Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Sri Markodu Chikkamma Devi, Koteshwara-Vill.

ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ, ಮಾರ್ಕೋಡು, ಕೋಟೇಶ್ವರ||
Shree Chikkamma Devi temple, Markodu, Koteshwara.

ಶ್ರೀ ಮಾರ್ಕೋಡು ಚಿಕ್ಕಮ್ಮ ದೇವಿ.
Sri Markodu ChikkammaDevi.

ಮಾರ್ಕೋಡಿನ ಜನ-ಮನದಲಿ ನೆಲೆಸಿನಿಂತ ದೇವಿ; ಮಾರ್ಕೋಡು ಕ್ಷೇತ್ರದ ಆರಾಧ್ಯ ದೇವತೆ “ಶ್ರೀ ಚಿಕ್ಕಮ್ಮ ದೇವಿ”
 
ಕಲರ ಕಾಯ್ವ ಮಾರ್ಕೋಡು ಪುರನಿಲಯೆ ಶ್ರೀ ಚಿಕ್ಕಮ್ಮದೇವಿ ಅಮ್ಮನವರು ನೆಲೆನಿಂತ ಪುಣ್ಯತಾಣವೇ ‘ಮಾರ್ಕೋಡಿನ ದಕ್ಷಿಣ’ ಕೊನೆಯಲ್ಲಿ ಕಂಗೊಳಿಸುವ “ಶ್ರೀ ಮಾರ್ಕೋಡು ಚಿಕ್ಕಮ್ಮದೇವಿ ದೇವಸ್ಥಾನ”. ಇಲ್ಲಿಗೆ ಮಾರ್ಕೋಡು ಎಂದು ಹೆಸರು ಬರಲು ಕಾರಣ ಮೊದಲು ಈ ಸ್ಥಳದಲ್ಲಿ ಮಾರುದ್ದದ ಕೋಡುಗಳಿದ್ದವು, ಆದ ಕಾರಣದಿಂದ ಹೀಗೆ ಹೆಸರು ಬಂದಿತು ಎಂಬುದು ಹಿಂದಿನವರ ಅಂಬೋಣ.


Sri Chikkamma temple front View
ಶ್ರೀ ಚಿಕ್ಕಮ್ಮದೇವಿ ದೇವಸ್ಥಾನದ ಮುಂಬಾಗದ ದೃಶ್ಯ
          ಹೀಗೆ ಕೋಟೇಶ್ವರ ಗ್ರಾಮವಾದರೂ ಕೂಡಾ, ಕೋಟೇಶ್ವರದ ಗ್ರಾಮದಲ್ಲಿನ ಈ ಮಾರ್ಕೋಡು ಎಂಬುದು ಅತ್ಯಂತ ದೊಡ್ಡದಾದ ಗ್ರಾಮ ಪಂಚಾಯಿತಿಗೆ ಒಳಪಟ್ಟ ಪ್ರದೇಶವಾಗಿದೆ. ಮಾರ್ಕೋಡನ್ನು ಒಂದು ಹೊಸ ಗ್ರಾಮವಾಗಿ ಮಾಡುವಷ್ಟು ಜನಸಂಖ್ಯೆಯನ್ನು ಈ ಪ್ರದೇಶ ಒಳಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಪೂರ್ವಕ್ಕೆ ಹಾಗೂ ಹಾಲಾಡಿ ರಸ್ತೆಯ ಉತ್ತರದಿಂದ ಗೋಪಾಲಾಡಿ(ಅಂಕದಕಟ್ಟೆ) ರಸ್ತೆಯ ತನಕವೂ ಹಾಗೂ ಪೂರ್ವದಲ್ಲಿ ನೇರಂಬಳ್ಳಿಯ ತನಕವೂ ಮೋರ್ಕೋಡಿನ ವ್ಯಾಪ್ತಿ ವಿಶಾಲವಾಗಿ ಹರಡಿ ನಿಂತಿದೆ. ಈ ರೀತಿಯಾಗಿ ವಿಶಾಲತೆಯನ್ನು ಹೊಂದಿರುವ ಮಾರ್ಕೋಡನ್ನು ಪೊರೆತಯತ್ತಾ ನಿಂದಿರುವ ಶ್ರೀ ಚಿಕ್ಕಮ್ಮದೇವಿಗೆ ನಮಿಸೋಣ.
          ಈ ತಾಯಿಯ ಕ್ಷೇತ್ರವು ಮೂರು ಶತಮಾನಗಳ ಇತಿಹಾಸವನ್ನು ಹೊಂದಿದೆ. ಈ ತಾಯಿಯು ಇಲ್ಲಿನ ಜನರ ಜನ-ಮನದಲ್ಲಿ ನೆಲೆಸಿನಿಂತ ಮಹಾದೇವಿಯಾಗಿದ್ದಾಳೆ. ಭಕ್ತರ ಅಭಿಷ್ಠವನ್ನು ಈಡೇರಿಸುವ ಮಹಾಮಾತೆ ಆಗಿ ಸರ್ವಸಂಪತ್ಪ್ರದಾಯಿನಿ ಆಗಿದ್ದಾಳೆ.

