ಶ್ರೀ ತುಳುನಾಡಿನ ಸಪ್ತಸಿರಿದೇವಿ ಚರಿತ್ರೆ(ಸತ್ಯನಾಪುರದ ಸಿರಿ ಸಮೇತ ಪರಿವಾರ)
Shree Tulunada Saptha Siridevi Charithre.
ತುಳುನಾಡ ಸಪ್ತಮಾತೃಕ ಸ್ವರೂಪಿಣಿ ‘ಸಪ್ತಸಿರಿದೇವಿಯರು’
ಶ್ರೀ ಸಪ್ತಸಿರಿಗಳು, ಕವತ್ತಾರು ದೇವಸ್ಥಾನ - ಶ್ರೀ ಸಿರಿ, ಅಬ್ಬಗ-ದಾರಗ ಪರಿವಾರದೊಂದಿಗೆ Sri SapthaSiriDevi, Kavattaru Temple, Sri Sridevi, Abbaga-Daraga |
ತುಳುವನಾಡು ಕಾರಣಿಕ ದೈವಿಕಶಕ್ತಿಗಳ ನೆಲೆವೀಡು. ಈ ಪುಣ್ಯಮಯವಾದ ತುಳುವ ಭೂಮಿಯಲ್ಲಿ ನೆಲೆಸಿರುವ ನಾವೇ ಧನ್ಯ. ಪರಶುರಾಮನ ಕೊಡಲಿಯ ಶಕ್ತಿಯ ಈ ನಾಡಿಗೆ ಯಾವುದೇ ಪ್ರಾಕೃತಿಕ ವಿಕೋಪದ ಭಯವಿಲ್ಲವೆಂಬುದು ಇಲ್ಲಿನ ಜನರ ನಂಬಿಕೆಯೂ, ಹಾಗೂ ಅದರಂತೆ ನಡೆದ ಸತ್ಯಾಸತ್ಯತೆಯು ಕೂಡಾ ಹೌದು.
ತುಳುನಾಡಿನಲ್ಲಿ ಆಳಿದ- ಮೆರೆದು ಹೋದ ಎಷ್ಟೋ ರಾಜ-ಮಹಾರಾಜರು, ಆಳರಸರು, ರಾಣಿಯರನ್ನು ಕಾಣಬಹುದು. ಅಲ್ಲದೇ ಈ ಪವಿತ್ರವಾದ ತುಳುವನಾಡಿನಲ್ಲಿ ನೆಲೆಯಾದ ಬೇರ್ಯಾವ ಕಡೆಯಲ್ಲೂ (ಕೇರಳವನ್ನು ಹೊರತು ಪಡಿಸಿ) ಕಾಣಸಿಗದ ದೈವಾರಾಧನೆಯು ಒಂದು ವಿಶಿಷ್ಟ – ವಿಸ್ಮಯವನ್ನುಂಟು ಮಾಡುವ ರೂಢಿ-ಸಂಪ್ರದಾಯವಾಗಿದೆ.
Sri Kavattharu & Nandalike Mahalingeshwara Devaru ಶ್ರೀ ಕವತ್ತಾರು ಮತ್ತು ನಂದಳಿಕೆ ಮಹಾಲಿಂಗೇಶ್ವರ ದೇವರು |
ತುಳುವನಾಡಿನ ಜನರು ದೈವಗಳನ್ನು ತಮ್ಮ ಸಂಬಂದಿಗಳಂತೆ ಪೂಜಿಸುತ್ತಾ, ಆರಾಧಿಸುತ್ತಾ; ನೇಮ- ಕೋಲಗಳನ್ನು ನಡೆಸುತ್ತಾ ದೈವಗಳನ್ನು ಸಂಪ್ರೀತಿಗೊಳಿಸುತ್ತಾರೆ. ಈ ಮಹಾನ್ ತುಳುವ ನಾಡಿನಲ್ಲಿ ತಮ್ಮ ಕಾರಣಿಕ ಶಕ್ತಿಯನ್ನು ತೋರುತ್ತಿರುವ ಕಾರಣೀಕ ಶಕ್ತಿಗಳಾದ ಕಲ್ಕುಡ, ಪಂಜುರ್ಲಿ, ಹೈಗುಳಿ, ಚಿಕ್ಕಮ್ಮ, ಜುಮಾದಿ-ಬಂಟ ಹೀಗೆ ಹಲವಾರು. ಆದರೆ ಮಾನವ ರೂಪತಾಳೀ ಬಂದು ದೈವತ್ವಕ್ಕೇರಿದ ಕಲ್ಕುಡ – ಕಲ್ಲುರ್ಟಿ, ಕೋಟಿ-ಚೆನ್ನಯ್ಯ, ಕಾಂತುಬಾರೆ-ಭುದುಬಾರೆಯಂತ ದೈವಗಳ ಸಾಲಿನಲ್ಲಿ ಮಹಾಶಕ್ತಿಯಾಗಿ ಅದರಲ್ಲಿಯೂ ಮಹಿಳೆಯರೊಡನೆ ಅವಿನಾಭಾವ ಸಂಬಂಧ ಹೊಂದಿ, ಮೇಲೂ-ಕೀಳೆಂಬ ಬೇದವಿಲ್ಲದೆ ಅವೈದಿಕ ನೆಲೆಯಲ್ಲಿ ಎಲ್ಲರಲ್ಲೀ ಐಕ್ಯರಾಗಿ ಕಾರಣಿಕತೆಯನ್ನು ತೋರುತ್ತಿರುವವಳೆ “ಶ್ರೀ ತುಳುನಾಡಿನ ಸಪ್ತಸಿರಿಗಳು”.
