Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Sri Katkeri Kalikamba Temple, Katkere, Koteshwara.


Sri Mahadevi Kalikamba Temple, Katkere, Koteshawar.
ಶ್ರೀ ಮಹಾದೇವಿ ಕಾಳಿಕಾಂಬಾ ದೇವಸ್ಥಾನ, ಕಟ್ಕೇರೆ, ಕೋಟೇಶ್ವರ||

Sri Katkere Kalikamba ammanavaru, Koteshwara. Kundapura -Tq
ಶ್ರೀ ಕಟ್ಕೇರೆ ಕಾಳಿಕಾಂಬಾ ಅಮ್ಮನವರು, ಕೋಟೇಶ್ವರ.


ಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ ಕೋಟೇಶ್ವರದಿಂದ ಹಾಲಾಡಿ ಮಾರ್ಗವಾಗಿ 3-4 ಕಿ.ಮೀ ಸಾಗಿದಾಗ ನಮ್ಮ ಎಡಭಾಗಕ್ಕೆ ಕಟ್ಕೆರೆ ಶ್ರೀ ಮಹಾದೇವಿ ಕಾಳಿಕಾಂಬಾ ಅಮ್ಮನವರ ದೇವಾಲಯಕ್ಕೆ ಹೋಗುವ ಮಹಾನ್ ಸ್ವಾಗತಗೋಪುರ ಕಾಣಸಿಗುತ್ತದೆ. ಅಲ್ಲಿಂದ ಅದೇ ಮಾರ್ಗವಾಗಿ ನಾವು ಮುಂದೆ ಹೆಚ್ಚು – ಕಡಿಮೆ 1.5 ಕಿ.ಮೀ ಸಾಗಿದಾಗ ಅಮ್ಮನವರ ಭವ್ಯದೇಗುಲ ಕಾಣಸಿಗುತ್ತದೆ.

ಹೀಗೆ ಭವ್ಯ ದೇಗುಲವನ್ನು ತಲುಪಿ ಅಲ್ಲಿ ನಾವು ಅಲ್ಲೊಂದು ಅಚ್ಚರಿಯನ್ನು ಕಾಣುತ್ತೇವೆ. ಭವ್ಯ ದೇವಾಲಯವನ್ನು ತಲುಪಿದ ನಾವು ಮಹಾದೇವಿಯ ದರುಶನಕ್ಕಾಗಿ ದೇವಾಲಯವನ್ನು ಒಳಹೊಕ್ಕಾಗ ನಮಗೆ ಒಂದು ಅಚ್ಚರಿ ಕಾಣಸಿಗುತ್ತದೆ. ಅದೇನೆಂದರೆ ಶ್ರೀ ಸಾಕ್ಷಾತ್ ಆದಿಶಕ್ತಿಯಾದ ಮಹಾದೇವಿ ಕಾಳಿಕಾಂಬಾ ಅಮ್ಮನವರು. ನಿಮಗೆ ಶ್ರೀ ದೇವಿಯಲ್ಲಿನ ಅಚ್ಚರಿಯಾದರೂ ಏನು ಎಂಬ ಕಾತರಕ್ಕೆ ಶ್ರೀ ಕಾಳಿಕಾಂಬಾ ಮಾತೆಯ ಭವ್ಯವಾದ ಸರಿಸುಮಾರು 10-12 ಅಡಿ ಎತ್ತರದ ವಿಗ್ರಹ. ಆ ವಿಗ್ರಹವನ್ನು ಒಮ್ಮೆ ನೋಡಿದಾಗ ನಮಗೆ ಭಯದೊಂದಿಗೆ ಭಕ್ತಿಯ ಭಾವವು ಮೂಡುತ್ತದೆ. ಏಕೆಂದರೆ ಮಾತೆಯ ವಿಗ್ರಹವು ದೇವಾಲಯದ ಮಾಡಿನ ಕೊನೆಯನ್ನು ಮುಟ್ಟುವಂತಿದ್ದು ಅತ್ಯಂತ ತಾಮಸ ರೂಪದಲ್ಲಿ ಅಮ್ಮನವರು ಶೋಭಿಸುತ್ತಾ ಇದ್ದಾಳೆ. ಅವಳನ್ನು ಒಮ್ಮೆ ಕಂಡಾಗ ಭಯ ಉಂಟಾದರೂ ನಂತರದಲ್ಲಿ ಮಾತೆಯ ದಿವ್ಯತೆಯಿಂದ ನಮ್ಮ ಕಂಗಳು ಮತ್ತೆ-ಮತ್ತೆ ದೇವಿಯನ್ನು ಕಣ್ತುಂಬಿಕೊಳ್ಳಬೇಕೆಂಬ ಹಂಬಲವನ್ನು ಮೂಡಿಸುತ್ತದೆ.