ಶ್ರೀ ಚಿಕ್ಕಮ್ಮದೇವಿಯು ಸವಾರಿ ಹೋಗುವ ಕುದುರೆ
Vahana of Sri ChikkammaDevi
          ಹೀಗೆ ಚಿಕ್ಕಮ್ಮದೇವಿಯು ಹಲವಾರು ಕಡೆಯಲ್ಲಿ, ಹಲವಾರು ಹೆಸರಿನಿಂದ ಅದರಲ್ಲೂ ಮುಖ್ಯವಾಗಿ ಕುಂದಾಪುರ ತಾಲೂಕು, ಉಡುಪಿ ತಾಲೂಕುಗಳಲ್ಲಿ ಹಲವಾರು ದೇವಾಲಯ, ದೈವಾಲಯಗಳಲ್ಲಿ ಪ್ರಮುಖ ಹಾಗೂ ಸಪರಿವಾರ ದೇವಿಯಾಗಿ ಆರಾಧನೆಗೊಳ್ಳುತ್ತಿದ್ದಾಳೆ. ಈ ದೇವಿಗೆ ಕೆಂಡ ಸೇವೆ(ಗೆಂಡೋತ್ಸವ) ಯನ್ನು ನಡೆಸುವುದು ಪ್ರಸಿದ್ಧವಾದ ಸೇವೆಯಾಗಿದೆ.
          ಈ ಮಾತೆಯು ಕುಂದಾಪುರ ತಾಲೂಕಿನ ಹಲವಾರು ಕ್ಷೇತ್ರಗಳಲ್ಲಿ ನೆಲೆಸಿ ತನ್ನ ಕಾರಣೀಕವನ್ನು ತೋರುತ್ತಿದ್ದಾಳೆ. ಶ್ರೀ ಮಾತೆಯು ಬ್ಯಾಲ್ತೂರಿನಲ್ಲಿ ದೊಟ್ಟೆಕಾಲ್ ಚಿಕ್ಕು, ಕಂಡ್ಲೂರಿನ ಬಾಲಚಿಕ್ಕು, ನೈಲಾಡಿ ಚಿಕ್ಕು, ಬೈಲ್ ಚಿಕ್ಕು, ಮಾರಣಕಟ್ಟೆಯ ಚಿಕ್ಕು, ಕುಂದಾಪುರ ಒಂಭತ್ತುದಂಡಿಗೆಯ ಹಾಗೂ ಚಿಕ್ಕಮ್ಮನಸಾಲಿನ ಚಿಕ್ಕು ಹೀಗೆ ಹಲವಾರು ಕಡೆಯಲ್ಲಿ ತನ್ನದೇ ಆದಂತಹ ಮಹಿಮೆಯನ್ನು ತೋರುತ್ತಿದ್ದಾಳೆ. ಚಿಕ್ಕಮ್ಮ ದೇವಿಯ ಅತ್ಯಂತ ಶಕ್ತಿಪ್ರದ ಸ್ಥಳವಾದ ಹಾಲಾಡಿಯ ಮರ್ಲು ಚಿಕ್ಕಮ್ಮ ಕ್ಷೇತ್ರ ಇಂದು ಚಿಕ್ಕಮ್ಮ ದೇವಿಯಿಂದ ಗುರುತಿಸಲ್ಪಡುವ ಮಹಾನ್ ಕ್ಷೇತ್ರವಾಗಿದೆ. ಅದೇ ರೀತಿಯಲ್ಲಿ ಮಾರ್ಕೋಡಿನಲ್ಲಿ ತಾನು ನೆಲೆಸಿ ತನ್ನ ಪಾರಮ್ಯಶಕ್ತಿಯನ್ನು ತೋರುತ್ತಿದ್ಧಾಳೆ.
          ಸ್ಥಳ ಪುರಾಣವನ್ನು ಕೆದಕಿದಾಗ ಅಂಥ ಯಾವುದೇ ಪೌರಾಣಿಕ ಮಾಹಿತಿ ಸಿಗದೆ ಇದ್ದರೂ, ಈ ದೇವಾಲಯ ಸುಮಾರು ಮೂರು ಶತಮಾನಗಳಿಗೆ ಮೀರಿದ ಇತಿಹಾಸವನ್ನು ಹೊಂದಿದ್ದು ಈ ದೇವಾಲಯ ಪೂರ್ವದಲ್ಲಿ ಮಾರ್ಕೋಡಿನ ಕೊನೆಯ ಭಾಗದ ನೇರಂಬಳ್ಳಿ ಸಮೀಪದ ಗೊಲ್ಲರ ಬೆಟ್ಟಿನ ಗುಡ್ಡೆಮನೆ ಎಂದು ಕರೆಸಿಕೊಳ್ಳುವ ಪ್ರದೇಶದಲ್ಲಿತ್ತು. ಈಗಲು ಅಲ್ಲಿ ಈ ದೇವಿಯ ಮೂಲ ಶಕ್ತಿಗಳು ಇವೆ. ತದನಂತರ ಕೆಲವೊಂದು ಪ್ರಾಕೃತಿಕ ವಿಕೋಪ ಹಾಗೂ ಕೆಲವೊಂದು ವೈಮನಸ್ಸಿನಿಂದ ಅಲ್ಲಿಂದ ಶಕ್ತಿಯ ಮರು ಸ್ಥಾಪನೆಯು ಮಾರ್ಕೋಡಿನ ಈಗಿನ ಸ್ಥಳದಲ್ಲಿ ಆಯಿತು ಎಂದು ಕಂಡು ಬರುತ್ತದೆ. ಇದಕ್ಕೆ ಸಾಕ್ಷಿಯಾಗಿ ಮೂಲನೆಲೆ, ನಾಗಬನ ಮತ್ತು ದೇವರ ಕೆರೆಯನ್ನು ಇಂದಿಗೂ ಅಲ್ಲಿ ಕಾಣಬಹುದು.