ಸಿರಿಯರ ಆವೇಶವಾಗುವ ಸಮಯ, Siri Avesha |
ತುಳುನಾಡಿನಲ್ಲಿ ಅತ್ಯಂತ ಕಾರಣೀಕ ತೋರುತ್ತಿರುವ ದೈವಿಶಕ್ತಿಯನ್ನು ಹೊಂದಿರುವವಳು ‘ಶ್ರೀ ಸಿರಿದೇವಿ’. ಸಿರಿದೇವಿಯು ಮುಖ್ಯವಾಗಿ ಮಹಿಳೆಯರ ಮೂಲಕ ಆವೇಶಗೊಂಡು ಬರುವ ಶಕ್ತಿಸ್ವರೂಪಿಣಿ .ಇವಳು ತನ್ನ ಸ್ವಾಭಿಮಾನ, ಹೋರಾಟ ಮತ್ತು ಛಲದಿಂದಲೇ ಹೋರಾಡಿ ದೈವತ್ವಕ್ಕೆರಿದ ಮಹಾನ್ ಮಹಿಳೆ. ಪುರಾಣದಲ್ಲಿ ಅಂಬೆ ಮತ್ತು ದ್ರೌಪದಿಯರ ಸಾಲಿಗೆ ಸೇರುವ ‘ಸಿರಿ’ ಯು ಇಂದು ತುಳುವನಾಡಿನ ಎಲ್ಲೇಡೆಯು ಆರಾಧನೆಯಾಗುವ ಮಹಾನ್ ಶಕ್ತಿದೇವತೆಯಾಗಿದ್ದಾಳೆ.
Sri Siri Pushpa(Arecanut Flower) ಹಿಂಗಾರ ಪುಷ್ಪ(ಸಿಂಗಾರ, ಸಿರಿ ಪುಷ್ಪ) |
ತುಳುಮಹಾಕಾವ್ಯ ಮತ್ತು ಪಾಡ್ದನಗಳಲ್ಲಿ ಈ ಬಗ್ಗೆ ತಿಳಿಯಬಹುದು. ಅದರಲ್ಲೂ ಮುಖ್ಯವಾಗಿ ‘ಸಿರಿ’ ಪಾಡ್ದನದಲ್ಲಿ ಸಿರಿದೇವಿಯ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ದೊರೆಯುತ್ತದೆ. ಈಕೆ ಲೋಕನಿಯಮಕ್ಕೆ ವಿರುದ್ದವಾಗಿ ಬದುಕಿ; ಪ್ರತಿಭಟನೆಯ ಅಗ್ನಿಜ್ವಾಲೆತಂತಿದ್ದಳು. ‘ಸಿರಿ’ ಯ ಚರಿತ್ರೆಯಲ್ಲಿ ಸರಿಸುಮಾರು 4 ತಲೆಮಾರುಗಳನ್ನು ನಾವು ಕಾಣಬಹುದು. ಸಿರಿ, ಅವಳ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮಕ್ಕಳು. ‘ಸಿರಿ’ಯ ಹುಟ್ಟಿನ ಬಗ್ಗೆ ಒಂದು ರೋಚಕವಾದ ಕತೆ ಇದೆ. ಬಹಳ ಹಿಂದೆ ‘ಸತ್ಯನಾಪುರ’ ವನ್ನು ಆಳುತ್ತಿದ್ದವನೇ ಶ್ರೀಮಂತ ಧನಿಕ ‘ಬೆರ್ಮಾಳ್ವ’. ಈತನು ಶ್ರೀಮಂತನಾಗಿದ್ದರೂ ಕೂಡಾ ಸಂತಾನವಿಲ್ಲದ ಚಿಂತೆಯು ಕಾಡುತ್ತಿತ್ತು.
