ಶ್ರೀ ಮಹಾದೇವಿ ಮಾರಿಯಮ್ಮ ದೇವಸ್ಥಾನ, ಕೋಟೇಶ್ವರ, ಕುಂದಾಪುರ ತಾ|
Shree Mahadevi Maariyamma Temple, Koteshwara, Kundapura tq.
Sri Mahadevi Mariyamma, Koteshwara. |
Shree Yakshi ammanavaru |
ಈ ಪರಮ ಪವಿತ್ರ ಕ್ಷೇತ್ರದಲ್ಲಿ ಅಂಬಿಕೆಯು ತನ್ನ ಪರಿವಾರ ಶಕ್ತಿಯಾಗಿ ಯಕ್ಷೇಶ್ವರಿ ಅಮ್ಮ, ರಕ್ತೇಶ್ವರಿ ಹಾಗೂ ಮಾತೆಯನ್ನು ಸ್ಥಾಪನೆ ಮಾಡಿದ ಶ್ರೀ ಜೋಗಿಪುರುಷ ರನ್ನು ಇಲ್ಲಿ ಸ್ಥಾಪಿಸಲಾಗಿದೆ. ಮಹಾತಾಯಿಗೆ ಪ್ರತಿವರ್ಷವೂ ಮಾರಿಪೂಜೆ ನಡೆಯುತ್ತದೆ. ಈ ವೇಳೆಯಲ್ಲಿ ಶ್ರೀ ದೇವಿಯನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸಲಾಗುತ್ತದೆ. ಹಾಗೇ ಇಲ್ಲಿ ಈ ವೇಳೆಯಲ್ಲಿ ಪರಿವಾರ ಶಕ್ತಿಗಳಿಗೆ ಬಲಿಯನ್ನು ನೀಡಲಾಗುತ್ತದೆ.
ಈ ಸಮಯದಲ್ಲಿ ಊರ - ಪರವೂರ ಭಕ್ತರು ಅಮ್ಮನಿಗೆ ಪೂಜೆ- ಪುನಸ್ಕಾರಗಳನ್ನು ಗೈದು ಪುನೀತರಾಗುತ್ತಾರೆ. ಅಮ್ಮನನ್ನು ಈ ವೇಳೆಯಲ್ಲಿ ನೋಡುವುದೆ ಚಂದ. ಮಹಾತಾಯಿ ಮಾರಿಯಮ್ಮ ಮಂದಸ್ಮಿತಳಾಗಿ ಸರ್ವರ ಪೂರೆಯೋದು ಅವಳ ಮಕ್ಕಳಾದ ನಮಗೆ ಆನಂದ.
|
ಈ ದೇವಿಯೂ ಇಲ್ಲಿ ನೆಲೆಸಿದ ಬಗ್ಗೆ ಇಲ್ಲಿನ ಪೂಜೆ ಮಾಡುವ ಹಿರಿಯ ಬಳೆಗಾರ(ಜೋಗಿ) ವಂಶದವರ ನುಡಿಯಂತೆ ಈ ಮಹಾತಾಯಿ ತನ್ನ ಮೂರು ಶಕ್ತಿಗಳೊಂದಿಗೆ ಉತ್ತರ ಕನ್ನಡದಿಂದ ದಕ್ಷಿಣದೆಡೆಗೆ ಸಾಗಿ ಬಂದರಂತೆ. ಈ ಮೂರು ಶಕ್ತಿಗಳಲ್ಲಿ ಒಂದು ಮಂದಾರ್ತಿಯನ್ನು, ಒಂದು ಶಕ್ತಿ ಕೋಟ ಅಮೃತೇಶ್ವರಿಯಾಗಿಯೂ ಹಾಗೂ ಇನ್ನೊಂದು ಶಕ್ತಿ ಈ ಪರಮ ಪವಿತ್ರ ಕ್ಷೇತ್ರ ಕೋಟಿಲಿಂಗೇಶ್ವರನು ನೆಲೆಯಾದ ಕೋಟೇಶ್ವರದಲ್ಲಿ ಸಂಚಾರಗೈಯ್ಯುತ್ತಾ ಇದ್ದಳಂತೆ. ಹಾಗೇ ಈ ಮಹಾದೇವಿ ಮಾರಿಯಮ್ಮ ಇಲ್ಲಿ ಸಂಚಾರ ಬರುತ್ತಾ ಇಲ್ಲಿನ ಕೋಟಿತೀರ್ಥದ ಬಳಿ ಸಂಚಾರ ಬರುವಾಗ ಈ ಊರಿನಲ್ಲಿ ಜೋಗಿಪುರುಷನೆಂಬ ಮಹಾಮುನಿ ಒಬ್ಬ ತಪಗೈಯ್ಯುತ್ತಾ ಇದ್ದು ಈ ಜೋಗಿಪುರುಷನು ಅಮ್ಮನ ಭಯಂಕರ ರೂಪವನ್ನು ಕಂಡು ಬೆರಗಾಗಿ ನೀನು ಯಾರು? ಇಲ್ಲಿಗೆ ಯಾಕೆ ಬಂದಿರುವೆ ಎಂದನಂತೆ. ಅದಕ್ಕೆ ಆದಿಶಕ್ತಿ ತನ್ನ ಉಗ್ರ ರೂಪಿನಿಂದಲೇ ನನಗೆ ಇಲ್ಲಿ ನೆಲೆ ಬೇಕು ಎಂದಾಗ ಮುನಿಯು ಇಲ್ಲಿ ನಮ್ಮ ಒಡೆಯ “ಕೋಟಿಲಿಂಗೇಶ್ವರ” ಇದ್ದಾನೆ, ಅವನಲ್ಲಿ ಅಪ್ಪಣೆ ಪಡೆದ ನಂತರವೇ ಇಲ್ಲಿ ನಿನಗೆ ಸ್ಥಾನ ಕೊಡಬಹುದು ಎಂದು ಈ ಮುನಿ ಪರಶಿವನಲ್ಲಿ ಕೇಳಿದಾಗ ಪರಶಿವ ಇವಳು ಮತ್ಯಾರು ಅಲ್ಲ, ಈಕೆ ಆದಿಶಕ್ತಿ ಸ್ವರೂಪಿಣಿಯಾದ ದುರ್ಗಾ ಮಾರಿಕಾಂಬೆ. ಇವಳ ಶಕ್ತಿ ಅಪಾರ. ಇವಳು ನನಗಿಂತ ಮೊದಲು ಇರಬೇಕು, ಹಾಗೂ ನನ್ನನ್ನು ಕಾಣುವ ಭಕ್ತರು ಮೊದಲು ಇವಳನ್ನು ಕಂಡು ಬರುವಂತೆ ಆಗಬೇಕು ಎಂದನಂತೆ. ಹಾಗೆ ಇವಳಿಗೆ ನನ್ನ ಬಲದಲ್ಲಿ ಮುಂದೆ ಇರುವ ಅಶ್ವಥ್ಥ ವೃಕ್ಷದ ಬಳಿ ಸ್ಥಾನವನ್ನು ಕಲ್ಪಿಸೆಂದು ಪರಶಿವನು ಅದೃಶ್ಯನಾದನು ಎಂಬುದು ತಿಳಿಯುತ್ತದೆ.
ಹಾಗೇ ಈ ಜೋಗಿಪುರುಷನು ಆದಿಶಕ್ತಿ ಮಹಾದೇವಿ ಮಾರಿಯಮ್ಮನ ಶಕ್ತಿಯನ್ನು ಅರಿತು ತಾಯಿಯನ್ನು ಈಗ ಇರುವ ರಥಬೀದಿಯ ಅಶ್ವಥ್ಥ ವೃಕ್ಷದ ಬಳಿಯಲ್ಲಿ ಪ್ರತಿಷ್ಠಾಪಿಸಿದನು ಎಂಬುದು ಇಲ್ಲಿನ ಹಿರಿಯರ ಮೂಲಕ ತಿಳಿದು ಬರುತ್ತದೆ.
