ಶ್ರೀ ಅಣ್ಣಪ್ಪ ಪಂಜುರ್ಲಿ ಚರಿತ್ರೆ
Shree Annappa Panjurli Charithre
Sri Annappa Panjurli
ಧರ್ಮದೈವ “ಅಣ್ಣಪ್ಪ ಪಂಜುರ್ಲಿ”
ಪಂಜುರ್ಲಿ ದೈವವೆಂದರೆ ತಿಳಿಯದವರು ಯಾರು ತಾನೇ ಇದ್ದಾರು. ಬಹಳ ಕಾರಣೀಕ ಶಕ್ತಿಗಳಲ್ಲಿ, ತನ್ನ ಶಕ್ತಿ- ಕಾರಣಿಕವನ್ನು ಮೆರೆಯುತ್ತಾ, ತನ್ನ ಭಕ್ತರ ಪೊರೆವ ದೈವ, “ಮಂಜುನಾಥ ಸ್ವಾಮಿ ಮತ್ತು ಪರಮೇಶ್ವರಿಯ” ಪ್ರೀತಿಯ ಮಗನಾಗಿ, ತುಳುನಾಡ ಕಾರಣೀಕ ಶಕ್ತಿಯಾಗಿ ನಿಂದವನೆ “ಶ್ರೀ ಸ್ವಾಮಿ ಅಣ್ಣಪ್ಪ ಪಂಜುರ್ಲಿ”
Sri Annappa Panjurli |
ಈ ಕಾರಣೀಕ ಶಕ್ತಿಯಾದ “ಪಂಜುರ್ಲಿ” ದೈವದ ಬಗೆಗಿನ ಪುರಾಣವನ್ನೋ, ಕಥೆಯನ್ನೊ, ಅಥವಾ ಶ್ರೀ ಸ್ವಾಮಿಯ ಮೂಲವನ್ನೋ ತಿಳಿಯುವ ಹಂಬಲ-ವಾಂಛೆ ಎಲ್ಲಾ ಆಸ್ತಿಕಮಹಾಶಯರಿಗೂ ಕೂಡಾ ಇದ್ದೆ ಇರುತ್ತದೆ ಎಂದರೆ ತಪ್ಪಾಗಲಾರದು.ನಾನೊಮ್ಮೆ “ಪಂಜುರ್ಲಿ’ಯ ಹಿನ್ನಲೆಯನ್ನು ಅರಸುತ್ತಾ ಸಾಗಿದಾಗ ತುಳುನಾಡಿನ ಪಾಡ್ದನಗಳೊಂದರಲ್ಲಿ ಶ್ರೀ ಸ್ವಾಮಿ ಪಂಜುರ್ಲಿ(Panjurli) ಯ ಬಗ್ಗೆ ಮಾಹಿತಿ ದೊರೆಯಿತು.
ದೈವಗಳೊಡಯನಾದ ಪರಶಿವನಿಂದ ವರಪ್ರಸಾದವನ್ನು ಪಡೆದು ತಾ ಭೂಮಿಯೊಳು, ಅದರಲ್ಲೂ ತುಳುನಾಡ ಪುಣ್ಯಭೂಮಿಯಲ್ಲಿ ನೆಲೆಯಾದ ಮಹಾನ್ ದೈವವೆ ಶ್ರೀ ಪಂಜುರ್ಲಿ(Panjurli). ಇವನ ಚರಿತೆಯನ್ನು ಆಲಿಸಿದರು, ಓದಿದರೂ ಪುಣ್ಯ ಪ್ರಾಪ್ತಿ ಎನ್ನಬಹುದು.