ಹೀಗೆ ‘ಬೆರ್ಮಾಳ್ವನ’ ಚಿಂತೆಯನ್ನು ಅರಿತ ‘ಆದಿಅಲಡೆ ಕುಲಬ್ರಹ್ಮ ದೇವರು’ ನನ್ನ ಮೂಲಸ್ಥಾನ ಪಾಳು ಬಿದ್ದಿದೆ. ಅದನ್ನು ಜೀರ್ಣೋದ್ದಾರ ಮಾಡು ಎಂದು ಅಪ್ಪಣೆ ಕೊಡುತ್ತಾರೆ. ಹೀಗೆ ಬೆರ್ಮಾಳ್ವ ದೈವಸ್ಥಾನವನ್ನು ನಿರ್ಮಿಸಿ ಅಲ್ಲಿ ನಿತ್ಯಪೂಜಾದಿಗಳು ನಡೆಯುವಂತೆ ಮಾಡುತ್ತಾನೆ. ಬೆರ್ಮಾಳ್ವನಿಂದ ಸಂತೃಪ್ತನಾದ ದೇವರು ಬ್ರಾಹ್ಮಣ ವೇಷದಲ್ಲಿ ಬಂದು ಸಿಂಗಾರದ(arecanut flower) ಹಾಳೆಯ ಮೇಲೆ ಗಂಧದ ಉಂಡೆಯನ್ನಿಟ್ಟು ಪ್ರಸಾದ ಕೊಡುತ್ತಾರೆ. ಹೀಗೆ ಬೆರ್ಮಾಳ್ವ ಅದನ್ನು ಹಿಡಿದು ದೇವಾಲಯಕ್ಕೆ ಪ್ರದಕ್ಷಿಣೆ ಬರುವಾಗ ಅದರಲ್ಲಿ ಮಗು ಅಳುವುದು ಕೇಳಿಸುತ್ತದೆ. ಸರಿಯಾಗಿ ನೋಡಿದಾಗ ಸಿರಿ ಪುಷ್ಪದಲ್ಲಿ ಒಂದು ಹೆಣ್ಣು ಮಗು ಇರುತ್ತದೆ. ಸಿರಿಪುಷ್ಪದಲ್ಲಿ ಅಯೋನಿಜೆಯಾಗಿ ಉದಿಸಿದ ಕಾರಣ ಅವಳನ್ನು ‘ಸಿರಿ’ ಎಂದು ನಾಮಕರಣ ಮಾಡಿ ತನ್ನ ಸತ್ಯಾನಾಪುರದ ಅರಮನೆಗೆ ತಂದು ಬೆರ್ಮಾಳ್ವನು ಪ್ರೀತಿಯಿಂದ ಸಾಕುತ್ತಾನೆ.
ಪರಿವಾರ ದೈವಗಳು, Parivara Daivagalu |
ಹೀಗೆ ಸಿರಿಯು ಬೆಳೆಯುತ್ತಾ ಪ್ರಾಯಬದ್ದಳಾದಾಗ ಅವಳಿಗೆ ಬೆರ್ಮಾಳ್ವನು ಮದುವೆ ಮಾಡಲು ನಿಶ್ಚಯ ಮಾಡುತ್ತಾನೆ. ಹಾಗೆ ಕುಂದಾಪುರದ ಬಸರೂರು ‘ಕಾಂತು ಪೂಂಜ’ ನಿಗೆ ಮದುವೆ ಮಾಡಿ ಕೊಡುತ್ತಾನೆ. ಆಕೆಯ ಹುಟ್ಟಿನಂತೆ ಆಕೆಯ ಜೀವನವೂ ತುಂಬಾ ನಿಗೂಡವಾಗಿ ಮುಂದುವರಿಯಿತು. ಸಿರಿಯು ಅಯೋನಿಜೆಯಾಗಿ ಜನಿಸಿ, ಮಹಾಶಕ್ತಿಯಾಗಿ ಮೆರೆದಳು. ಅದೇ ರೀತಿಯಲ್ಲಿ ‘ಕಾಂತೂ ಪೂಂಜಾ’ ಸಿರಿಯನ್ನು ಭಯಸಿ ಮದುವೆಯಾಗಲು ನಿಶ್ಚಯಿಸಿದ್ದು , ಅದಕ್ಕೆ ಸಿರಿಯು ಕಾಂತೂಪೂಂಜನಿಗೆ ಕೆಲವೊಂದು ಶರತ್ತುಗಳನ್ನು ಹಾಕುವ ಮೂಲಕ ವಿವಾಹ ಬಂದಕ್ಕೇರ್ಪಡುತ್ತಾಳೆ. ಈ ರೀತಿಯಲ್ಲಿ ಶರತ್ತಿನ ಮೂಲಕ ತನ್ನ ತಂದೆಗೆ ಯಾರು ಇಲ್ಲದ ಕಾರಣ ನಾನು ಮದುವೆ ನಂತರ ತಂದೆಯ ಮನೆಯಾದ ಸತ್ಯನಾಪುರದ ಅರಮನೆಯಲ್ಲೇ ಇರುವುದಾಗಿ ಹೇಳುತ್ತಾಳೆ. ಇದಕ್ಕೆ ಕಾಂತುಪೂಂಜಾ ಒಪ್ಪುತ್ತಾನೆ.
