ಶ್ರೀ ಚೌಡೇಶ್ವರೀ ದೇವಸ್ಥಾನ, ಸಿಗಂಧೂರು, ಸಾಗರ ತಾಲೂಕು.
Shree Chowdeshwari temple, Sigandooru, Sagara Tq.
ಶ್ರೀ ಸಿಗಂದೂರೇಶ್ವರಿ(ಚೌಡೇಶ್ವರಿ) ಅಮ್ಮನವರು Sri Sigandaru Chawdeshwari |
ಅದೊಂದು
ದಿನ ಸೀಗೆ ಕಣಿವೆಯ ಪುಣ್ಯ ವಿಶೇಷವಿರಬೇಕು. ಆಗಿನ ಸಮಾಜದ ನಾಯಕರಾಗಿದ್ದಶೇಷಪ್ಪನವರು ತನ್ನ
ಸಂಗಡಿಗರೊಂದಿಗೆ ಬೇಟೆಯಾಡಲು ಸೀಗೆ ಕಣಿವೆಯ ಅರಣ್ಯದ ಕಡೆ ಉತ್ಸುಕರಾಗಿ ಹೊರಟರು. ಬೆಳೆದು ನಿಂತ ಮರ
- ಬಳ್ಳಿ ಪೊದೆಗಳಿಗೆ ಕೊರತೆಯಿಲ್ಲದ ಕಾಡದು. ಹುಲಿ, ಚಿರತೆ, ಕೋಣ ಮತ್ತು ಜಿಂಕೆಗಳು ಸ್ವಚ್ಛಂದವಾಗಿ
ವಿಹರಿಸುತ್ತಿದ್ದವು. ಒಂದು ರೀತಿಯಲ್ಲಿ ಭೀತಿ, ಒಂದು ರೀತಿಯಲ್ಲಿ ಮುದಕೊಡುವ ದಟ್ಟಾರಣ್ಯ. ಶೇಷಪ್ಪನವರು
ಸಂಗಡಿಗರ ಜೊತೆ ಸರಿಯಾದ ಭೇಟೆಯನ್ನು ಅರಸುತ್ತಾ ಮುಂದುವರೆಯುತ್ತಿದ್ದಾರೆ. ಮುಂದೆ ಮುಂದೆ ಶೇಷಪ್ಪ,
ಹಿಂದೆ ಸಂಗಡಿಗರು. ಇದ್ದಕಿದ್ದ ಹಾಗೆ ಶೇಷಪ್ಪನವರಿಗೂ ಮತ್ತು ಸಂಗಡಿಗರಿಗೂ ಅಂತರ ಹೆಚ್ಚಾಯಿತು. ಇದರ ಅರಿವಿಲ್ಲದೇ
ಶೇಷಪ್ಪನವರು ಮುಂದುವರೆಯುತ್ತಿದ್ದಾರೆ. ಇದ್ದಕಿದ್ದ ಹಾಗೆ ಹಿಂತಿರುಗಿ ನೋಡಿದರು. ಸಂಗಡಿಗರು ಯಾರೂ
ಕಾಣಿಸಲಿಲ್ಲ. ಹಿಂದೆ ಎಂದೂ ಹೀಗಾಗಿರಲಿಲ್ಲ. ಇಂದೇಕೆ? ಒಂದು ಕ್ಷಣ ತಬ್ಬಿಬ್ಬಾದರು. ಒಂದೆಡೆಯಿಮ್ದ
ಹುಲಿಯ ಘರ್ಜನೆಯಾದರೆ, ಇನ್ನೊಂದು ಕಡೆಯಿಂದ ಹುಳ ಹುಪ್ಪಟಗಳ ಶಬ್ಧ. ಬೆಳಕು ಮಂದವಾಗತೊಡಗಿತು.