Sri Chikkamma Devi's Parivara Daivas
ಶ್ರೀ ಚಿಕ್ಕಮ್ಮದೇವಿಯ ಪರಿವಾರ ದೈವಗಳು
          ಶ್ರೀ ಚಿಕ್ಕಮ್ಮ ದೇವಿ ಪ್ರಧಾನ ದೇವರಾಗಿರುವ ಈ ದೇವಸ್ಥಾನದಲ್ಲಿ ಮರ್ಲುಚಿಕ್ಕು, ನಂದಿ, ಕಲ್ಕುಡ, ನಾಗ, ಪಂಜುರ್ಲಿ, ಬಗ್ಗುಚಿಕ್ಕು, ಬಾಗುಚಿಕ್ಕು, ಬಾಲಚಿಕ್ಕು, ಅಬ್ಬಗ-ದಾರಗ, ಕೆಂಡದ ಹೈಗುಳಿ, ಹೈಗುಳಿ, ಮೋಟ ಹೈಗುಳಿ, ಹಿರಣ್ಯ ಹೈಗುಳಿ, ಹೊರಸುತ್ತಿನ ಹೈಗುಳಿ, ಯಕ್ಷೆ, ಕಲ್ಲುರ್ಟಿ, ಗಾಮ, ಮಂತ್ರಿಗಣಗಳೆಂಬ ಪರಿವಾರ ದೈವಗಳು ಕಂಡುಬರುತ್ತದೆ. ಸಮೀಪದ ಹಾಲಾಡಿ ಕೋಟೇಶ್ವರ ರಾಜ್ಯರಸ್ತೆಯ ಬಲ ಪಾಶ್ವದಲ್ಲಿ ಈ ಕ್ಷೇತ್ರಕ್ಕೆ ಸಂಬಂದಿಸಿದ ನಾಗ ಬೊಬ್ಬರ್ಯ ದೇವರ ಸನ್ನಿದಾನವಿದೆ.
          ಇಲ್ಲಿ ಪ್ರತಿವರ್ಷ ಮಾರ್ಚ್ ತಿಂಗಳ ದಿನಾಂಕ ಏಳರಂದು ಕೆಂಡೋತ್ಸವ ನೆರವೇರುತ್ತದೆ. ಅದೇ ದಿನ ಸಂಜೆ ನಾಗದೇವರಿಗೆ ಹಾಲಿಟ್ಟು ಸೇವೆ, ಮರುದಿನ ಪ್ರಾತಃಕಾಲ ಢಕ್ಕೆಬಲಿ, ರಾತ್ರಿ ಯಕ್ಷಗಾನ ಬಯಲಾಟ ನೆರವೇರುತ್ತದೆ. ಮಾರ್ಚ್ ದಿನಾಂಕ ಒಂಭತ್ತರಂದು ರಾತ್ರಿ ಹತ್ತು ಗಂಟೆಗೆ ಶ್ರೀ ಬೊಬ್ಬರ್ಯ, ಕಲ್ಲುಕುಟ್ಟಿಗ, ಪಂಜುರ್ಲಿ ದೈವಗಳ ಕೋಲಸೇವೆ ನಡೆಯುತ್ತದೆ.