ಪರಿವಾರ ದೈವಗಳು, Parivara Daivagalu |
ಮುಂದೆ ಸಿರಿಯು ತಾನು ಸತ್ಯನಾಪುರಕ್ಕೆ ತೆರಳಿ ಅಲ್ಲಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆ ಮಗುವಿಗೆ ‘ಕುಮಾರ’ ಎಂದು ನಾಮಕರಣ ಮಾಡುತ್ತಾಳೆ. ಈ ಸುದ್ದಿ ತಿಳಿದರು ಕಾಂತೂಪೂಂಜಾ ಮಗುವನ್ನು ನೋಡಲು ಬರುವುದಿಲ್ಲ. ಅದೇ ರೀತಿ ಮಗುವಿನ ಜನನದಿಂದ ಅಜ್ಜನಿಗೆ ಮರಣವಾಗುವುದು ಎಂದು ಜ್ಯೋತಿಷಿಗಳು ಹೇಳಿರುತ್ತಾರೆ. ಅದೇ ರೀತಿ ಒಂದು ದಿನ ಮನೆಯಲ್ಲಿ ಯಾರು ಇಲ್ಲದ ಕಾರಣ ಮತ್ತು ಮಗುವು ತುಂಬಾ ಅಳುತ್ತಿರುವುದನ್ನು ಕಂಡ ಅಜ್ಜ ಬೆರ್ಮಾಳ್ವ ಮಗುವನ್ನು ಎತ್ತಿಕೊಳ್ಳುತ್ತಾನೆ. ಅದರ ಪರಿಣಾಮ ಬೆರ್ಮಾಳ್ವ ತೀವ್ರ ಅನಾರೋಗ್ಯದಿಂದ ಮರಣವನ್ನುಪ್ಪುತ್ತಾನೆ. ತನ್ನ ತಂದೆ ಮರಣವಾದ ಬಳಿಕ ಸಿರಿಯು ಈ ವಿಚಾರವನ್ನು ಕಾಂತೂಪೂಂಜನಿಗೆ ಮುಟ್ಟಿಸುತ್ತಾಳೆ. ಆದರೂ ಕೂಡಾ ಅವನು ಬರುವುದಿಲ್ಲ. ಮುಂದೆ ಸಿರಿಯು ದಿಟ್ಟತನದಿಂದ ತಂದೆಯ ಶ್ರಾದ್ದ ಕರ್ಮಾದಿಗಳನ್ನು ತಾನೇ ಮಾಡುತ್ತಾಳೆ.
ಹೀಗೆ ಕೆಲಸಮಯದ ನಂತರ ಸತ್ಯನಾಪುರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ ಶಂಕರಾಳ್ವನು ‘ಸಿರಿ’ಯ ವಿರುದ್ದ ತಿರುಗಿ ಬೀಳುತ್ತಾನೆ. ಇದಕ್ಕೆ ‘ಸಿರಿ’ ಯ ಗಂಡ ಕಾಂತೂಪೂಂಜಾ ಕುಮ್ಮಕ್ಕು ನೀಡುತ್ತಾನೆ. ಇವರೀರ್ವರು ಒಂದಾಗಿ ಊರಿನವರಿಗೆ ಅಲ್ಲಸಲ್ಲದ್ದನ್ನು ಹೇಳಿಕೊಟ್ಟು ಹಣದ ಮದದಿಂದ ಸತ್ಯನಾಪುರದ ಅರಮನೆಯನ್ನು(Sathyanapura) ತಮ್ಮ ವಶ ಮಾಡಿಕೊಂಡು ಸಿರಿಯನ್ನು ಹೊರಗೆ ಹಾಕುತ್ತಾರೆ. ಸಿರಿ ತನ್ನ ಗಂಡನಲ್ಲಿ ತನ್ನ ಸಹಾಯಕ್ಕೆ ಬರುವಂತೆ ಕೇಳಿಕೊಳ್ಳುತ್ತಾಳೆ. ಆಗ ಕಾಂತೂಪೂಂಜ ಮನೆಯೋಳಗಿದ್ದುಕೊಂಡೆ ಇಲ್ಲವೆಂದು ಹೇಳುತ್ತಾನೆ. ಆಗ ಸತ್ಯದ ದೈವಿಗುಣವುಳ್ಳ ಸಿರಿಯು ಆ ಊರಿನ 10 ಸಮಸ್ತರ ಮುಂದೆ ತನಗೆ ವಿಚ್ಛೇದನ ಬೇಕೆಂದು ಕೇಳಿದಾಗ ಕಾಂತುಪೂಂಜಾ ‘ನೀನು ಹೊತ್ತು ಕಳೆಯುವುದರೊಳಗೆ ಮಾಬುಕಳ ಹೊಳೆಯನ್ನು ದಾಟಿದರೆ ಅದೇ ನಿನಗೆ ವಿಚ್ಛೇದನ, ಇಲ್ಲವಾದರೆ ನಿನ್ನನ್ನು ಎಳೆದು ತರುತ್ತೇನೆಂದು’ ಹೇಳುತ್ತಾನೆ. ಆಗ ಸಿರಿಯು ಕೋಪೋದ್ರಿಕ್ತಳಾಗಿ ತನ್ನ ದಿವ್ಯಶಕ್ತಿಯನ್ನು ತಿಳಿಯಪಡಿಸುವ ಉದ್ದೇಶದಿಂದ ‘ಸತ್ಯನಾಪುರದ ಅರಮನೆ ಉರಿದು ಹೋಗಲಿ, ತನ್ನನ್ನು ಕೈ ಹಿಡಿದು ವಂಚನೆ ಮಾಡಿದ ಪತಿ ಬೀಕರ ಕಾಯಿಲೆಯಲ್ಲಿ ಬೀಳಲಿ’ ಎಂದು ಶಾಪವನ್ನು ಕೊಡುತ್ತಾಳೆ. ಹಾಗೆ ಶಾಪ ಕೊಟ್ಟು ಮುಂದೆ ನಡೆದ ಸಿರಿಯು ತನ್ನ ಮಾಯಾಶಕ್ತಿಯಿಂದ ಮಾಬುಕಳ ಹೊಳೆಯನ್ನು ದಾಟುತ್ತಾಳೆ. ಆ ವೇಳೆಗೆ ತನ್ನ ಮಗ ‘ಕುಮಾರ(Kumara)’ ನನ್ನು ಮಾಯಾಶಕ್ತಿಯಿಂದ ಮಾಯಮಾಡಿ ಮಾಯಾಲೋಕಕ್ಕೆ ಕಳುಹಿಸುತ್ತಾಳೆ. ಮುಂದೆ ಸಿರಿಯ ಆಪ್ತ ಸೇವಕಿ ದಾರು(Daaru) ಕೂಡಾ ಸಿರಿಯೊಂದಿಗೆ ಇರುತ್ತಾಳೆ.
