ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಂದಾರ್ತಿ, ಉಡುಪಿ ತಾ||
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ಕೆಂಡಸೇವೆ ಹಾಗೂ ರಥೋತ್ಸವಗಳೆರಡೂ ನಡೆಯುವ ದೇವಸ್ಥಾನ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ
ದಕ್ಷಿಣ ಭಾರತದಲ್ಲೇ ಅಪೂರ್ವ ದೇವಾಲಯವಾಗಿದೆ. ಅಲ್ಲದೇ ಭೂತಾಲಯ ಹಾಗು ದೇವಾಲಯ ಒಂದೇ ಆಗಿರುವ ಶ್ರೀ
ಮಂದಾರ್ತಿ ದೇವಳವು(Sri Mandarthi Durgaparameshwari Ammanavara Temple) ಹಲವು ವೈಶಿಷ್ಠ್ಯಗಳಿಂದ
ಕೂಡಿದೆ. ದೇವಳದಲ್ಲಿ ಧ್ವಜಸ್ಥಂಭವಿದ್ದರೂ ಧ್ವಜಾರೋಹಣ ಇರುವುದಿಲ್ಲ. ರಂಗಪೂಜೆ ಇದ್ದರೂ ನಿತ್ಯಬಲಿ
ಇರುವುದಿಲ್ಲ. ಇಲ್ಲಿನ ಪೂಜಾವಿಧಿಗಳಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವ ನೀಡಿದ್ದರೂ ದುರ್ಗಾಮಾತೆಗೆ
ಪ್ರಾದಾನ್ಯತೆಯನ್ನು ದೇವಳದ ಪ್ರಧಾನ ಹರಕೆ ಸೇವೆಯೇ ಯಕ್ಷಗಾನ ಬೆಳಕಿನ ಸೇವೆ (ಬಯಲಾಟ)ಯಾಗಿರುವುದು
ಕೂಡ ವಿಶೇಷವಾಗಿದೆ. ಯಕ್ಷಗಾನ ತಿರುಗಾಟ ಆರಂಭಿಸುವ ಮುನ್ನ ಶ್ರೀ ಬಾರಾಳಿ ಗಣಪತಿ(Barali
Ganapathi Temple) ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗೆಜ್ಜೆಕಟ್ಟಿದ ಅನಂತರ ಮಂದಾರ್ತಿ ಕ್ಷೇತ್ರದಲ್ಲಿ
ಗಣಪತಿ ಪೂಜೆಯೊಂದಿಗೆ ಸೇವೆಯಾಟ ನಡೆಸುವ ಸಾಂಪ್ರಾದಾಯ ಇಂದಿಗೂ ನಡೆಯುತ್ತದೆ.
View Larger Map
Shree Durgaparameshwari Temple, Mandarthi, Udupi Tq.
