅತ್ಯಂತ ಪುಣ್ಯಕರವಾದ ದೇವಿಗೆ ಸ್ನಾನ ಮಾಡಿಸಿದ ನೀರಿನಲ್ಲಿ ಮಿಂದು ಭಾವ ಪರವಶರಾಗುತ್ತದೆ.

          ಅದೇ ರೀತಿ ಗರುಡನ ಭಯದಿಂದ ಆದಿಶೇಷನು ಕಮಲಶಿಲೆಗೆ ಬಂದು ಸುಪಾರ್ಶ್ವ ಗುಹೆಯಲ್ಲಿ ಬ್ರಾಹ್ಮೀಯನ್ನು ಕುರಿತು ಕಠಿಣ ತಪಸ್ಸನ್ನು ಮಾಡುತ್ತಾನೆ. ತಪಕ್ಕೊಲಿದ ದೇವಿಯು ನೀನು ವಿಷ್ಣುವಿಗೆ ಹಾಸಿಗೆಯಾಗು ಉಳಿದ ಸರ್ಪಗಳು ನನ್ನ ಆಶ್ರಮದಲ್ಲಿ ಗುಹೆಯಲ್ಲಿರಲಿ. ಗರುಡನಿಂದ ಭಯವಿಲ್ಲ ಎಂದು ಅಪ್ಪಣೆ ನೀಡುತ್ತಾಳೆ. ನಾಗರಾಜನ ತಪಸ್ಸಿನ ಫಲದಿಂದ ಹೊರಟ ತೀರ್ಥವು ನಾಗತೀರ್ಥವಾಗಿ ಅದರಲ್ಲಿ ಮಿಂದವರಿಗೆ ಸರ್ಪಬಾದೆ ನಿವಾರಣೆಯಾಗುತ್ತದೆ ಎಂಬ ಪ್ರತಿತಿ ಇದೆ. ಇದಕ್ಕೆ ಸಾಕ್ಷಿಯಾಗಿ ದೇವಾಲಯದಲ್ಲಿ ಬೃಹತ್ ಹುತ್ತವನ್ನು ಕಾಣಬಹುದು.
          ಅಂತೆಯೇ ಶ್ರೀ ದೇವಿಯ ವಾಹನವಾದ ವ್ಯಾಘ್ರವು(ಹುಲಿ) ಇಲ್ಲಿ ತಪ್ಪು-ಒಪ್ಪುಗಳಾದಲ್ಲಿ ತಾನೂ ತಾಯಿಯ ಆಜ್ಞಾಪಾಲಕನಂತೆ ಇಲ್ಲಿನ ಜನರಲ್ಲಿ ಅರಿವನ್ನು ಮೂಡಿಸುತ್ತದೆ ಎಂಬುದನ್ನು ಇಲ್ಲಿನ ಜನರಿಂದ ತಿಳಿದುಬರುತ್ತದೆ. ಹಿಂದೆ ಈ ಹುಲಿಯೇ ಮನೆಮನೆಯ ಮುಂದೆ ಬಂದು ಕೂಗುವ ಮೂಲಕ ಶ್ರೀ ದೇವಿಯ ಹಬ್ಬ ಹಾಗೂ ಇನ್ನಿತರ ಕಾರ್ಯಗಳಿಗೆ ಆಮಂತ್ರಿಸುತ್ತಿತ್ತು. ಹಾಗೇ ಇಲ್ಲಿನ ಸುಪಾರ್ಶ್ವ ಗುಹೆಯಲ್ಲಿ ಶ್ರೀ ದೇವಿಯ ಕಾಳಿ, ಲಕ್ಷ್ಮೀ ಮತ್ತು ಸರಸ್ವತಿಯರ ಲಿಂಗಗಳಿವೆ. ಹಾಗೂ ದೇವಿಯ ವಾಹನವಾದ ಹುಲಿಯು ಇಲ್ಲಿಯೇ ವಾಸವಾಗಿರುತ್ತದೆ.  ಈ ಗುಹೆಯು ಶ್ರೀ ಕ್ಷೇತ್ರದಿಂದ 2 ಕಿ.ಮೀ ದೂರದಲ್ಲಿ ಹಳ್ಳಿಹೊಳೆ ಮಾರ್ಗದಲ್ಲಿ ದುರ್ಗಮ ಅರಣ್ಯದಲ್ಲಿ ಮಧ್ಯದಲ್ಲಿ ತಪಸ್ಸಿಗೆ, ಧ್ಯಾನಕ್ಕೆ ಯೋಗ್ಯವಾದ ಪ್ರಶಾಂತ ಸ್ಥಳದಲ್ಲಿ ಒಂದು ಗುಹೆ ಒದೆ. ದೇವತೆಗಳಿಂದ ನಿರ್ಮಿಸಲ್ವಟ್ಟ ಗುಹೆಯನ್ನು ಹಿಂದೆ ಕೃತಯುಗದಲ್ಲಿ ಸುಪಾರ್ಶ್ವನೆಂಬ ರಾಜನು ರಾಜಕೀಯದಲ್ಲಿ ಜಿಗುಪ್ಸೆ ಹೊಂದಿ ತಪಸ್ಸಿಗೆ ಯೋಗ್ಯ ಸ್ಥಳವನ್ನು ಹುಡುಕುತ್ತಾ ಹೋಗಲು ಶಿವನ ಪ್ರೇರಣೆಯಂತೆ ಇಲ್ಲಿಗೆ ಬಂದು ಈ ಗುಹೆಯಲ್ಲಿ ತಪಸ್ಸಾಸಕ್ತನಾದ ಆತನ ತಪಕ್ಕೆ ವಿಘ್ನ ಬಾರದಂತೆ ಶಿವನು ತನ್ನ ಭೈರವನಿಗೆ ಗುಹೆಯ ದ್ವಾರದಲ್ಲಿ ನಿಲ್ಲುವಂತೆ ಸೂಚಿಸುತ್ತಾನೆ.