ಹಾಗೇ ತಾಯಿ ಇಲ್ಲಿ ದಾರುಬಿಂಬದಲ್ಲಿ ಶಕ್ತಿ ರೂಪದಲ್ಲಿ ನೆಲೆಸಿ ತನ್ನೋಂದಿಗೆ ಪರಿವಾರ ಶಕ್ತಿಯೊಂದಿಗೆ ನೆಲೆಸಿ ಭಕ್ತರನ್ನು ಕಾಯುತ್ತಾ ಇದ್ದಾಳೆ. ಅಮ್ಮನ ಪವಾಡ ಅಪಾರವೂ, ಅನನ್ಯವೂ ಆಗಿದೆ. ದಾರುಬಿಂಬ ಅರ್ಥಾತ್ ಮರದ ಮೂರ್ತಿಯಾಗಿದೆ.
ಇಲ್ಲಿನ ತಾಯಿಗೆ ಇತ್ತೀಚೆಗೆ ಭವ್ಯ ಮಂದಿರವನ್ನು ನಿರ್ಮಿಸಗಾಗಿದ್ದು ಅಮ್ಮನ ಬಿಂಬಕ್ಕೆ ಬೆಳ್ಳಿಯ ಸುಂದರ ಮುಖವಾಡ ಹೊದಿಸಲಾಗಿದೆ. ದೇವಿಯು ಚತುರ್ಭುಜೆಯಾಗಿ ತ್ರಿಶೂಲ, ಢಮರು, ಕಪಾಲ, ಖಢ್ಗವನ್ನು ಹಿಡಿದು ಶೋಭಾಯಮಾನವಾಗಿ ಶೋಭಿಸುತ್ತಾ ಇದ್ದಾಳೆ.
ಈ ದೇವಿ ನೆಲೆನಿಂತ ಈ ಪವಿತ್ರ ದೇವಾಲಯದ ಹಿಂದೆ ಬೃಹತ್ ಅಶ್ವತ್ ವೃಕ್ಷವನ್ನು ಇಂದಿಗೂ ಕಾಣಬಹುದು. ಅಮ್ಮನಿಗೆ ಸೋಣೇ ತಿಂಗಳಲ್ಲಿ ವಿಶೇಷವಾಗಿ “ಸೋಣೆ ಆರತಿ” ಬಹು ವಿಜೃಂಭಣೆಯಿಂದ ನಡೆಯುತ್ತದೆ. ಮಹಾತಾಯಿಗೆ ಭಕ್ತರು ಕೊಡಮಾಡುವ ಹರಕೆ ಸೀರೆಗಳನ್ನು ದೇವಿಗೆ ಉಡಿಸಿದಾಗ ಅದನ್ನು ಕಾಣುವುದೆ ಕಣ್ಣಿಗೆ ಅತ್ಯಾನಂದವನ್ನುಂಟು ಮಾಡುತ್ತದೆ.
ನೀವು ಒಮ್ಮೆ ಈ ಶ್ರೀ ಮಹಾದೇವಿ ಮಾರಿಯಮ್ಮನನ್ನು ನಿಮ್ಮ ಕಮಲಗಳಿಂದ ನೋಡಿ ಪುನೀತರಾಗಿ. ಮಹಾತಾಯಿಯ ಅನುಗ್ರಹಕ್ಕೆ ಪಾತ್ರರಾಗಿ.
ದಾರಿಯ ವಿವರ : ಇಲ್ಲಿಗೆ ಬರುವ ಭಕ್ತರು ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಬಂದರೆ ಈ ದೇವಾಲಯದ ಮೊದಲೇ ಅಮ್ಮನವರ ದೇವಾಲಯ ಕಾಣಸಿಗುತ್ತದೆ.
ವಿಳಾಸ:-
ಶ್ರೀ ಮಹಾದೇವಿ ಮಾರಿಯಮ್ಮ ದೇವಸ್ಥಾನ,
ರಥಬೀದಿ, ಕೋಟೇಶ್ವರ, ಕುಂದಾಪುರ- ತಾ||
ಉಡುಪಿ - ಜಿಲ್ಲೆ, ಕರ್ನಾಟಕ.