Sri Mandarhthi Durgaparameshwari |
ಸ್ಥಳ ಪುರಾಣ :-
ನಾಗಲೋಕದ ಶ್ರೀ ಶಂಕಚೂಡನೆಂಬ ನಾಗರಾಜನಿಗೆ
ವರಪ್ರಸಾದದಿಂದ ಜನಿಸಿದ ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿ ಎಂಬ ಐದು ಜನ ಹೆಣ್ಣುಮಕ್ಕಳು
ಮಹೇಶ್ವರನ ಮಗ ಸುಬ್ರಮಣ್ಯಸ್ವಾಮಿಯನ್ನು(Subramanya Swamy) ವಿವಾಹವಾಗುವ ಹಂಬಲದಿಂದ, ಸುಬ್ರಮಣ್ಯಸ್ವಾಮಿಯನ್ನು
ಕಾಣಲು ಕೈಲಾಸಕ್ಕೆ ತೆರಳಿ ಅಲ್ಲಿಯ ದ್ವಾರಪಾಲಕ ನಂದಿಯ(Nandikeshwara) ಶಾಪದಿಂದಾಗಿ ಸರ್ಪರೂಪದಲ್ಲಿ
ಭೂಲೋಕ ಸಹ್ಯಾದ್ರಿಪರತ್ವದ ಕಾಡ್ಗಿಚ್ಚಿನಲ್ಲಿಸಿಕ್ಕು ಪರಿತಪಿಸುತ್ತಿದ್ದರು. ವ್ಯಾಘ್ರವಾದ ಮಹರ್ಷಿಗಳು
ಸಹ್ಯಾದ್ರಿ ಪರತ್ವದ ಬಳಿ ಸಂಚರಿಸುವಾಗ ಅವರನ್ನು ನೋಡಿದ ನಾಗಕನ್ಯೆಯರು ಅವಸರವಾಗಿ ಓಡಾಡಿದಾಗ ಉಂಟಾದ
ತರಗಿಲೆಯ ಶಬ್ದಕ್ಕೆ ಹೌಹಾರಿದ ಮಹರ್ಷಿಗಳಿಂದ, ಗತಿ ಕುಂಟಿತವಾಗಿ ಬಿದಿರು ಮಳೆಗೆ ಶೀಮಿತವಾಗಿರುವಂತಹ
ಶಾಪಕ್ಕೆ ಆ ನಾಗಕನ್ಯೆಯರು ಗುರಿಯಾಗುತ್ತಾರೆ. ರಾಜಪುರುಷನೊಬ್ಬನಿಂದ ಶಾಪ ವಿಮೋಚನೆಯಾಗುವದೆಂದು ಮಹರ್ಷಿಗಳು
ಹರಸಿದಂತೆ ಆವಂತಿಯ ರಾಜ ದೇವವರ್ಮನು ರಾಜ್ಯಬ್ರಷ್ಠನಾಗಿ ವೇಷ ಮರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ
ತಿರುಗಿದಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ ಅವುಗಳನ್ನು ಒಂದು
ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ
ಸೇರಿದವು. ಅವುಗಳಲ್ಲಿ ಮಂದರತಿಯೆಂಬ ನಾಗ ಸರ್ಪವು ಸೇರಿದ ಜಾಗವೇ ಮಂದರತಿ ಕಾನನವೆಂಬ (ಮಂದಾರ್ತಿ)
ಹೆಸರಾಯಿತು.
Nagatheertha |
ಕಾಲಾನಂತರದಲ್ಲಿ ಆ ನಾಗ ಕನ್ಯೆಯರು
ದೇವವರ್ಮ ರಾಜನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ತಿಳಿಸಿದಂತೆ ದೇವವರ್ಮ ರಾಜನು, ಹೆಮಾದ್ರಿಯ ರಾಜಾದಿತ್ಯನ
ಏಕೈಕ ಪುತ್ರಿ ಜಲಜಾಕ್ಷಿಯನ್ನ ಪ್ರಾಣಾಪಾಯದಿಂದ ಬದುಕಿಸಿದ್ದಕ್ಕೆ ಆ ರಾಜನು ರಾಜ್ಯವನ್ನು ಹಾಗೂ ಮಗಳನ್ನು
ದಾರೆಯೆರೆಯುತ್ತಾನೆ.
ವ್ಯಾಘ್ರವಾದ ಮುನಿ ಮತ್ತು ತಾಮಸ ಗುಣದ
ಕಿರಾತ ತರುಣಿ ಮಾಲಿನಿಯೊಂದಿಗಿನ ಸಂಪರ್ಕದ ಅಕಾಲಿಕ ಗರ್ಭೋತ್ಪತ್ತಿಯಿಂದ ಜನಿಸಿದ ಮಹಿಷನು, ದೇವವರ್ಮ
ಮಹಾರಾಜನ ಪತ್ನಿ ಜಲಜಾಕ್ಷಿಯನ್ನು ಕಂಡು ಆಕೆಯ ರೂಪಲಾವಣ್ಯಕ್ಕೆ ಮನಸೋತು, ತನ್ನ ಮನೋಭಿಲಾಷೆಯನ್ನು
ತಿರಸ್ಕರಿಸಿದ ಆಕೆಯನ್ನು ಬಲಾತ್ಕರಿಸಲು ಮುಂದಾದಾಗ ರಕ್ಕಸನಿಂದ ತಪ್ಪಿಸಿಕೊಂಡು ಅರಮನೆ ಸೇರುತ್ತಾಳೆ.