ಹೀಗೆ ಶ್ರೀ ಮಹಾದೇವಿ ಕಾಳಿಕಾಂಬಾ ಅಮ್ಮನವರು ಅತ್ಯಂತ ಎತ್ತರದ ಭವ್ಯ ದಾರು ಮೂರ್ತಿಯಲ್ಲಿ ನೆಲೆಸಿ ಭಕ್ತರನ್ನು ಪೊರೆಯುತ್ತಾ ಇದ್ಧಾಳೆ. ಮಾತೆಯು ನಾಲ್ಕು ಕೈಗಳನ್ನು ಹೊಂದಿ ಕ್ರಮವಾಗಿ ಖಡ್ಗ, ಪರಶು, ರುಂಡ ಮತ್ತು ಕಪಾಲವನ್ನು ಧಾರಣೆ ಮಾಡಿದ್ದಾಳೆ.  ನಾಗಪಾಸದಿಂದಾವೃತವಾದ ಕಿರೀಟವನ್ನು ಧರಿಸಿ, ನಾಲಗೆಯನ್ನು ಹೊರ ಚಾಚಿದ್ದಾಳೆ. ಶ್ರೀ ಕಾಳಿಕಾಂಬೆಯು ಇಲ್ಲಿ ಭಕ್ತರ ಪಾಲಿನ ಅಭಯದಾಯಿನಿಯಾಗಿದ್ದಾಳೆ. ಭಕ್ತರು ಭಕ್ತಿಯಲ್ಲಿ “ಮಾದೇವಿಯಮ್ಮ” ಎಂದೆ ಕರೆಯುತ್ತಾರೆ. ಶಿಷ್ಟರ ಪಾಲಿಗೆ ಉಗ್ರರೂಪಿಣಿಯಾದ ತಾಯಿಯು ಭಕ್ತಿ ಎಂಬ ಒಳಗಣ್ಣನ್ನು ತೆರೆದು ನೋಡಿದಾದ ಸೌಮ್ಯಳಾಗಿ ಕಂಡರೆ, ದುಷ್ಟರ ಪಾಲಿಗೆ ಭಯಂಕರ ರೂಪದಲ್ಲಿ ಭೀಕರವಾಗಿ ಕಾಣುತ್ತಾಳೆ.