ಅದೇನೋ ಮಂಪರು... ಏನೂ ಮಾಡಲು
ಹೊಳೆಯದಂತಹ ಆಲಸ್ಯ. ಎಂದೂ ಮೂಡದ ಭಯದ ಸೆಳೆವು. ಶೇಷಪ್ಪನವರ ಹೃದಯಾಂತರಾಳದಿಂದ ಮಾತೊಂದು ಹೊರಬಿತ್ತು
" ಅಮ್ಮಾ, ತಾಯೇ, ನಾವಾರಿಗೂ ನನಗೆ ತಿಳಿದಂತೆ ಅನ್ಯಾಯ ಎಣಿಸಿಲ್ಲ. ನಿನ್ನನ್ನು ಇದುವರೆಗೆ ನಂಬಿ
ಬಾಳಿದೆ. ನನ್ನನ್ನು ಕಾಯುವ ಭಾರ ನಿನ್ನದಮ್ಮ-ನಿನ್ನದು" ನಿದ್ರೆಯಾವರಿಸಿತು. ನಿದ್ರೆಯಲ್ಲಿ
ಕನಸು. ಭೂಮಿ ಬಿರಿಯುವಂತೆ ಗುಡುಗು ಗುಡುಗಿತು. ಸಿಡಿಲು ಸಿಡಿಯಿತು. ಮಿಂಚು ಮಿಂಚಿತು. ವೇದ ನಾದದ
ಅಂಗಣ ಹಿತವಾಗಿ ವ್ಯಾಪಿಸಿ ಮಧ್ಯದಲ್ಲೊಂದು ಪ್ರಭೆ ಮೂಡಿತು. ಶಂಖ ಚಕ್ರ ಗಧಾದಾರಿಯಾಗಿ ಮಂದಹಾಸ ಬೀರುತ್ತಾ
ನಿಂತಿದ್ದಾಳೆ - ಆದಿಶಕ್ತಿ, ಮಹಾಮಾಯೆ ಲೋಕಮಾತೆ ಸಿಗಂದೂರೇಶ್ವರಿ ರೂಪದಲ್ಲಿ. "ನಾನಿಲ್ಲಿ ನೆಲಸಿ
ಧರ್ಮೋದ್ದಾರ - ಭಕ್ತ ಪರಿಪಾಲನೆ ಮಾಡಬೇಕೆಂದು ನಿಶ್ಚಯಿಸಿದ್ದೇನೆ. ಆದರೆ ನೆಲೆ ನಿಲ್ಲಲ್ಲಿ ನನಗೊಂದು
ಗುಡಿಬೇಕು. ನಾನು ನೆಲೆನಿಲ್ಲಲು ಗುಡಿಯೊಂದನ್ನು ಕಟ್ಟಿಸು, ನಿತ್ಯ ಪೂಜೆ ನಡೆಯಬೇಕು, ನಾನು ಶಿಲಾರೂಪಿಯಾಗಿ
ನೆಲೆಸುತ್ತೇನೆ" ಅಂತ ದೇವಿ ಕನಸಲ್ಲಿ ಶೇಷಪ್ಪನವರಿಗೆ ಹೇಳಿದಳು. ಶೇಷಪ್ಪನವರಿಗೆ ಎಚ್ಚರವಾಯಿತು.
ಸುತ್ತ ನೋಡಿದರು. ಕತ್ತಲಾವರಿಸಿದೆ. ಮನೆಯತ್ತ ನಡೆಯತೊಡಗಿದರು.