ನಂತರ ಆ ರಾಜ ದಂಪತಿಗಳು ಮಂದಾರ್ತಿ ಕಾನನದಲ್ಲಿ ನೆಲೆಸಿದ್ದ ಸುದೇವ ಮುನಿಯ ಆಶ್ರಯದಲ್ಲಿದ್ದಾಗ ಮಹಿಷನ
ಆಣತಿಯಂತೆ ಮಹೋಧರ ರಕ್ಕಸನು ಮುನಿಯ ಮೇಲೆ ಶರಪ್ರಯೋಗಿಸತೊಡಗುತ್ತಾನೆ. ಆಗ ಮುನಿಯು ದೇವಿಯನ್ನು ಸ್ತುತಿಸಿದಾಗ
ರಕ್ಕಸನೆದುರು ಬೃಹದಾಕಾರದ ಹುತ್ತುವೊಂದು ಎದ್ದು ನಿಲ್ಲುತ್ತದೆ. ರಕ್ಕಸನಿಂದ ಎಲ್ಲ ಅಸ್ತ್ರಗಳು ಹುತ್ತದಲ್ಲಿ
ಮಾಯವಾಗುತ್ತದೆ. ರಾಜದಂಪತಿಗಳ ಪ್ರಾರ್ಥನೆಯಂತೆ ದೇವಿಯು ವೀರಭದ್ರ(Veerabada) ಹಾಯ್ಗಳಿ(Haiguli)
ಕಲ್ಲುಕುಟ್ಟಿಗ(Kalkuda) ಮತ್ತು ಬೊಬ್ಬರ್ಯ(Bobbarya) ದೈವಗಳ ಸಹಾಯದಿಂದ ಎಲ್ಲ ರಕ್ಕಸರ ಸಂಹಾರ
ಮಾಡಿದಳು.
Gopuram |
ನಂತರ ಮಹಿಷನು(Mahisha), ಸ್ವತಹ
ಯುದ್ದಕ್ಕೆ ಮುಂದಾಗಿ ತಾನು ಎಸೆದ ಅಸ್ತ್ರಗಳು ಕೂಡಾ ಮಾಯವಾಗಿ ಅವನ ಕಣ್ಣಿಗೆ ಒಮ್ಮೆ ಹುತ್ತವೂ ಮತ್ತೊಮ್ಮೆ
ಅಷ್ಟಭುಜಾಂಕಿತೆಯಾದ ದುರ್ಗಾಮಾತೆಯು ಕಾಣಲು ಅವನಿಗೆ ಜ್ಞಾನೋದಯವಾಗುತ್ತದೆ. ಮಹಿಷನು ದೇವಿಗೆ ಶರಣಾಗಿ
ತಾನು ಭೂಲೋಕದಲ್ಲಿ ಜನಿಸಿದ ಕುರುವಾಗಿ ಸಹ್ಯಾದ್ರಿಯಲ್ಲಿ ತನ್ನನ್ನು ಪೂಜಿಸುವಂತೆ ಮತ್ತು ನಿನ್ನ ಕ್ಷೇತ್ರದಲ್ಲಿ
ಪ್ರತಿವರ್ಷ ಕೆಂಡಸೇವೆ(Gendothsava) ನಡೆಸುವಂತೆಯೂ ಹಾಗೆ ಕೆಂಡಸೇವೆನಡೆಸಿದ ಸುಮಂಗಲೆಯರ ಇಷ್ಟಾರ್ಥ
ನೆರೆವೇರಿಸುವಂತೆ ಅನುಗ್ರಹಿಸಬೇಕೆಂದು ದೇವಿಯಲ್ಲಿ ಪ್ರಾರ್ಥಿಸಿ ಮಹಿಷನು ತನ್ನ ಜೀವ ಪುಷ್ಟವನ್ನು
ದೇವಿಯ ಪಾದಕ್ಕೆ ಸಮರ್ಪಿಸುತ್ತಾನೆ.