ಶ್ರೀ ಮಹಾದೇವಿ ಕಾಳಿಕಾಂಬೆ(Mahadevi Kalikamba) ಅಮ್ಮನವರು ಇಲ್ಲಿನ ಮಹಾನ್ ಶಕ್ತಿ ಚೇತನವನ್ನುವುದು ಅಷ್ಟೇ ಸತ್ಯ. ಮಾತೆಯ ದಾರು ಬಿಂಬ(ಮರದ ವಿಗ್ರಹ) ವನ್ನು ಕಂಡಾಗ ನಮಗೆ ಸಾಮಾನ್ಯವಾಗಿ ಕಾಳಿಕೆಯಂತೆ ಕಂಡರೂ ಅದನ್ನು ಸರಿಯಾಗಿ ಗಮನಿಸಿದಾಗ ‘ಮಹಿಷಮರ್ದಿನಿಯ’ ವಿಗ್ರಹವೆಂದು ಬಾಸವಾಗುತ್ತದೆ. ಏಕೆಂದರೆ ಅಮ್ಮನವರು ಉಗ್ರರೂಪವನ್ನು ತಾಳಿ ಒಂದು ‘ಮಹಿಷ ಅಥವಾ ಕೋಣನ’ ಮೇಲೆ ನಿಂತ ಭಂಗಿಯಲ್ಲಿದೆ. ಹೀಗೆ ದೇವಿಯು ‘ಮಹಿಷ’ ಅತವಾ ಕೋಣದ ತಲೆಯ ಮೇಲೆ ನಿಂತಿರುವುದನ್ನು ಕಂಡಾಗ ಅದು ‘ಮಹಿಷಮರ್ದಿನಿ’ ಎಂದು ಅನಿಸುವುದರೊಂದಿಗೆ ಮುಂದೆ ಜನರ ಭಕ್ತಿ-ಭಾವಕ್ಕೆ ತಕ್ಕಂತೆ ಶ್ರೀ ಮಹಾದೇವಿ ಕಾಳಿಕಾಂಬಾ ಎಂದಾಗಿರಬೇಕು ಎಂಬುದು ಅನಿಸುತ್ತದೆ.
ಒಟ್ಟಾರೆಯಾಗಿ ದೇವಿಯು ಅತ್ಯಂತ ಭವ್ಯವಾಗಿ, ಮಹಾನ್ ಮೂರ್ತಿಯಾಗಿ, ತಾಮಸರಿಗೆ ತಾಮಸಿಯು; ಸಾತ್ವಿಕರಿಗೆ ಸೌಮ್ಯಳೂ ಆಗಿ ಬೇಡಿ ಬಂದವರ ಪಾಲಿನ ಆಶ್ರೀತ ವತ್ಸಲೆಯಾಗಿದ್ದಾಳೆ. ಹೀಗೆ ಮಾತೆಯ ದೇವಾಲಯ ಉತ್ತಾರಾಭಿಮುಖವಾಗಿ ನಿರ್ಮಿತವಾಗಿದೆ. ಅಮ್ಮನವರ ದೇವಾಯಲವನ್ನು ಇತ್ತಿಚೆಗೆ ನವೀಕರಣ ಮಾಡಲಾಗಿದೆ. ಅಂತೆಯೇ ದೇವಾಲಯ ವಿಶಾಲವಾದ ಸ್ಥಳವನ್ನು ಹೊಂದಿದ್ದು ಇಲ್ಲಿ ಜಾತ್ರಾ ಸಂದರ್ಭದಲ್ಲಿ ವಿಶೇಷ ಪೂಜಾ-ಕೈಂಕರ್ಯಗಳು ನಡೆಯುತ್ತದೆ.