ಹೀಗೆ ಮಾಯಶಕ್ತಿಯಿಂದ ಮಾಬುಕಳ(Mabukala) ಹೊಳೆ ದಾಟಿದ ನಂತರ ಸಿರಿಗೆ ಇಬ್ಬರು ಅಣ್ಣ-ತಮ್ಮಂದಿರಾದ ‘ಬಿಳಿ ದೇಸಿಂಗರಾಯ ಮತ್ತು ಕರಿ ಕಾಮರಾಯ’ ಎಂಬವರು ಸಿಗುತ್ತಾರೆ. ಇವರು ಸಿರಿಯನ್ನು ತಮ್ಮ ಸ್ವಂತ ತಂಗಿಯಂತೆ ನೋಡಿಕೊಳ್ಳುತ್ತಾರೆ. ಹೀಗೆ ತನ್ನ ಅಣ್ಣಂದಿರೊಂದಿಗೆ ಜೀವನ ಮಾಡುತ್ತಿದ್ದ ಸಿರಿಯ ಸೋಬಗು – ಸೌಂದರ್ಯವನ್ನು ಕಂಡು ‘ಕೊಡ್ಸರಾಳ್ವನೆಂಬ’ ರಾಜ ಮಾರು ಹೋಗುತ್ತಾನೆ. ಈ ವಿಚಾರವನ್ನು ಸಿರಿಯ ಸೋದರರಲ್ಲಿ ಹೇಳುತ್ತಾನೆ. ಹೀಗೆ ಸಿರಿಯ ಸೋದರರು ಈ ವಿಚಾರವಾಗಿ ಸಿರಿಯನ್ನ ಒಪ್ಪಿಸಿ ಕೊಡ್ಸರಾಳ್ವನಿಗೆ ಮದುವೆ ಮಾಡುತ್ತಾರೆ. ಮುಂದೆ ಸಿರಿಯು ‘ಕೊಡ್ಸರಾಳ್ವನಿಂದ’ ಒಂದು ಹೆಣ್ಣು ಮಗುವನ್ನು ಪಡೆಯುತ್ತಾಳೆ. ಅವಳಿಗೆ ‘ಸೊನ್ನೆ(Sonne)’ ಎಂಬ ನಾಮಕರಣ ಮಾಡುತ್ತಾರೆ. ಸಿರಿಯು ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ತಾನು ಆ ಮಗುವನ್ನು ಕೊಡ್ಸರಾಳ್ವನ ಮೊದಲನೆಯ ಹೆಂಡತಿಯ ಕೈಗೆ ಮಗುವನ್ನು ಕೊಟ್ಟು ತಾನು ತನ್ನ ಆಪ್ತ ಸೇವಕಿ ‘ದಾರು’ ವಿನೊಂದಿಗೆ ಮಾಯಾಲೋಕವನ್ನು ಸೇರುತ್ತಾಳೆ.