ಸುದೇವ ಮುನಿ ಮತ್ತು ದೇವವರ್ಮ ರಾಜದಂಪತಿಗಳು
ದೇವಿಯನ್ನು ವಿಧವಿಧವಾಗಿ ಸ್ತುತಿಸಿ ಪೂಜಿಸಿ ಹರಿವಾಣದಲ್ಲಿ ನೈವೇದ್ಯವನ್ನು ಅರ್ಪಿಸಿದರು. ದೇವಿಯು
ಪ್ರಸನ್ನಚಿತ್ತಳಾಗಿ ಇಂದಿನಿಂದ ತಾನಿಲ್ಲಿ "ದುರ್ಗಾಪರಮೇಶ್ವರಿ" ಎಂಬ ಹೆಸರಿನಿಂದ ನೆಲೆಸಿ
ತನ್ನನ್ನು ಭಕ್ತಿಯಿಂದ ಆರಾಧಿಸುವವರ ಸಕಲ ದುರಿತಗಳನ್ನು ನಿವಾರಿಸಿ ಅವರ ಸಕಲಾಭಿಷ್ಠ ಸಿದ್ದಿಸುವುದೆಂದು
ವರವನ್ನಿತ್ತಳು.
Sri Chamundeshwari Ammanavaru |
ದೇವವರ್ಮರಾಜನು ಈ ಹಿಂದೆ ಸ್ವಪ್ನದಲ್ಲಿ
ಸುಬ್ರಮಣ್ಯನು ತಿಳಿಸಿದಂತೆ ವಾರಾಹಿ ನದಿಯಲ್ಲಿದ್ದ ಶ್ರೀ ದುರ್ಗಾಪರಮೇಶ್ವರಿ ವಿಗ್ರಹವನ್ನು ತಂದು
ಪ್ರತಿಷ್ಠಾಪಿಸಿದನು.
ಪೂಜಾ ಕೈಂಕರ್ಯಗಳು:-
ಶ್ರೀ ದೇವಿಗೆ ವೈವಿದ್ಯಮಯ ಸೇವೆಗಳು
ಪ್ರತಿನಿತ್ಯ ದೇವಳದಲ್ಲಿ ಸಾಂಗವಾಗಿ ನೆರವೇರಲ್ಪಡುತ್ತದೆ. ಹರಿವಾಣ ನೈವೇದ್ಯ, ಕುಂಕುಮಾರ್ಚನೆ ಸೇರಿದಂತೆ
ಸಂತಾನ ಪ್ರಾಪ್ತಿಗಾಗಿ ವ್ಯಾಪಾರಾಭಿವೃದ್ದಿ ಮೊದಲಾದ ಇಷ್ಠಾರ್ಥ ಸಿದ್ದಿಗಾಗಿ ತುಲಾಭಾರಾದಿ ಸೇವೆ ಬೆಳಕಿನ
ಸೇವೆ (ಬಯಲಾಟ) ರಂಗಪೂಜೆ, ಚಂಡಿಕ ಶಾಂತಿ, ದುರ್ಗಾ ಶಾಂತಿ, ಚಂಡಿಕಾ ಪಾರಾಯಣ ಮೊದಲಾದ ವಿಶೇಷ ಸೇವೆಗಳನ್ನು
ಹರಕೆಗಳನ್ನು ಭಕ್ತರ ಇಷ್ಟಾರ್ಥವಾಗಿ ನೆರವೇರಿಸಲಾಗುತ್ತಿದೆ.