ನಾವು ಶ್ರೀ ಕಟ್ಕೇರಿ ಕಾಳಿಕಾಂಬೆಯ(Katkere Kalikambe) ಬಗ್ಗೆ ಅಲ್ಲಿನ ಜನರ ಹಾಗೂ ಅಮ್ಮನವರ ನಂಬಿ-ನಡೆದುಕೊಂಡು ಬಂದಂತಹ ಭಕ್ತರಲ್ಲಿ ಕೇಳಿದಾಗ ಕೆಲವಾರು ದಂತಕಥೆಗಳು ಕೇಳಿಬರುತ್ತದೆ. ಅದರಲ್ಲಿ ಹೆಚ್ಚಿನ ಜನರ ಹಾಗೂ ಹಿರಿಯರ ಬಾಯಿಯಲ್ಲಿ ಬರುವ ಕಥಾನಕವು ಇಂತಿದೆ :
ದಂತ ಕಥೆ : ಪುರಾತನ ಕಾಲದಲ್ಲಿ ನಡೆದ ಒಂದು ಘಟನೆಯನ್ನು ಹಿರಿಯರೊಬ್ಬರು ವಿವರಿಸುತ್ತಾ ಇಂತೆಂದು ಹೇಳುತ್ತಾರೆ, ದೇವಾದಿ-ದೇವತೆಗಳು ಅದರಲ್ಲೂ ಆದಿಶಕ್ತಿ ಸ್ವರೂಪಿಣಿಯಾದ ಮಾತೆ ಶ್ರೀ ಕಾಳಿಕಾಂಬೆಯು ಇಲ್ಲಿ ನೆಲೆಯಾಗುವ ಮುನ್ನ ಅವಳು ಓರ್ವ ಕುಟುಂಬದಲ್ಲಿ ಜನಿಸಿ ತನ್ನ ಲೀಲಾ-ವಿಲಾಸವನ್ನು ತೋರುತ್ತಾಳಂತೆ. ಇವಳು ಮಾದೇವಿ ಎಂದು ನಾಮಾಂಕಿತದಲ್ಲೂ ಕರೆಸಿಕೊಂಡು ಇದ್ದವಳಂತೆ. ಇವಳಿಗೆ ಅಕ್ಕಂದಿರೂ, ಅಣ್ಣಂದಿರೂ ಇರುತ್ತಾರಂತೆ. ಇವಳೇ ಕಿರಿಯವಳಾಗಿ ಹುಟ್ಟಿ ಎಲ್ಲರ ಪ್ರೀತಿ-ಪಾತ್ರಲಾಗಿ ಮುದ್ದು-ಮುದ್ದಾಗಿ ಬೆಳೆಯುತ್ತಾಳಂತೆ.
          ಹೀಗೆ ಒಂದು ದಿನ ಯಾವುದೋ ಒಂದು ಉತ್ಸವಾದಿಗಳಿಗೆ ಹೋಗಲು ಮಾದೇವಿಯ ಅಕ್ಕಂದಿರು ಮತ್ತು ಅಣ್ಣಂದಿರು ತೀರ್ಮಾನಿಸುತ್ತಾರಂತೆ. ಹಾಗೇ ಮಾದೇವಿ(ಶ್ರೀ ಮಹಾದೇವಿ ಕಾಳಿಕಾಂಬಾ)ಗೆ ಆ ಸಮಯದಲ್ಲಿ ಕಾಲು ಬೇನೆ ಆಗಿರುತ್ತದೆ ಎಂಬುದು ಹಿರಿಯರು ಹೇಳುವ ಕಥೆಯಿಂದ ತಿಳಿಯುತ್ತದೆ. ಹೀಗೆ ಮಾದೇವಿಯ ಅಕ್ಕ, ಅಣ್ಣಂದಿರು ಜೊತೆಗೂಡಿ ಉತ್ಸವಕ್ಕೆ ನಡೆದೆ ತೆರಳುತ್ತಾರಂತೆ. ಆದರೆ ಮಾದೇವಿಗೆ ನಡೆಯುತ್ತಾ ಕಾಲು ಬೇನೆ ಉಲ್ಬಣವಾಗುವುದು ಎಂದು ತಿಳಿಯುತ್ತದೆ.