ಶ್ರೀ ಚಿಕ್ಕಮ್ಮದೇವಿಯ ಪರಿವಾರ ದೈವಗಳಾದ ಕಲ್ಕುಡ, ಕಲ್ಲುರ್ಟಿ, ಮಂತ್ರಿಗಣಾದಿ ದೈವಗಳು
Sri Kalkuda, Kallurti, Manthrigana Daivas
          ಶ್ರೀ ಚಿಕ್ಕಮ್ಮ ಮತ್ತು ಪರಿವಾರ ದೇವರುಗಳಿಗೆ ಕಟ್ಟು ಕಟ್ಟಳೆಯಂತೆ ಶುಕ್ರವಾರ ಮತ್ತು ಸಂಕ್ರಾಂತಿ ದಿನದಲ್ಲಿ ಪೂಜೆ ನಡೆಯುತ್ತದೆ. ವಿಶೇಷ ಕಟ್ಲೆ ವಿನಿಯೋಗಾದಿಗಳಾಗಿ ನಾಗರಪಂಚಮಿ, ಕದಿರುಹಬ್ಬ, ನವರಾತ್ರಿ ಪೂಜೆ ಮತ್ತು ವಿಜಯದಶಮಿ ದಿನ ವಾಹನ ಪೂಜೆ ನೆರವೇರುತ್ತದೆ. ಭಕ್ತರ ಬಯಕೆಯಂತೆ ವಿಶೇಷ ಪೂಜಾದಿಗಳು ನೆರವೇರುತ್ತದೆ.
          ಶ್ರೀ ದೇವಿಗೆ ‘ಚಿಕ್ಕಮ್ಮದೇವಿ” ಎಂದು ಹೆಸರು ಬರಲು ಕೆಲವೊಂದು ಯಕ್ಷಗಾನ ಬಯಲಾಟ, ಅಥವಾ ಐತಿಹ್ಯದಂತೆ “ಪರಾಶಕ್ತಿಯು ತನ್ನ ಅವತಾರಿಕೆಯಲ್ಲಿ ದುಷ್ಟರ ಸಂಹಾರ ಮಾಡುವ ಸಂದರ್ಭದಲ್ಲಿ ದೇವಿಗೆ ಸಹಾಯ ಮಾಡಲು ದೇವಿಯ ಅಂಶದಿಂದ ಜನಿಸಿ ಬಂದವಳೇ ಈ ದೇವಿ, ಇವಳು ಪರಾಶಕ್ತಿಗಿಂತ ಚಿಕ್ಕವಳಾದ್ದರಿಂದ ‘ಚಿಕ್ಕಮ್ಮ’ ಎಂಬ ಹೆಸರಿನಿಂದ ಕರೆಯಲ್ಪಟ್ಟಳು’ ಎಂದು ಹೇಳಲಾಗುತ್ತದೆ. ಹಾಗೇ ತುಳುನಾಡಿನ ‘ಯಜಮಾಂತಿ’ ದೈವವೆ ‘ಚಿಕ್ಕಮ್ಮ’ ಎಂಬುದಾಗಿ ಹೇಳಲಾಗುತ್ತದೆ. ಅಲ್ಲದೇ ಮಾರಣಕಟ್ಟೆಯ ಸ್ಥಳ ಪುರಾಣದಲ್ಲಿ ‘ಉಲ್ಲಾಳದ ಚಿಕ್ಕಮ್ಮ’ ಎಂಬ ಉಲ್ಲೇಖವಿರುವುದು ಕಂಡುಬರುತ್ತದೆ.
          ಈ ಕ್ಷೇತ್ರವನ್ನು ಸಂದರ್ಶನ ಮಾಡುವ ಮುನ್ನ ದೇವಳದಿಂದ ಮಾಹಿತಿಯನ್ನು ಪಡೆದು ತೆರಳುವುದು ಸೂಕ್ತ. ಇಲ್ಲಿ ಮುಖ್ಯವಾಗಿ ಸಂಕ್ರಾಂತಿ ಮತ್ತು ಶುಕ್ರವಾರ ದಿನ ಪೂಜಾ ಕೈಂಕರ್ಯಗಳು ನಡೆಯುತ್ತದೆ.