ದಿನ ಕಳೆದಂತೆ ಶೇಷಪ್ಪನವರ
ದಿನಚರಿ ಬದಲಾಯಿತು. ಆಧ್ಯಾತ್ಮದ ಕಡೆ ಒಲವು ಹರಿಯಿತು. ದೇವಿ ಶಿಲಾರೂಪಿಯಾಗಿ ಸೀಗೆ ಕಣಿವೆಯಲ್ಲಿ ನಿಮ್ತಿರುವಳು
ಎಂಬುದನ್ನು ಸ್ಥಿರ ಪಡಿಸಿಕೊಂಡರು. ಆದರೆ ಜನರನ್ನು ನಂಬಿಸುರುದೆಂತು? ನೂರಾರು ವರ್ಷ ತಪಸ್ಸನ್ನಾಚರಿಸಿದರೂ
ಸಾಧುಸಂತರಿಗೆ ಒಲಿಯದ ದೇವಿ ತನಗೆ ಕನಸ್ಸಲ್ಲಿ ಬಂದು ಅಪ್ಪಣೆ ಕೊಡಿಸಿದಳು ಎಂದರೆ ನಂಬಿಯಾರೆ? ಈ ಚಿಂತೆಯಲ್ಲೇ
ಜಲಾವೃತವಾದ ಕಾಡನ್ನು ದಾಟಿ ಒಂಟಿಯಾಗಿ ತಾನು ಕನಸು ಕಂಡ ಸ್ಥಳ ಪರಿಶೀಲಿಸಿದರು. ಅಲ್ಲಿಯೇ ವಿಜೃಂಬಿಸುತ್ತಿದ್ದಳು
ತಾಯಿ ಸಿಗಂದೂರೇಶ್ವರಿ.ತಾವು ದೇವಿಗೆ ಪೂಜೆ ಮಾಡಿದರು. ಆದರೂ ತೃಪ್ತಿ ಸಮಾಧಾನವಿಲ್ಲ.ಭಾವನಾ ಪ್ರಪಂಚದಲ್ಲೇ ತೇಲುತ್ತಿದ್ದ ಅವರ ಚಿತ್ತಭಿತ್ತಿಗೆ ಹೊಳೆದುದೇ ಆಗಮ ದುಗ್ಗಪ್ಪಜ್ಜ.
ದುಗ್ಗಪ್ಪಜ್ಜ ಸಾಧಾರಣ ವ್ಯಕ್ತಿ.
ಬ್ರಾಹ್ಮಣರಾದರೂ ವೇದ, ಶಾಸ್ತ್ರ, ಮಂತ್ರ ಓದಿದವರಲ್ಲ. ಕೇವಲ ಶದ್ಧಾ ಭಕ್ತಿಯೇ ಅವರ ಉಸಿರು. ಮುಖದಲ್ಲಿ
ಸದಾ ಹರ್ಷ, ಕಣ್ಗಳಲ್ಲಿ ನಿರ್ಮಲತೆ, ಮನಸ್ಸಿನಲ್ಲಿ ಪ್ರೀತಿ, ಮಾತಿನಲ್ಲಿ ಮಾಧುರ್ಯ, ಇವೇ ಅವರನ್ನು
ಎಲ್ಲರೂ ಗೌರವಾಧರಗಳಿಂದ ಕಾಣುವಂತೆ ಮಾಡಿತ್ತು. ಶೇಷಪ್ಪನವರು ತಾನು ಕಂಡ ಕನಸಿನ ವಿಚಾರವನ್ನೆಲ್ಲಾ
ಸವಿಸ್ತಾರವಾಗಿ ನಿವೇದಿಸಿದರು. ತಾಯಿ ಶೇಷಪ್ಪನವರಿಗೆ ಕನಸ್ಸಲ್ಲಿ ಕಂಡ ವಿಷಯ ಕೇಳಿ ದಂಗಾದ ದುಗ್ಗಪ್ಪಜ್ಜ.
ತಾನು ದೇವಿಗೆ ದೇವಸ್ಥಾನ ಕಟ್ಟಿಸುತ್ತೇನೆ, ನೀವು ನನಗೆ ಮಾರ್ಗದರ್ಶಕರಾಗಬೇಕು. ಹೀಗೆ ಮಾಡು ಅಂತ ಅಪ್ಪಣೆ ಕೊಡಿಸಿ, ಅದರಂತೆ ಮಾಡುತ್ತೇನೆ. ನೀವೆ ಅರ್ಚಕರಾಗಿರಬೇಕು ಅಂತ ಶೇಷಪ್ಪನವರು ದುಗ್ಗಪ್ಪಜ್ಜ ಹತ್ತಿರ ಕೇಳಿಕೊಂಡರು. ಅದಕ್ಕೆ ದುಗ್ಗಪ್ಪಜ್ಜ ಸಮ್ಮತಿಸಿದರು.