ಹಾಗೇ ಮಾದೇವಿಗೆ ತನ್ನ ಅಣ್ಣ ಹಾಯ್ಗುಳಿಯು(ಸಾಮಾನ್ಯವಾಗಿ ಹಾಯ್ಗುಳಿ ಎಂಬುದು ನಂದಿಯನ್ನು ಹೋಲುವ ದೈವ, ಒಂದು ಅಂಬೋಣದ ಪ್ರಕಾರ ನಂದಿಯ ರೂಪಾಂತರವೇ ಹಾಯ್ಗುಳಿ ಇರಬಹುದು ಎಂದು ತಿಳಿಯುತ್ತದೆ) ಅತೀ ಪ್ರೀತಿಯವನು ಹಾಗೂ ಅವನೀಗೂ ಕೂಡಾ ಮಾದೇವಿಯು ಅತೀ ಪ್ರೀತಿ ತಂಗಿಯಾಗಿರುತ್ತಾಳಂತೆ. ಹೀಗೆ ತಂಗಿಯ ವೇದನೆಯನ್ನು ಕಂಡ ಹಾಯ್ಗುಳಿಯು ತಂಗಿಯನ್ನು ತನ್ನ ತಲೆಯ ಮೇಲೆ ಕೂರಿಸಿಕೊಂಡು ಮುನ್ನಡೆಯುತ್ತಾನಂತೆ. ಹೀಗೆ ಮುಂದೆ ಸಾಗುತ್ತಾ ಇದ್ದಂತೆ ಮಾದೇವಿಯ ಇತರ ಸೋದರ-ಸೋದರೀಯರು ಮುಂದೆ ಹೋಗಿ ಆಗಿರುತ್ತದಂತೆ. ಹೀಗೆ ಮಾದೇವಿಯನ್ನು ಹೊತ್ತು ಸಾಗುತ್ತಾ-ಸಾಗುತ್ತಾ ಹಾಯ್ಗುಳಿಗೆ ಮಾದೇವಿಯ ಭಾರವನ್ನು ಸೈರಿಸಲು ಕಷ್ಟವಾಗುತ್ತದೆ. ಅವನೂ ಕೂಡಾ ಯಾವುದೋ ಮಾಯೇಗೆ ಒಳಗಾಗಿ ಸುಸ್ತಾಗುತ್ತಾನಂತೆ. ಆದರೂ ತಂಗಿಯ ಆಸೆಯನ್ನು ಈಡೇರಿಸುವ ಉದ್ದೇಶದಿಂದ ಹಾಗೇ ಮುಂದೆ ಸಾಗುವಾಗ ಹಲವಾರು ಕೆರೆಗಳ ಕಟ್ಟು-ಕಟ್ಟು ಗಳು ಕಾಣಸಿಗುತ್ತದೆ . ಆ ಸ್ಥಳವನ್ನು ತಲುಪಿದ ಕೂಡಲೇ ಮಾದೇವಿಯು ತನ್ನ ಅಣ್ಣನಲ್ಲಿ ಇಲ್ಲಿಯೇ ನಿಲ್ಲಿಸು ಎಂದು ಹೇಳುತ್ತಾಳಂತೆ. ಆದರೇ ದೇವಿಯ ಮಾತನ್ನು ಕೇಳದೆ ಮುಂದೆ ಸಾಗಿದಾಗ ತನ್ನ ಮಹಿಮಾ ರೂಪದಿಂದ ಮೈದಾಳಿದ “ಶ್ರೀ ಮಹಾದೇವಿ ಕಾಳಿಕಾಂಬೆ” ತನ್ನ ಅಣ್ಣ ಹಾಯ್ಗುಳಿಯ ಶಿರದ ಮೇಲೆ ಇನ್ನು ಎತ್ತರಕ್ಕೆ ಬೆಳೆದು ಉಗ್ರರೂಪದಿಂದ ತನ್ನ ಅಣ್ಣನ ಶಿರವನ್ನು ಮೆಟ್ಟಿ ನಿಲ್ಲತ್ತಾಳಂತೆ. ಆಗ ಹಾಯ್ಗುಳಿ ಅದೇ ಸ್ಥಳದಲ್ಲಿ ಕೆಳಕ್ಕೆ ಕುಸಿದು ತನ್ನ ತಂಗಿಯ ಭಾರವನ್ನು ತಾಳದೆ ಕೆಳಕ್ಕೆ ಕುಸಿದು ಕುಳಿತುಕೊಳ್ಳುತ್ತಾನಂತೆ. ಹೀಗೆ ಶ್ರೀ ಮಹಾದೇವಿ ಕಾಳಿಕಾಂಬೆಯು ಕಟ್ಕೆರೆಯ ಸುಂದರ ಪೃಕೃತಿಯ ಸೋಬಗು ಹಾಗೂ ಕಟ್ಟು-ಕಟ್ಟು ಕೆರೆಗಳ ಸೊಬಗಿಗೆ ಮನಸೋತು ತನ್ನ ಅಣ್ಣನ್ನು ಅಲ್ಲಿಯೇ ತುಳಿದು ಮುಂದೆ ಅದೇ ಸ್ಥಳದಲ್ಲಿ ಪ್ರಸನ್ನಳಾಗಿ ನೆಲೆಸಿ ನಿಲ್ಲುತ್ತಾಳಂತೆ. ಹೀಗೆ ಕಟ್ಟು-ಕಟ್ಟು ಕೆರೆಗಳು ಇರುವ ಊರೆ ಮುಂದೆ “ಕಟ್ಕೇರೆ” ಎಂದು ಬದಲಾಯಿತು ಎಂದು ಈ ಊರಿನ ಜನರಿಂದ ತಿಳಿದುಬರುವ ಅಂಶವಾಗಿದೆ.