“ಭಕ್ತಾದಿಗಳಾದ ತಾವೂ ಒಮ್ಮೆ ಶ್ರೀ ಚಿಕ್ಕಮ್ಮದೇವಿಯನ್ನು ಕಂಡು ಪುನೀತರಾಗಿ”

ದಾರಿಯ ವಿವರ : ಉಡುಪಿ-ಕುಂದಾಫುರ ಮಾರ್ಗ ಮದ್ಯದ ರಾಷ್ಟ್ರೀಯ ಹೆದ್ದಾರಿ ಕೋಟೇಶ್ವರ ಬೈಪಾಸ್ನಿಂದ ಹಾಲಾಡಿ ರಸ್ತೆಯಲ್ಲಿ ½ ಕಿ.ಮೀ ಸಾಗಿದರೆ ‘ಶ್ರೀ ಚಿಕ್ಕಮ್ಮ ದೇವಿಯ” ದೇವಾಯಲವನ್ನು ತಲುಪಬಹುದು. 
(ಸೂಚನೆ :  ಈ ಲೇಖನದಲ್ಲಿ ಉಲ್ಲೇಖವಾದ ಮಾಹಿತಿಯು ಕೆಲವಾರು ಲೇಖನ ಮತ್ತು ಜನರಿಂದ ಆಡು-ನುಡಿಯನ್ನು ಅವಲಂಬಿಸಿ ರಚಿತವಾಗಿದೆ. ಓದುಗರೆ ಇದರಲ್ಲಿ ಯಾವುದೇ ಲೋಪ-ದೋಷಗಳಿದ್ದರೂ ಕ್ಷಮಿಸಿ, ನಿಮಗೆ ತಿಳಿದಿರುವ ಅಮೂಲ್ಯ ಮಾಹಿತಿಯನ್ನು ನೀಡುವುದಾದರೆ ನಿಮ್ಮ ಮಾಹಿತಿಗೆ ಮುಕ್ತ ಸ್ವಾಗತ. ನಿಮ್ಮ ಅನಿಸಿಕೆ-ಅಭಿಪ್ರಾಯವನ್ನು raghu.koteshwara113@gmail.com ಗೆ ಮೈಲ್ ಮಾಡಬೇಕಾಗಿ ವಿನಂತಿ.)