          ಹೀಗೆ ರಾಜನು ಅಲ್ಲಿ ತಪಗೈದು ಮೋಕ್ಷ ಹೊಂದುತ್ತಾನೆ. ಹೀಗೆ ಮುಂದೆ ಆ ಗುಹೆಗೆ ಅವನ ಹೆಸರು ಅನ್ವರ್ಥವಾಘುತ್ತದೆ. ಗುಹೆಯದ್ವಾರದಲ್ಲಿ ಭೈರವನ ಮೂರ್ತಿಯಿದೆ. ಕೆಳಗೆ ಮೆಟ್ಟಿಲಿಳಿದ ಕೂಡಲೆ ಅಕ್ಕ-ತಂಗಿಯರ ಜೋಡು ಕೆರೆ ಮತ್ತು ಮುಂದೆ ನಾಗಾಲಯ ಹಾಗೂ ನಾಗತೀರ್ಥ ಗೋಚರಿಸುತ್ತದೆ.
          ಹೀಗೆ ಈ ಕ್ಷೇತ್ರದಲ್ಲಿ ಜಾನುವಾರುಗಳಿಗೆ ರೋಗ-ರುಜಿನ ಬಂದಾಗ, ಬಂಜೆಯಾದಗಾ, ಇತರ ಕೌಟುಂಬಿಕ ತಾಪತ್ರಯಗಳಿಗೆ ಹರಕೆ ರೂಪದಲ್ಲಿ ಗೋವುಗಳನ್ನು ಶ್ರೀ ದೇವಿಗೆ ಬಿಡುತ್ತಾರೆ.  ಇಂತಹ ಲಕ್ಷಾಂತರ ಗೋವುಗಳು ಭಕ್ತರ ಮನೆಯಲ್ಲಿದ್ದು ಹಾಲು, ತುಪ್ಪವನ್ನು  ದೇವಿಗೆ ತಂದೊಪ್ಪಿಸುತ್ತಾರೆ. ಅದೇ ರೀತಿ ಶ್ರೀ ಕ್ಷೇತ್ರದಿಂದ ‘ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀ ದಶವತಾರ ಯಕ್ಷಗಾನ’ ಮಂಡಳಿ ಕೂಡಾ ಇದ್ದು ತನ್ನ ಭಕ್ತರ ಸೇವೆಯನ್ನು ಬೆಳಕಿನ ಸೇವಾ ರೂಪದಲ್ಲಿ ತಾಯಿ ಪಡೆಯುತ್ತಾಳೆ.
          ಹೀಗೆ ಶ್ರೀ ವೇವಿಯ ಪರಿವಾರ ದೇವರಾಗಿ ಶ್ರೀ ವೀರಭದ್ರ, ಮಹಾಗಳಪತಿ, ಸುಬ್ರಹ್ಮಣ್ಯ, ಶಿವ, ವಿಷ್ಣು, ಆಂಜನೇಯ, ನವಗ್ರಹಗಳು ಇವೆ. ಹಿಂದೊಮ್ಮೆ ವೀರಭದ್ರನ ತೀಕ್ಷ್ಣ ದೃಷ್ಟಿಯಿಂದ ವಾಯುವ್ಯ ಭಾಗದ ಮರದ ಬಾಗಿಲು ಉರಿದು ಹೋಗಿದ್ದು, ಆ ಕಾರಣದಿಂದ ಅಲ್ಲಿ ಮಹಾಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ದೇವಾಯಲಯದಲ್ಲಿ ಅನ್ನಸಂತರ್ಪಣೆಯೂ ಕೂಡಾ ನಡೆಯುತ್ತದೆ.
          ಶ್ರೀ ಕ್ಷೇತ್ರದಲ್ಲಿ ವಿಜಯಾಗಮ ಪದ್ದತಿಯಂತೆ ಪೂಜೆ-ಬಲಿಗಳು ನಡೆಯುತ್ತದೆ. ಪ್ರತಿ ದಿನ ಉಷಾಕಾಲ, ಪ್ರಾತಃಕಾಲ, ಮದ್ಯಾಹ್ನ, ಸಂಧ್ಯಾಕಾಲ, ರಾತ್ರಿ ಹೀಗೆ ಐದು ಪೂಜೆಗಳು ತ್ರಿಕಾಲ ಬಲಿಗಳು ನಡೆಯುತ್ತದೆ. ಬ್ರಾಹ್ಮೀ ಶಕ್ತಿ ಸ್ವರೂಪಿಣಿಯಾದ ತ್ರೀಮೂರ್ತಿಸ್ವರೂಪಿಣಿ ಶಕ್ತಿಯೂ ಆದ ದೇವಿಯನ್ನು ಕಂಡು ನೀವೇಲ್ಲರೂ ಒಮ್ಮೆ ಕೃತಾರ್ಥರಾಗಿ.