ಪಂಜುರ್ಲಿ ವಾಹನ ಅಣ್ಣಪ್ಪ |
ಈ ಸ್ವಾಮಿಯ ಚರಿತೆಯನ್ನು ಕೂಲಂಕುಶವಾಗಿ ನಾವು ಕೆದಕಿದಾಗ ಸ್ವಾಮಿ ಪಂಜುರ್ಲಿ(Panjurli)ಯ ಜನನ ಹೇಗೆ? ಹಿನ್ನಲೆ? ದೈವತ್ವ? ಎಂಬ ಹಲವಾರು ಪ್ರಶ್ನೆಗಳು ಉದ್ಭವವಾಗುತ್ತದೆ. ಒಮ್ಮೆ ಅಣ್ಣ-ತಂಗಿಯಂತೆ ಬಾಳುತ್ತಿದ್ದ ಎರಡು ಹಂದಿ(ಪಂಜಿ)ಗಳು ಘಟ್ಟವನ್ನು ಇಳಿದು ತುಳನಾಡಿನ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಸೇವೆ ಮಾಡಲು ಬಂದವು. ಆಗ ಆ 2 ಹಂದಿಗಳ ಸೇವೆ ಮತ್ತು ಭಕ್ತಿಗೆ ಮೆಚ್ಚಿ ನೀವು ಇನ್ನುಮುಂದೆ ಗಂಡ- ಹೆಂಡಿರಾಗಿ ಬಾಳಿ ಎಂದು ವರವನ್ನು ನೀಡುತ್ತಾರೆ. ಆ ವರವನ್ನು ಪಡೆದು ಗಂಡ- ಹೆಂಡಿರಾಗಿ ಬಾಳಿ ಮಂದೆ ಹೆಣ್ಣು ಹಂದಿ ಗರ್ಬಿಣಿಯಾಗಿ ನಾಲ್ಕು ಮರಿಗಳಿಗೆ ಜನ್ನ ನೀಡುತ್ತದೆ. ಹೀಗೆ ಆ ನಾಲ್ಕು ಹಂದಿಮರಿಗಳು ಬೆಳೆದು ದೊಡ್ಡದಾದ ಹಾಗೇ ಈಶ್ವರ ದೇವರ ತೋಟಕ್ಕೆ ಹೋಗುತ್ತದೆ. ಅದರಲ್ಲಿ ಒಂದು ಹಂದಿ ಮರಿಯನ್ನು ಕಂಡು ಪಾರ್ವತಿ ನನಗೆ ಆ ಹಂದಿ ಮರಿಯನ್ನು ತಂದು ಕೊಡಿ ಎಂದು ಪರಮೇಶ್ವರನಲ್ಲಿ ಹೇಳುತ್ತಾಳೆ. ಅದಕ್ಕೆ ಪರಮೇಶ್ವರ ಒಪ್ಪಿ ಆ ಹಂದಿ ಮರಿಯನ್ನು ತಂದು ಕೊಡುತ್ತಾನೆ. ತಾನು ಆ ಹಂದಿ(ಪಂಜಿ)ಯ ಮರಿಯನ್ನು ಮಗುವಿನಂತೆ ಸಾಕಿ-ಸಲಹುತ್ತಾಳೆ.
ಹೀಗೆ ದಿನಗಳೆದಂತೆ ಆ ಹಂದಿ(ಪಂಜಿ) ಮರಿಯು ಬಲಿದು, ತನ್ನ ತುಂಟಾದಲ್ಲಿ ಪಾರ್ವತಿಯನ್ನು ಬಹುವಾಗಿ ಆಕರ್ಷಿಸುತ್ತದೆ. ಒಮ್ಮೆ ಈ ಪಂಜಿಯು ಪರಮೇಶ್ವರನ ಹೂದೊಟವನ್ನು ಕೆದಕಿ ಹಾಳು ಮಾಡುತ್ತದೆ. ಇದನ್ನು ಕಂಡು ರೋಷದಿಂದ ಪರಶಿವನು ಆ ಹಂದಿ(ಪಂಜಿ)ಯ ಮೇಲೆ ತನ್ನ ರುದ್ರತೆಯ ಪ್ರಕರತೆಯನ್ನು ಬೀರಿ ಆ ಹಂದಿಯ ರುಂಡುವನ್ನು ಮುಂಡದಿಂದ ಬೇರ್ಪಡಿಸುತ್ತಾನೆ. ನಂತರ ಈ ವಿಚಾರ ತಿಳಿದ ಪಾರ್ವತಿಯು ದುಖಃತಪ್ತಳಾಗಿ ಪರಶಿವನಲ್ಲಿ ಸಿಟ್ಟಾಗುತ್ತಾಳೆ. ನಂತರ ಪರಶಿವನು ಹಂದಿಯ ಮೇಲಿನ ಪಾರ್ವತಿಯ ಅತೀ ಪ್ರೀತಿಯನ್ನು ಕಂಡು ಆ ಗತಿಸಿದ ಹಂದಿಗೆ ಮರುಜೀವವನ್ನು ನೀಡುತ್ತಾನೆ. ಹಿರಿಯರ ಪ್ರಕಾರ (ಪಾಡ್ದನದ) ತಲೆಯನ್ನು ಕಡಿದ ಜಾಗಕ್ಕೆ ಸಿಯಾಳವನ್ನು ರುಂಡದ ಮೇಲಿರಿಸಿ ಪ್ರಾಣವನ್ನು ಕೊಡುತ್ತಾನೆ ಪರಶಿವ ಎಂಬುದು. ಒಟ್ಟಾರೆಯಾಗಿ ಭೂಲೋಕದಲ್ಲಿ ಜನಿಸಿ ಆದಿಶಕ್ತಿಯಾದ ಪರಶಿವೆಯನ್ನು ಆಕರ್ಷಿಸಿ ಪರಶಿವನಿಂದ ಗತಿಸಿ ಪುನಃ ಪಾರ್ವತಿಯ ಮೋಹದಿಂದ ಪ್ರಾಣವನ್ನು ಪಡೆದ. ಹೀಗೆ ಪಾರ್ವತಿ ಮರುಜೀವ ಪಡೆದ ಹಂದಿ(ಪಂಜಿ)ಯನ್ನು ಎತ್ತಿ-ಮುದ್ದಾಡಿದಳು. ಪುತ್ರನೆಂಬಂತೆ ತನ್ನ ಮಾತೃ ಪ್ರೀತಿಯನ್ನು ಉಣಬಡಿಸಿದಳು.