ಈ ದಂತಕಥೆಯಂತೆ ತನ್ನ ಅಣ್ಣನ ಶಿರದ ಮೇಲೆ ಬೃಹದಾಕಾರವಾಗಿ ಉಗ್ರವಾಗಿ ಬೆಳೆದು ಮಾದೇವಿ, ಕಟ್ಕೇರೆ ಪ್ರದೇಶ ಸೀಮೆಯಲ್ಲಿ ಪ್ರಸನ್ನಳಾಗಿ ನೆಲೆ ಬಯಸಿದಾಗ ಅಲ್ಲಿನ ಜನರಿಂದ ಮಾತೆಯ ದಿವ್ಯ ಮಂದಿರ ನಿರ್ಮಾಣವಾಗುತ್ತದೆ. ಮುಂದೆ ದೇವಿಯು  ನಂಬಿ ಬಂದ ಭಕ್ತರ ಆರಾಧ್ಯ ದೇವಿಯಾಗಿ ನೆಲೆಸುತ್ತಾಳೆ. ಹೀಗೆ ಮಾತೆಯು ಮುಂದೆ ಈ ಸ್ಥಳದಲ್ಲಿ ತನ್ನ ಪರಿವಾರಗಳನ್ನು ಒಳಗೂಡಿಕೊಂಡು ನೆಲೆಸಿ ಈ ಸೀಮೆಗೆ ತಾಯಿಯಾಗುತ್ತಾಳೆ. ಹೀಗೆ “ಶ್ರೀ ಮಹಾದೇವಿ ಕಾಳಿಕಾಂಬಾ ಅಮ್ಮನವರ” ಚರಿತೆಯನ್ನು ತಿಳಿದ ನಾವು ಕೂಡಾ ಅಮ್ಮನ ಲೀಲಾ ವಿಲಾಸಕ್ಕೆ ಮಾರುಹೋಗದೇ ಇರಲಾರೆವು.
ಮಾತೆಯ ಸೋದರ-ಸೋದರೀಯರು ಸೋದರಿಯ ಶಕ್ತಿಯನ್ನ ಕಂಡು ಆಶ್ಚರ್ಯಭರಿತರಾಗಿ ಮಾತೆಯನ್ನು ನಮಿಸಿ ಅವಳೊಂದಿಗೆ ಪರಿವಾರ ಶಕ್ತಿಗಳಾಗುತ್ತಾರೆ. ಹೀಗೆ ದೇವಿಯು ಈಗಲು ನಿಂತಿರುವುದು ತನ್ನ ಅಣ್ಣನಾದ ಹಾಯ್ಗುಳಿಯ ಶಿರದ ಮೇಲೆ ಎಂದು ಇಲ್ಲಿನ ಜನರ ಅಭಿಪ್ರಾಯ.