ಹೀಗೆ ಸೊನ್ನೆಯು ತನ್ನ ಬಾಲ್ಯವನ್ನು ನಂದಳಿಕೆಯಲ್ಲಿ ಕಳೆಯುತ್ತಾಳೆ. ಮುಂದೆ ಸೊನ್ನೆಗೆ ವಿವಾಹವನ್ನು ಮಾಡಲಾಗಿ ಅವಳಿಗೆ ಇಬ್ಬರು ಅವಳಿ ಕುವರಿಯರು ಜನಿಸುತ್ತಾರೆ. ಅವರಿಗೆ ‘ಅಬ್ಬಗ-ದಾರಗ’ ಎಂದು ನಾಮಕರಣ ಮಾಡುತ್ತಾರೆ. ಈ ಅವಳಿ ಕುವರಿಯರು ಶ್ರೀ ಉರಿಬ್ರಹ್ಮ ದೇವರ ಹರಕೆಯಿಂದ ದೈವಿಸಂಭೂತರಾಗಿ ಜನಿಸಿದವರಾಗಿರುತ್ತಾರೆ. ಮುಂದೆ ಈ ಅವರಿ ಕುವರಿಯರು ಬೆಳೆದು ಬಂದಾಗೆ ಅವರಿಗೆ ‘ರಾಮ-ಲಕ್ಷ್ಮಣ’ ರೆಂಬ ಅವಳಿ ಕುವರರ ಜೊತೆ ಮದುವೆ ಮಾಡಲು ನಿಶ್ಚಯಿಸುತ್ತಾರೆ. ಆದರೆ ಈ ವೇಳೆಗಾಗಲೆ ಸೊನ್ನೆ ತನ್ನ ಹರಕೆಯನ್ನು ಮರೆತು ಬಿಡುತ್ತಾಳೆ. ಒಂದು ದಿನ ಶ್ರೀ ಉರಿಬ್ರಹ್ಮ ದೇವರ ಸಂಕಲ್ಪದಂತೆ ‘ಅಬ್ಬಗ-ದಾರಗ’ ಚನ್ನೆ-ಮಣೆ ಆಟದಲ್ಲಿ ಮರುಳಾಗಿ ಅದರಿಂದಲೆ ಇಬ್ಬರು ಹೊಡೆದಾಡಿಕೊಂಡು ದಾರುಣ ದುರಾಂತ್ಯವನ್ನು ಕಾಣುತ್ತಾರೆ. ಹೀಗೆ ಇವರ ಅಂತ್ಯದೊಂದಿಗೆ ಇವರಿಬ್ಬರು ದೈವತ್ವಕ್ಕೇರುತ್ತಾರೆ. ತನ್ನ ಕುವರಿಯರ ಮರಣದ ವಾರ್ತೆಯನ್ನು ತಿಳಿದ ಸೊನ್ನೆಯು ತಾನೂ ಕೂಡಾ ತನ್ನ ತಾಯಿ ಸಿರಿಯನ್ನು ನೆನೆದು ಮಾಯಾಲೋಕ ಸೇರುತ್ತಾಳೆ. ಮುಂದೆ ಸೊನ್ನೆಯ ಮಕ್ಕಳಾದ ಇವರೇ ಮುಂದೆ ‘ಅರ್ಭಗ-ದಾರಗೇಶ್ವರಿ(Abbaga-Daraga) ಎಂಬ ದೈವಗಳಾಗಿ ಮೆರೆಯುತ್ತಾರೆ. ಈ ಕುವರಿಯರು ತನ್ನ ಅಜ್ಜಿ ಸಿರಿಯೊಂದಿಗೆ ಮಾಯಾಲೋಕ ಸೇರಿದೊಡನೆ ಅಲ್ಲಿ ಸಿರಿಗಳ ಲೋಕ ನಿರ್ಮಾಣವಾಗುತ್ತದೆ.
ಹಿಂದೆ ಈ ಅವಳಿ ಕುವರಿಯ ಅಜ್ಜಿ ಸಿರಿಯು ನಂದಳಿಕೆಯ ಮಹಾಲಿಂಗೇಶ್ವರ ದೇವರಲ್ಲಿ ಮುಂದೆ ನನ್ನ ಮೊಮ್ಮಕ್ಕಳು ನಿಮ್ಮ ಸಾನಿದ್ಯಕ್ಕೆ ಬಂದಾಗ ಅವರಿಗೆ ಇಲ್ಲಿ ಆಶ್ರಯ ನೀಡಬೇಕೆಂದು ಕೇಳಿರುತ್ತಾಳೆ. ಅದೇ ರೀತಿಯಲ್ಲಿ ಈ ಕುವರಿಯರು ಮಾಯಾಲೋಕವನ್ನು ಸೇರಿದ ಬಳಿಕ ಕೆಲವೊಂದು ಮಹೋನ್ನತ ಶಕ್ತಿಯ ಉದಯವಾಗುತ್ತದೆ. ಹೀಗೆ ಸಿರಿಯಿಂದ ಆರಂಭಗೊಂಡು ಅವಳ ಮಗಳು, ಮೊಮ್ಮಕ್ಕಳು ಮತ್ತು ಸೇವಕಿಯರನ್ನೊಳಗೊಂಡ ಏಳು ಜನರು ಮಾಯಾಲೋಕದಲ್ಲಿ ಐಕ್ಯವಾಗಿ ಅಲ್ಲಿ ‘ಸಪ್ತಸಿರಿಗಳ(Sapthasiri)’ ಶಕ್ತಿ ಆವರ್ಭವಿಸುತ್ತದೆ. ಈ ಸಪ್ತಸಿರಿಗಳು ಮುಂದೆ ತುಳುವ ನಾಡಿನ ಕಾರಣೀಕ ‘ಸಪ್ತಮಾತೃಕೇಯ’ರಾಗುತ್ತಾರೆ. ಅವರುಗಳೆಂದರೆ ಸಿರಿ, ದಾರು, ಸೊನ್ನೆ, ಗಿಂಡೆ, ಸಾಮು ಮತ್ತು ಅಬ್ಬಗ-ದಾರಗ. ಈ ಏಳು ಜನರೆ “ಸಪ್ತಸಿರಿಗಳು.” ಅಂತೆ ಸಪ್ತ ಮಾತೃಕೆಯರೊಂದಿಗೆ ಒಬ್ಬ ಕುಮಾರ ವೀರಭದ್ರ ಅಥವಾ ಗಣಪತಿ ಇರುವಂತೆ ತುಳುನಾಡಿನ ಸಿರಿಗಳ ಜೊತೆ ಸಿರಿಯ ಕುವರ ‘ಕುಮಾರ’ ನು ಇರುತ್ತಾನೆ.