ಹೀಗೆ ಈ ಎಲ್ಲಾ ಸನ್ನಿವೇಶದ ನಂತರ ಪರಶಿವನು ಈ ಹಂದಿ(ಪಂಜಿ)ಗೆ ಅಭಯವನ್ನು ನೀಡಿ, ನೀನು ಮಂದೆ ಹಂದಿ(ಪಂಜಿ) ರೂಪದ ದೈವವಾಗು. ಭೂಲೋಕದಲ್ಲಿ ನನ್ನ ನೆಚ್ಚಿನ ದೈವವಾಗಿ ಮುಂದೆ “ಪಂಜುರ್ಲಿ” ಎಂಬ ಬಿರುದಿನೊಂದಿಗೆ ಪ್ರಸಿದ್ಧಿ ಹೊಂದು,ಈ ಹೆಸರಿನಿಂದ ನೀನು ಮುಂದೆ ಭೂಲೋಕದಲ್ಲಿ ಪ್ರಸಿದ್ಧಿಯಾಗು ಎಂಬುದಾಗಿ ವರವನ್ನು ನೀಡುತ್ತಾರೆ. ಹಾಗೆ ಪಾರ್ವತಿಯು ಕೂಡಾ ಅಭಯವನ್ನು ನೀಡಿ ಆಶಿರ್ವದಿಸುತ್ತಾಳೆ. ‘ಹಂದಿ’ ಎಂಬುದು ತುಳುವಿನಲ್ಲಿ “ಪಂಜಿ” ಎಂಬುದಾಗಿ ಹೇಳುತ್ತಾರೆ. ಅದುವೆ ಮುಂದೆ “ಪಂಜುರ್ಲಿ” ಎಂಬುದಾಗಿ ಮುಂದೆ “ಶ್ರೀ ಅಣ್ಣಪ್ಪ ಪಂಜುರ್ಲಿ” ಯಾಗಿ ಭೂಲೋಕದಲ್ಲಿ ಅದರಲ್ಲೂ ತುಳುನಾಡ ಕಾರಣೀಕ ದೈವವಾಗಿ ನೆಲೆಯಾಗುತ್ತಾನೆ.ಧರ್ಮಸ್ಥಳ ನಡಾವಳಿಯಲ್ಲಿ ಅಣ್ಣಪ್ಪ |
ಪಂಜುರ್ಲಿಯೊಂದಿಗೆ ಶಕ್ತಿದೇವತೆಯಾಗಿ, ಧರ್ಮದೇವತೆ – ಸತ್ಯದೇವತೆಯಾಗಿ “ವರ್ತೆ(ವಡ್ತೆ-Varthe)” ಪಂಜುರ್ಲಿಯೊಡಗೂಡಿ ತಾನು “ವರ್ತೆ-ಪಂಜುರ್ಲಿ(Varthe-Panjurli)” ಎಂಬ ನಾಮಾಂಕಿತದಲ್ಲಿ ಭಕ್ತರ ಕಾಯ್ವ ಮಹಾನ್ ದೈವಗಳಾಗಿ ತುಳುನಾಡ ಧರ್ಮದೈವಗಳಾಗಿ ನೆಲೆಸಿದ್ದಾರೆ. ಈ ವರ್ತೆಯು ಕಲ್ಕುಡನ ಪ್ರೀತಿಯ ಸೋದರಿಯಾಗಿ ಅಂತೆ ಪಂಜುರ್ಲಿಗೂ ಸೋದರಿಯಾಗಿ ಕಾರಣಿಕ ಶಕ್ತಿಯಾಗಿ ನೆಲೆಸಿದ್ದಾರೆ. ಕಲ್ಕುಡನು ತನ್ನ ಸೋದರಿಯನ್ನು ಪಂಜುರ್ಲಿಯ ಸುಪರ್ದಿಯಲ್ಲಿ ಕೊಟ್ಟು ನೀವು ಹೋದ ಸ್ಥಳದಲ್ಲೂ ಅಣ್ಣ-ತಂಗಿಯರಾಗಿ ಭಕ್ತರ ಕಾಯ್ವ ದೈವವಾಗಿ ಎಂದು ಹೇಳಿದನು. ಅಂತೆ ಕಲ್ಕುಡನು ಕಲ್ಲುರ್ಟಿಯೊಂದಿಗೆ ಪೂಜಿತಗೊಂಡರೆ, ಪಂಜುರ್ಲಿಯು ಕಲ್ಲುರ್ಟಿಯ ವರ್ತೆ ಎಂಬ ನಾಮದೊಂದಿಗೂ, ಸತ್ಯದೇವತೆ, ಪಾಷಾಣಾಮೂರ್ತಿ ಎಂಬ ಹೆಸರಿನಿಂದಲೂ ಅಣ್ಣ-ತಂಗಿಯರಾಗಿಯೂ, ತುಳುನಾಡ ಕಾರಣೀಕ ಶಕ್ತಿಯಾಗಿಯೂ ನೆಲೆಯಾಗಿ ಭಕ್ತರ ಕಾಯ್ವ ಮಹಾನ್ ದೈವವಾಗಿದ್ದಾರೆ.