ತಾನು ದೇವಿಗೆ ದೇವಸ್ಥಾನ ಕಟ್ಟಿಸುತ್ತೇನೆ, ನೀವು ನನಗೆ ಮಾರ್ಗದರ್ಶಕರಾಗಬೇಕು. ಹೀಗೆ ಮಾಡು ಅಂತ ಅಪ್ಪಣೆ ಕೊಡಿಸಿ, ಅದರಂತೆ ಮಾಡುತ್ತೇನೆ. ನೀವೆ ಅರ್ಚಕರಾಗಿರಬೇಕು ಅಂತ ಶೇಷಪ್ಪನವರು ದುಗ್ಗಪ್ಪಜ್ಜ ಹತ್ತಿರ ಕೇಳಿಕೊಂಡರು. ಅದಕ್ಕೆ ದುಗ್ಗಪ್ಪಜ್ಜ ಸಮ್ಮತಿಸಿದರು.
ಸಣ್ಣದೊಂದು ಗುಡಿ ನಿರ್ಮಾಣವಾಯಿತು.
ದುಗ್ಗಜ್ಜನವರೇ ಅರ್ಚಕರು. ಶೇಷಪ್ಪನವರೇ ಧರ್ಮದರ್ಶಿಗಳು. ಕ್ರಮೇಣ ಸಿಗಂದೂರೇಶ್ವರಿಯ ಖ್ಯಾತಿ ಪಸರಿಸತೊಡಗಿತು.
ಭಕ್ತರ ಇಷ್ಟಾರ್ಥಗಳು ಫಲಪ್ರದವಾಗುತ್ತಿತ್ತು. ಭಕ್ತಾದಿಗಳು ಪೂಜೆ ಸಲ್ಲಿಸುತ್ತಿದ್ದರು. ಕಷ್ಟ, ನೋವು,
ಬೇನೆ, ಬೇಸರಿಕೆಗಳಿಗಳಿಂದ ಪರಿತಪಿಸುವ ಜನಸಾಮಾನ್ಯ ಭಕ್ತವೃಂದಕ್ಕೆ ಸಂಕ, ತೋಡು ದಾಟಲು ಕಟ್ಟುವ ಸೇತುವೆಗೆ
ದಾಟುವಾಗ ಬೀಳದಂತೆ ಹಿಡಿಯಲು ಹಿಡಿಯಾಗುವಂತೆ ದುಗ್ಗಜ್ಜ ಭಕ್ತರ ಹಿಡಿಯಾದರು. ಶೇಷಪ್ಪನವರು
ಸೇತುವೆಯಾದರು. ಮಾಳಿಗೆಯ ಮನೆಯಲ್ಲಿ ಒತ್ತಿ ತುಂಬಿಕೊಂಡತಹ ಕತ್ತಲೆಯನ್ನು ಜನರಿಂದ ಹೊರಕ್ಕೆ
ತಳ್ಳಿ ನೂಕಲಾಗದು. ಆದರೆ ಒಂದು ದೀಪವನ್ನು ಹೊತ್ತಿಸಿಟ್ಟರೆ ಮುತ್ತಿದ ಕತ್ತಲೆಯು ತಾನೇ ಕಾಲುಕಿತ್ತು
ಓಡಿಹೋಗುತ್ತದೆ ಎಂಬಂತೆ ದೀನರಾಗಿ ಬಂದು ಬೇಡುವ ನೊಂದ ಜನರ ಪಾಲಿಗೆ ದುಗ್ಗಜ್ಜ-ಶೇಷಪ್ಪ ನಂದಾದೀಪವಾದರು.
|
ದುಗ್ಗಜ-ಶೇಷಪ್ಪನವರ ಕಾಲಾನಂತರ
ಶ್ರೀದೇವಿಯ ಮೂಲ ವಿಗ್ರಹ ನೀರಿನಲ್ಲಿಯೇ ಮುಳುಗಿರುವುದನ್ನು ನೋಡಿ, ದೇವಿಗೆ ನಿತ್ಯ ಪೂಜೆ ಸಲ್ಲುವಂತಾಗಬೇಕೆಂದು
ಯೋಚಿಸಿ ದೇವಸ್ಥಾನವನ್ನು ಈಗಿರುವ ಎತ್ತರದ ಸ್ಥಳಕ್ಕೆ ಶ್ರೇಷ್ಟ ವೈದಿಕ ವೇದೋತ್ತಮರಿಂದ ವಿಧಿವತ್ತಾಗು
ಪ್ರತಿಷ್ಟಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಸಿಗಂದೂರೇಶ್ವರಿ ತನ್ನನ್ನು ನಂಬಿದ ಭಕ್ತರನ್ನು ಕೈಬಿಡದೇ
ಕಾಯುತ್ತಲೇ ಬಂದಿದ್ದಾಳೆ.