Abbaga - Daraga playing ChanneMane ಅಬ್ಬಗ-ದಾರಗರು ಚನ್ನೆಮಣೆ ಆಡುವ ದೃಶ್ಯ |
ದೈವಿ ಚಿತ್ತದಂತೆ ಜೈನರಸು ಗುಣಪಾಲ ನಂದರಸಸಿಂದ ರಚಿತವಾದ ಜೀನ ಮಂದಿರವನ್ನೇ ಪರಿವರ್ತಿಸಿ ಕಟ್ಟಿದ ಮಂದಿರದೊಳಗೆ ಇಷ್ಟಮೂರ್ತಿ ‘ಶ್ರೀ ಮಹಾಲಿಂಗೇಶ್ವರ ದೇವರ ಜೊತೆಯಲ್ಲಿ ಅಬ್ಬಗ-ದಾರಗರಾದ ನಮ್ಮಿರ್ವರನ್ನು ಏಕಗರ್ಭದಲ್ಲಿ ಆರೂಢಗೊಳಿಸುವಂತೆ ಆಧೇಶವನ್ನು ನೀಡಿ’, “ಕಡೆತ ಆರತಿ ಎಂಕ್ಲೇಗ್ ಕೊರೊಡು(ಕೊನೆಯ ಆರತಿ ನಮಗೆ ಕೊಡಬೇಕು)” ಎಂದು ಮಹಾಮಹಿಮ ತನ್ನ ಒಡೆಯನಾದ ಮಹಾಲಿಂಗೇಶ್ವರನ ಅಂತಿಮ ಮಂಗಳ ಆದಾರ್ತಿಕ್ಯವನ್ನು ತಮಗೆ ಬೆಳಗಿಸಬೇಕೆಂದು ಅನುಜ್ಞೆಗೊಳಿಸಿ ರೂಢಸ್ಥರಾಗುತ್ತಾರೆ. ಇಂದು ನಂದಳಿಕೆ ಮಹಾಳಲಿಂಗೇಶ್ವರ ಸಾನಿಧ್ಯದಲ್ಲಿ ಅವಳಿ ಕುವರಿಯರು ‘ಅಬ್ಬಗ-ದಾರಗ’ರ ಮಹಿಮೆ ಅಪಾರ.
ಈ ರೀತಿಯಲ್ಲಿ ಸಿರಿಜಾತ್ರೆಯು ನಂದಳಿಕೆಯಿಂದ ಮೊತ್ತಮೊದಲಿಗೆ ಪ್ರಾರಂಬಗೊಂಡು ಮುಂದೆ ಹಿರಿಯಡಕ, ಕವತ್ತಾರು, ನಿಡ್ಗಲ್(ಬೆಳ್ತಂಗಡಿ), ಪಾಂಗಾಳ ಮುಂತಾದ ಅಲಡೆಯಲ್ಲಿ ವರ್ಷಂಪ್ರತಿ ನಡೆಯುತ್ತದೆ. ಹೀಗೆ ಈ ಸಿರಿಜಾತ್ರೆಯು ಬಹಳ ಪ್ರಸಿದ್ದಿಯನ್ನು ಹೊಂದಿದೆ. ಹೀಗೆ ನಂದಳಿಕೆಯು ತುಳುನಾಡಿನ ಇತರ ಎಲ್ಲಾ ಸಿರಿಕ್ಷೇತ್ರಗಳಿಗೆ ಮೂಲಕ್ಷೇತ್ರವೆಂದು ಇಲ್ಲಿಂದಲೇ ಸಪ್ತಸಿರಿಗಳ (ಏಳುಜನ) ಆರಾಧನೆ ಸಂಪನ್ನಗೊಂಡು ಮೂಲ ಸಿರಿ ಕ್ಷೇತ್ರವೆಂಬ ನೆಗಳ್ತೆಗೆ ಭಾಜನವಾಗುತ್ತದೆ. ಹೀಗೆ ಸತ್ಯದ ಸಿರಿಗಳಿಗೆ ಹುಟ್ಟು ನಂದಳಿಕೆ(Nandalike), ಬೆಳವಣಿಗೆ ಹಿರಿಯಡಕ(Hiriyadaka), ಅವತಾರ (ಪ್ರತಾಪ) ಕವತ್ತಾರು(Kavattharu) ಎಂಬುದಾಗಿ ಮುಂದೆ ತೌಳವ ದಶದೆಸೆಯಲ್ಲಿ ಲೋಕ ಸುಭೀಕ್ಷೆಗಾಗೀ ಶ್ರೀ ಸಪ್ತಸಿರಿ ಅಬ್ಬಗ-ದಾರಗರು ಮೋಹದಿಂದ ಪ್ರಕಟವಾಗುತ್ತಾರೆ.