ಹೀಗೆ ಹಲವಾರು ಕಡೆಯಲ್ಲಿ ಕೋಲ-ನೇಮೋತ್ಸವದಲ್ಲಿ “ವರ್ತೆ-ಪಂಜುರ್ಲಿ” ಯಾಗಿ ಅಭಯವನ್ನು ನೀಡುತ್ತಾ ಒಂದೊಂದು ಸ್ಥಳದಲ್ಲೂ ಅಲ್ಲಿನ ಸ್ಥಳಕ್ಕೆ ಅನುಗುಣವಾಗಿ ಅಲ್ಲಿನ ಅನ್ವರ್ಥ ನಾಮದಲ್ಲಿ ಅಲ್ಲಲ್ಲಿ ದೈವವಾಗಿ ನೆಲೆಯಾಗಿದ್ದಾನೆ. ಅಂತೆ ಕುಪ್ಪೆ ಪಂಜುರ್ಲಿ, ಅಣ್ಣಪ್ಪ ಪಂಜುರ್ಲಿ, ಕಲ್ಯ ಪಂಜುರ್ಲಿ, ವಡ್ತೆ ಪಂಜುರ್ಲಿ, ಬಗ್ಗು ಪಂಜುರ್ಲಿ ಹಾಗೇ ಅನೇಕ ಸ್ಥಳದಲ್ಲಿ ಅನೇಕಾನೆಕ ನಾಮದಲ್ಲಿ ಕಡೆಸಿಕೊಂಡು ಕೋಲ, ಬಲಿ, ನೇಮ, ಬೋಗಗಳನ್ನು ಪಡೆಯುತ್ತಾ ಭಕ್ತರ ಕಾಯುತ್ತಾ ನಿಂದಿದ್ದಾರೆ.
ಈ ರೀತಿಯಾಗಿ ಮಹಾನ್ ದೈವ ಅಣ್ಣಪ್ಪ ಪಂಜುರ್ಲಿಯ ಕಥಾನಕವನ್ನು ಆಲಿಸಿದವರಿಗೂ, ಓದಿದವರಿಗೂ ಶ್ರೀ ಅಣ್ಣಪ್ಪ ಪಂಜುರ್ಲಿಯೂ ಸಕಲೈಶ್ವರ್ಯವನ್ನೂ ಕರುಣಿಸಲಿ.
(ಸೂಚನೆ : ಈ ಲೇಖನದ ಬಗ್ಗೆ ಹಲವಾರು ನಮ್ಮ-ನಾಡು ಓದುಗರಿಂದ ಲೇಖನ ಸಂಗ್ರಹ ಲೋಪದ ಬಗ್ಗೆ ಸಲಹೆಗಳು ಬಂದಿದ್ದು, ಹಿಂದೆ ಅಣ್ಣಪ್ಪ ಮತ್ತು ಪಂಜುರ್ಲಿ ಒಂದೇ ಎಂಬ ಭಾವದಲ್ಲಿ ಇದ್ದ ಲೇಖನವನ್ನು ಅಣ್ಣಪ್ಪ ಮತ್ತು ಪಂಜುರ್ಲಿ ದೈವದ ಅವಿನಾಭಾವ ಸಂಬಂಧವನ್ನು ಇಲ್ಲಿ ಪುನರ್ ವಿಮರ್ಶಿಸಿ ಲೇಖನವನ್ನು ಪ್ರಕಟಿಸಲಾಗಿದೆ. ಸಲಹೆಯನ್ನು ನೀಡಿದಂತ ಎಲ್ಲಾ ಓದುಗರಿಗೂ ಧನ್ಯವಾದಗಳು.)