ಪ್ರತಿ ಸಂಕ್ರಾಂತಿಯಂದು ವಿಶೇಷ
ಪೂಜೆ, ನವರಾತ್ರಿಯಂದು ಪವಮಾನಾದಿ ಕಲ್ಪೋಕ್ತ ಪೂಜೆ, ಬ್ರಾಹ್ಮಣ ಸಂತರ್ಪಣೆ ಮತ್ತು ಆದಿಸುಬ್ರಮಣ್ಯ
ದೇವಸ್ಥಾನದಲ್ಲಿ ನಾಗ ಪಂಚಮಿ ಷಷ್ಟಿ ಉತ್ಸವಗಳು ನಡೆಯುತ್ತವೆ.
ವಾರ್ಷಿಕ ಉತ್ಸವದಂದು ಅರಿಷ್ಡ
ನಿವಾರಣೆಗಾಗಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಾರಿ ಪೂಜೆಯು ನಡೆಯುತ್ತದೆ. ಭಕ್ತರ ಅಭಿಷ್ಟ
ಸಿದ್ದಿ ಕಷ್ಟನಿವಾರಣೆಗಾಗಿ ಮಿಥುನ ಕರ್ಕಾಟಕ ಮಾಸಗಳೆರಡನ್ನು ಹೊರತು ಪಡಿಸಿ ಪ್ರತಿ ಮಂಗಳವಾರ ಶುಕ್ರವಾರ ಕಲ್ಲುಕುಟ್ಟಿಗ ದೈವ ವೀರದೈವ ದೇವರ ದರ್ಶನ
ಹೇಳಿಕೆ ನಡೆಯುತ್ತದೆ.
ರಥದ
ಗೂಡಿನ ಮೇಲೆ ಕಲಶ ಸ್ಥಾಪನೆ ಮಾಡಿ ರಥೋತ್ಸವಕ್ಕೆ ಚಾಲನೆ ನೀಡುವ ಸಂಪ್ರದಾಯವಿದೆ. ಇಲ್ಲಿನ ಕೆಂಡಸೇವೆಯಲ್ಲಿ
ಮುತ್ತೈದೆಯರು ಮಾತ್ರ ಕೆಂಡ ತುಳಿಯುವುದು ಸಂಪ್ರದಾಯ. ಗಂಡನಿಗೆ ಅಸೌಖ್ಯ ಬಂದಾಗ ಮುತ್ತೈದೆ ಭಾಗ್ಯಕ್ಕೆ
ಕುಂದು ಬರಬಾರದೆಂದು ಹಾಗೂ ಮಕ್ಕಳ ಶ್ರೇಯಸ್ಸಿಗಾಗಿ ಕೆಂಡ ತುಳಿಯುವ ಹರಕೆ ಹೋರುತ್ತಾರೆ.
ಕೆಂಡ ಸೇವೆಯ ಬಳಿಕ ಆದಿ ಸುಬ್ರಮಣ್ಯ
ಸ್ವಾಮಿಗೆ ಹಾಲಿಟ್ಟು ಸೇವೆ ನಡೆಯುತ್ತದೆ. ಅನಂತರ ನಾಗದರ್ಶನ, ಶ್ರೀದೇವಿ ದುರ್ಗಾಮಾತೆಗೆ ಹಿರೇ ರಂಗಪೂಜೆ,
ಬಲಿ ಉತ್ಸವ ಡಕ್ಕೆ ಬಲಿ ಸೇವೆ ನಡೆಯುತ್ತದೆ. ಇಲ್ಲಿನ ಮತ್ತೊಂದು ವಿಶೇಷತೆಎಂದರೆ ಈ ದೇವಸ್ಥಾನದಲ್ಲಿ
ನಿತ್ಯ ಬಲಿಯಿಲ್ಲ. ರಂಗಪೂಜೆ ಸಂದರ್ಭ ಮಾತ್ರ ಬಲಿ ಉತ್ಸವ ನೆರೆವೇರುತ್ತದೆ. ರಥೋತ್ಸವ ಮರುದಿನ ಶ್ರೀದೇವಿಗೆ
ಲಕ್ಷ್ಮೀ ಮಂಟಪ ಪೂಜೆ ತುಲಾಭಾರಾದಿ ಸೇವೆಗಳು ಜರುಗುತ್ತವೆ. ಸಂಜೆ ರಂಗ ಪೂಜೆ ಪಲ್ಲಕ್ಕಿ ಉತ್ಸವ ಕೆರೆ
ದೀಪೋತ್ಸವ ಇತ್ಯಾದಿ ಸೇವೆಗಳು ನೆರೆವೇರಿದ ನಂತರ ಯಕ್ಷಗಾನ ಸೇವೆ ನಡೆಯುತ್ತದೆ.
ಮಹಾತಾಯಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಅನಂತ ನಮನಗಳು.
(ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು raghu.koteshwara05@gmail.com ಗೆ ಕಳುಹಿಸಿ)
(www.namma-naadu.blogspot.in, namma-koteshwara.blogspot.in)
ಮಾಹಿತಿ ಕೃಪೆ : www.karnatakatemples.kar.nic.in
ವಿಳಾಸ:-
ಶ್ರೀ ಕ್ಷೇತ್ರ ಮಂದಾರ್ತಿ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ,
ಮಂದಾರ್ತಿ, ಉಡುಪಿ-ತಾಲೂಕು & ಜಿಲ್ಲೆ. ಕರ್ನಾಟಕ.
ದಾರಿಯ ವಿವರ : ಉಡುಪಿಯ ಮೂಲಕ ಈ ಕ್ಷೇತ್ರಕ್ಕೆ ಬರುವುದಾದರೆ ಉಡುಪಿಯಿಂದ ಶ್ರೀ ಕ್ಷೇತ್ರಕ್ಕೆ ನೇರ ಬಸ್ಸಿನ ವ್ಯವಸ್ಥೆ ಇದೆ. ಬ್ರಹ್ಮಾವರ - ಬಾರ್ಕೂರು ಮಾರ್ಗದಲ್ಲಿ ಶ್ರೀ ಕ್ಷೇತ್ರಕ್ಕೆ ಹೋಗಬಹುದು. ಹಾಗೇ ಕುಂದಾಪುರ ಮಾರ್ಗದಲ್ಲಿ ಹೋಗುವುದಾದರೆ ಕೋಟ ಮೂರುಕೈಯಿಂದ ಸಾಯಬ್ರಕಟ್ಟೆ ಮೂಲಕ ಶ್ರೀ ಕ್ಷೇತ್ರಕ್ಕೆ ಹೋಗಬಹುದು.
ದಾರಿಯ ವಿವರ : ಉಡುಪಿಯ ಮೂಲಕ ಈ ಕ್ಷೇತ್ರಕ್ಕೆ ಬರುವುದಾದರೆ ಉಡುಪಿಯಿಂದ ಶ್ರೀ ಕ್ಷೇತ್ರಕ್ಕೆ ನೇರ ಬಸ್ಸಿನ ವ್ಯವಸ್ಥೆ ಇದೆ. ಬ್ರಹ್ಮಾವರ - ಬಾರ್ಕೂರು ಮಾರ್ಗದಲ್ಲಿ ಶ್ರೀ ಕ್ಷೇತ್ರಕ್ಕೆ ಹೋಗಬಹುದು. ಹಾಗೇ ಕುಂದಾಪುರ ಮಾರ್ಗದಲ್ಲಿ ಹೋಗುವುದಾದರೆ ಕೋಟ ಮೂರುಕೈಯಿಂದ ಸಾಯಬ್ರಕಟ್ಟೆ ಮೂಲಕ ಶ್ರೀ ಕ್ಷೇತ್ರಕ್ಕೆ ಹೋಗಬಹುದು.
View Larger Map