ಇಲ್ಲಿ ಸಾಮಾನ್ಯವಾಗಿ ದೈವಾಲಯಗಳಂತೆ ಪೂಜೆ-ಪುನಸ್ಕಾರಗಳನ್ನು ನಡೆಸುತ್ತಾರೆ. ದೇವಿಗೆ ಶುಕ್ರವಾರ ಮತ್ತು ಸಂಕ್ರಾಂತಿಯ ದಿನದಂದು ವಿಶೇಷ ಪೂಜಾ-ವಿನಿಯೋಗಾದಿಗಳು ನಡೆಯುತ್ತದೆ. ಅಂತೆಯೇ ಪ್ರತಿ ವರ್ಷ ಜನವರಿ 26 ರಂದು ಅಮ್ಮನವರ ವಾರ್ಷಿಕ ಕೆಂಡ ಸೇವೆ ಇತ್ಯಾದಿಗಳು ನಡೆಯುತ್ತದೆ. ಈ ಸಮಯದಲ್ಲಿ ಹರಿಕೆಯ ಕುರಿ, ಕೋಳಿಗಳನ್ನು ಬಲಿಕೊಡುವ ಸಂತ್ರದಾಯವಿದೆ. ಶ್ರೀ ಕಾಳಿಕೆಯು ಇಲ್ಲಿ ರಕ್ತ ಪ್ರೀಯಳಾಗಿ ಅಂದು ನೂರಾರು ಕುರಿ-ಕೋಳಿಗಳನ್ನು ಬಲಿಕೊಡಲಾಗುತ್ತದೆ.
ಹಾಗೇ ಪರಿವಾರ ಶಕ್ತಿಗಳಾಗಿ ನಾಗದೇವರೂ ಕೂಡಾ ಇಲ್ಲಿ ಇದ್ದಾನೆ. ಅಮ್ಮನವರ ದೇವಾಲಯವೂ ವಿಶಾಲವೂ-ಭವ್ಯವೂ ಆಗಿದ್ದು ‘ಪುಷ್ಕರ್ಣಿ’ ಕೂಡಾ ಇಲ್ಲಿದೆ. ಅಂತೇ ಶ್ರೀ ದೇವಿಯಲ್ಲಿ ಕಾರಣೀಕ ದೈವವಾಗಿರುವ ಅಸೋಡು ಶ್ರೀ ನಂದಿಕೇಶ್ವರ ಕೂಡಾ ನಿನ್ನ ಜೊತೆಯಲ್ಲಿ ನೆಲೆಸಲು ನನಗೊಂದು ಅವಕಾಶವನ್ನು ಕೊಡು ಎಂದಾಗ ದೇವಿಯು ನೀನು ಪುರುಷನಾದ ಕಾರಣ ನನ್ನೊಂದಿಗೆ ನೆಲೆಸುವುದು ಸರಿಯಲ್ಲ. ನೀನು ಹೀಗೆ ಮುಂದೆ ನಡೆದು ಅಸೋಡು ಗ್ರಾಮದಲ್ಲಿ ನೆಲೆಸು ಎಂದಳಂತೆ. ಅದೇ ಪ್ರಕಾರವಾಗಿ ಅಸೋಡು ಶ್ರೀ ನಂದಿಕೇಶ್ವರ ಇಂದು ಅಸೋಡು ಗ್ರಾಮದಲ್ಲಿ ಕಾರಣೀಕ ರೂಪಿ ದೈವವಾಗಿ ನೆಲೆಸಿದ್ದಾನೆ.
ಹೀಗೆ ದೇವಿಯನ್ನೊಮ್ಮೆ ಕಂಡು ತಾವೂ ಕೂಡಾ ಪುನೀತರಾಗಿ, ಮಾತೆಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗಿ. ಮಹಾಮಾತೆ “ಶ್ರೀ ಮಹಾದೇವಿ ಕಾಳಿಕಾಂಬೆ’ ಯು ಸರ್ವರಿಗೂ ಸನ್ಮಂಗಲವನ್ನುಂಟುಮಾಡಲಿ.

ವಿಳಾಸ : -
ಶ್ರೀ ಮಹಾದೇವಿ ಕಾಳಿಕಾಂಬಾ ಅಮ್ಮನವರ ದೇವಸ್ಥಾನ,
ಕಟ್ಕೇರೆ, ಕೋಟೇಶ್ವರ – ಗ್ರಾ ||
ಕುಂದಾಪುರ – ತಾ || ಉಡುಪಿ- ಜಿಲ್ಲೆ ||