"ಭಗವಾನ್ ಶೀಧರರೂ"
ಒಮ್ಮೆ ಸಿಗಂದೂರಿಗೆ ಬಂದಿದ್ದರು. ಆಗ ದೇವಿಯ ಉಗ್ರ ಸ್ವರೂಪಿಯಾಗಿದ್ದಾಳೆಂದು ಶ್ರೀಧರರು ಮೃದುಸ್ವಭಾವದ
ಭಕ್ತಪೋಷಣೆಯಾಗಬೇಕೆಂದು ಪ್ರಾರ್ಥಿಸಲು ಒಪ್ಪಿದ ದೇವೆಯು ಅಂದಿನಿಂದ ಸೌಮ್ಯವಾಗಿದ್ದಾಳೆಂದು ಪ್ರತೀತಿ
ಇದೆ.
ಯಾವ ಕ್ಷೇತ್ರದಲ್ಲಿಯೂ ಇಲ್ಲದ ವಿಶೇಷತೆ ಸಿಗಂಧೂರಿನಲ್ಲಿ
ಕ್ಷೇತ್ರದಲ್ಲಿದೆ. ಕಳ್ಳರಿಂದ ತಮ್ಮ ರಕ್ಷಣೆ ಪಡೆಯಲು ಇಲ್ಲಿ ಬೋರ್ಡ್ ಕೊಡುವ ಪದ್ದತಿಯಿದೆ. ಜಮೀನು,
ತೋಟ, ಗದ್ದೆ, ಬೇಣ ಮತ್ತು ಹೊಸ ಕಟ್ಟಡಗಳಿಗಳಲ್ಲಿ ವಸ್ತುಗಳಿಗೆ "ಶೀದೇವಿಯ ರಕ್ಷಣೆ ಇದೆ"
ಎಂಬ ಬೋರ್ಡ್ ಹಾಕಿದರೆ ಕಳ್ಳತನವಾಗುವುದಿಲ್ಲ. ಒಂದೊಮ್ಮೆ ಕಳ್ಳನಿಗೆ ಗೊತ್ತಾಗದೇ ಕದ್ದರೂ ಅವನಿಗೆ
ತೊಂದರೆಯಾಗಿ ಕದ್ದ ಮಾಲನ್ನು ವಾಪಾಸು ತಂದಿಟ್ಟು ಹೋಗುವನು. ಶಿವಮೊಗ್ಗ ಹಾಗು ಉತ್ತರ ಕನ್ನಡ ಜಿಲ್ಲೆಯ
ಮೂಲೆ ಮೂಲೆಯಲ್ಲಿ ಶ್ರೀದೇವಿಯ ರಕ್ಷಣೆಯ ಬೋರ್ಡುಗಳನ್ನು ಕಾಣಬಹುದು.
ದಾರಿಯ
ವಿವರ : ಈ ಪರಮ ಪವಿತ್ರ ಕ್ಷೇತ್ರಕ್ಕೆ ಹೋಗಲು ಕುಂದಾಪುರದಿಂದ ಕೊಲ್ಲೂರು ನಿಟ್ಟೂರು ಮಾರ್ಗವಾಗಿ
ಹೋಗಬೇಕು. ಅಂತೆ ಸಾಗರವನ್ನು ತಲುಪಿ ಅಲ್ಲಿಂದ ಈ ತಾಯಿಯ ಸನ್ನಿಧಾನಕ್ಕೆ ತೆರಳಬಹುದು.
ವಿಳಾಸ :-
ಶ್ರೀ ಚೌಡೇಶ್ವರೀ ದೇವಸ್ಥಾನ,
ಸಿಗಂಧೂರು, ಸಾಗರ ತಾ|
ಶಿವಮೊಗ್ಗ ಜಿ| ಕರ್ನಾಟಕ |