(ಸೂಚನೆ : ಈ ಮೇಲಿನ ಲೇಖನವನ್ನು ಹಲವು ಲೇಖನವನ್ನು ಒಂದೂಗೂಡಿಸಿ ರಚಿಸಲಾಗಿದೆ. ಇದರಲ್ಲಿನ ತಪ್ಪು-ಒಪ್ಪುಗಳು ನಿಮಗೆ ಕಂಡುಬಂದಲ್ಲಿ ದಯಮಾಡಿ raghu.koteshwara05@gmail.com ಗೆ ಮೈಲ್ ಮಾಡಿ. ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಮುಕ್ತ ಸ್ವಾಗತ.)

TV9 ನ Heegu Unte ವಿಡಿಯೋ ಚಿತ್ರಗಳಿಗಾಗಿ ಈ ಕೆಳಗಿನ Link ಗೆ Click ಮಾಡಿ
ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರದ ವೆಬ್ ಸೈಟ್ 
http://www.kamalashile.org ಗೇ ಲಾಗ್ ಆನ್ ಆಗಿ.

(ದಾರಿಯ ವಿವರ : ಕುಂದಾಪುರದಿಂದ 35ಕಿ.ಮೀ ದೂರದಲ್ಲಿರುವ ಶ್ರೀ ಕ್ಷೇತ್ರ ಕಮಲಶಿಲೆ ದೇವಾಲಯವಯ ಕುಂದಾಪುರ- ತೀರ್ಥಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ಸಿದ್ದಾಪುರದಿಂದ 6 ಕಿ.ಮೀ ದೂರದಲ್ಲಿ ಅಮ್ಮನವರ ಸಾನ್ನಿಧ್ಯವಿದೆ.)

ವಿಳಾಸ :-
ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀ ದೇವಸ್ಥಾನ,
ಕಮಲಶಿಲೆ, ಕುಂದಾಪುರ – ತಾ||
Sri BrahmiDurga Temple,
KamalaShile, Kundapura-Tq.