ಹೀಗೆ ಸಿರಿಜಾತ್ರೆಯಲ್ಲಿ ಶೇಕಡಾ 95ರಷ್ಟು ಮಹಿಳೆಯರೆ ಇರುತ್ತಾರೆ. ಈ ಅವೈದಿಕ ಆರಾಧನೆಯಲ್ಲಿ ಮೇಲು-ಕೀಳೆಂಬ ಬೇದವಿಲ್ಲದೆ ಸಹಸ್ರಾರು ಜನ ಭಾಗವಹಿಸುತ್ತಾರೆ. ನೂರಾರು ಮಹಿಳೆಯರ ಮೇಲೆ ಸಪ್ತ ಸಿರಿಗಳು ಆವೇಶಗೊಂಡರೆ ಕೆಲವರಲ್ಲಿ ಇತರ ದೈವಗಳು ಆವೇಶವಾಗುತ್ತದೆ. ಅಂತೇಯೇ ಈ ಸಪ್ತ ಸಿರಿಗಳ ಜೊತೆಯಲ್ಲಿ ಒಬ್ಬ ಸಿರಿಯ ಕುಮಾರನು ಇರುತ್ತಾನೆ. ಇವರೆಲ್ಲರೂ ಬಿಳಿಯ ಇಲ್ಲವೇ ಕೆಂಪು ವಸ್ತ್ರವನ್ನುಟ್ಟು ಈ ಧಾರ್ಮಿಕ ಕಾರ್ಯದಲ್ಲಿ ತೊಡಗುತ್ತಾರೆ. ಇವರಲ್ಲಿ ದೈವ ಆವೇಶವಾಗುವಾಗ ಸಿರಿಪುಷ್ಪ(ಸಿಂಗಾರ – arecanut flowr) ಹಿಡಿದು ಆವೇಶವಾಗುತ್ತಾರೆ. ಸಿರಿದೇವಿಯು ಹಿಂಗಾರದ ಕೊನೆಯಲ್ಲಿ ಅಯೋನಿಜೆಯಾದ ಕಾರಣ ಈ ಪುಷ್ಪವನ್ನು ಉಪಯೋಗಿಸಲಾಗುತ್ತದೆ.
ಅಂತೆಯೇ ಈ ಸಪ್ತ ಸಿರಿಗಳು ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೀತಿಯ ಕಾರಣೀಕವನ್ನು ತೋರುತ್ತಿದ್ದಾರೆ. ಮಂದಾರ್ತಿ ಸಮೀಪದ ಮಣಿಕಲ್ಲಿನ ಶ್ರೀ ಅರ್ಭಗ – ದಾರಗೇಶ್ವರೀ ದೇವಸ್ಥಾನವು ಒಂದು ಶಕ್ತಿಪ್ರದ ಕ್ಷೇತ್ರವಾಗಿದೆ. ಹೀಗೆ ಪ್ರದಾನ ದೇವತೆಯಾಗಿಯೂ, ಉಪ ದೇವತೆಯಾಗಿಯೂ ಹಲವಾರು ಸ್ಥಳದಲ್ಲಿ ನೆಲೆಸಿ ನಿಂದಿದ್ದಾಳೆ. ನಂದಳಿಕೆ ಮತ್ತು ಕವತ್ತಾರು ಮಹಾಲಿಂಗೇಶ್ವರನ ಜೊತೆಯಲ್ಲಿ, ಹಿರಿಯಡಕ, ಪಾದೇಮಠದಲ್ಲಿ ವೀರಭದ್ರ ಪರಿವಾರವಾಗಿ ಆವೇಶವಾಗಿ ಬರುತ್ತಾರೆ.
ಸಿರಿಜಾತ್ರೆಯನ್ನು ಆಯನೋತ್ಸವ ಎಂದು ಕರೆಯಲಾಗುತ್ತದೆ. ಹೀಗೆ ಹುಣ್ಣಿಮೆಯಂದು ಆರಂಭವಾಗುವ ಆಯನೋತ್ಸವವು ನಂದಳಿಕೆಯಿಂದ ಆರಂಭಗೊಂಡು ಹಿರಿಯಡಕ, ಕವತ್ತಾರು ಹಾಗೂ ಎಲ್ಲಾ ತುಳುನಾಡಿನ ಅಲಡೆಯಲ್ಲೂ ಸಂಪನ್ನವಾಗುತ್ತದೆ. ಹಿರಿಯಡಕದಲ್ಲಿ ‘ಹಗ್ಗಿನ ಹುಣ್ಣುಮೆ’ ಯಂದು ಆಯನೋತ್ಸವವು ನೆರವೇರುತ್ತದೆ.
ಏಕಚಿತ್ತದಿಂದ ಸಿರಿದೇವಿಯ ಚರಿತೆಯನ್ನು ಓದಿದ ನಿಮಗೆಲ್ಲರಿಗೂ ಸಪ್ತಸಿರಿಯ ಪರಿವಾರವು, ಕುಮಾರನು ಸರ್ವ ಸಿರಿ – ಸೌಭಾಗ್ಯವನ್ನುಂಟು ಮಾಡಲಿ. ಸನ್ಮಂಗಳಾನಿ ಭವಂತು.