Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Shree Mahalingeshwara Kalinga(Subramanya) Temple, Kalavara ||
ಶ್ರೀ ಮಹಾಲಿಂಗೇಶ್ವರ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನ, ಕಾಳಾವರ, ಕುಂದಾಪುರ ತಾಲೂಕು||


ಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಪ್ರಸಿದ್ಧ ಶಿವನ ಸಮೇತ ಇರುವ ನಾಗಕ್ಷೇತ್ರ(ಸುಬ್ರಹ್ಮಣ್ಯ)ಗಳಲ್ಲಿ ತಾಲೂಕಿನ ಪ್ರಮುಖ ನಗರವಾದ ಕೋಟೇಶ್ವರದಿಂದ(Koteshwara) ಸರಿಸುಮಾರು 4 ಕಿ.ಮೀ. ಅಂತರದಲ್ಲಿ ಇರುವ ಕ್ಷೇತ್ರವೇ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನ( Kalavara Shree Mahalingeshwara Kalinga(Subramanya) Temple). ಕಾಳಾವರದ ಈ ದೇವಸ್ಥಾನವು ಶಿವನಿಗಿಂತ ಹೆಚ್ಚಾಗಿ ಶಿವ ಕುಮಾರನಿಂದಲೇ ಜನಜನಿತವಾಗಿದೆ. ಕಾರಣ ಇದೊಂದು ನಾಗಕ್ಷೇತ್ರವಾಗಿ ಶ್ರೀ ಕ್ಷೇತ್ರ ಕುಕ್ಕೆಗೆ ಸಮಾನವೆಂತಲೂ, ಅಲ್ಲಿನ ಎಲ್ಲಾ ಶಕ್ತಿ ಇಲ್ಲಿ ಐಕ್ಯವಾಗಿದೆ ಎಂಬುದು ಪ್ರಾಜ್ಞರ ಅಭಿಪ್ರಾಯವಾಗಿದೆ. 


ಈ ಕಾರಣದಿಂದ ಇಲ್ಲಿ ಸಕಲ ನಾಗಬಾಧೆಯ ನಿವೃತ್ತಿ ಸಮೇತ ಶ್ರೀ ಮಹಾಲಿಂಗೇಶ್ವರ ಶ್ರೀ ಸುಬ್ರಹ್ಮಣ್ಯನ ಅನುಗ್ರಹವಾಗುತ್ತದೆ ಎಂಬುದು ನಂಬಿಕೆ. ಅನಾದಿಯಿಂದಲೂ ಇಲ್ಲಿ ಒಂದು ಶಿವನ ಮಂದಿರ ಇದ್ದು ಅದರ ಪಕ್ಕದಲ್ಲೇ ಪ್ರಕೃತಿ ನಿರ್ಮಿತವಾದ ನಾಗಾಲಯ ಇದೆ. ದೊಡ್ಡ ಮರದ ಬೀಳಿನಿಂದ ಆವೃತವಾಗಿ ಅದುವೇ ಕಾಳಿಂಗನ ಮೂಲ ಸಾನ್ನಿಧ್ಯವೆಂದು ಹೇಳಲಾಗುತ್ತದೆ. ಅದರ ಮುಂಬಾಗ ನಾಗರ ಕಲ್ಲುಗಳು ಮತ್ತು ವಿಶಾಲವಾದ ಹುತ್ತವಿದ್ದು ಅದಕ್ಕೆ ಮಾಡನ್ನು ನಿರ್ಮಾಣ ಮಾಡಲಾಗಿದೆ. ವಿಶೇಷ ಪೂಜಾದಿಗಳು ಹುತ್ತ ಸಮೇತ ನಾಗರ ಕಲ್ಲುಗಳಿಗೆ ನಡೆಯುತ್ತದೆ.


ಇಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಪ್ರತ್ಯೇಕ ಗುಡಿ ಇದ್ದು, ಶ್ರೀ ದೇವರ ಪಾಣೀಪೀಠದಲ್ಲಿ ಶಿವನ ಸಮೇತ ಶಕ್ತಿದೇವತೆ ದುರ್ಗೆ ಮತ್ತು ಗಣಪತಿಯ ಸಾನ್ನಿಧ್ಯ ಇರುವುದು ಕಂಡುಬಂದಿದೆ. ಈ ಕಾರಣದಿಂದ ಶಿವನ ಸಾನ್ನಿಧ್ಯದಲ್ಲಿ ಶಿವನ ಸಮೇತ ದುರ್ಗೆ ಮತ್ತು ಗಣಪತಿಗೂ ಪೂಜೆ ಸಲ್ಲುತ್ತದೆ. ಇಲ್ಲಿನ ಆಲಯಗಳು ಬಹು ಪುರಾತನವಾಗಿದ್ದು ಇತ್ತಿಚೀನ ದಿನಗಳಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ದೇಗುಲವು ಹೊಸ ಹೊಳಪನ್ನು ಪಡೆಯುತ್ತಿದೆ.

ಈ ದೇವಾಲಯಕ್ಕೆ ಸಂಬಂಧಿಸಿದಂತೆ ಒಂದು ಕೆರೆ ಕೂಡಾ ದೇವಾಲಯದ ಬಲ ಭಾಗದ ರಸ್ತೆಯ ಪಕ್ಕದಲ್ಲಿ ಕಾಣಬಹುದು. ಇಲ್ಲಿ ಬೇಸಿಗೆ ಹೊರತಪಡಿಸಿ ಇನ್ನುಳಿದ ಕಾಲದಲ್ಲಿ ನೀರಿನ ಸೆಲೆ ಇರುತ್ತದೆ. ಶ್ರೀ ಕ್ಷೇತ್ರದಲ್ಲಿ ಪ್ರತಿ ವರ್ಷ ಚಂಪಾ ಷಷ್ಠಿಯಂದು ವಿಜೃಂಭಣೆಯ ಮಹೋತ್ಸವವು ನಡೆಯುತ್ತದೆ. ಅಂದು ಮೂಲೆ-ಮೂಲೆಯಿಂದ ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಇದನ್ನು ಹಿರಿ ಷಷ್ಠಿ ಎಂದು ಕರೆಯಲಾಗುತ್ತದೆ. ಅಂದು ಕೋಟೇಶ್ವರ ಹಾಗೂ ಕುಂದಾಪುರ ತಾಲೂಕಿನ ಸುತ್ತಮುತ್ತಲ ಊರಿನವರು ಶ್ರೀ ದೇವಳಕ್ಕೆ ಮುಂಜಾನೆ 4.00 ಗಂಟೆಗೆ ಆಗಮಿಸಲು ಆರಂಭಿಸುತ್ತಾರೆ. ಅಷ್ಟೊಂದು ಜನನಿಬಿಡವಾಗಿರುತ್ತದೆ. ಅಂದು ನಾಗದೇವರಿಗೆ(ಸುಬ್ರಹ್ಮಣ್ಯ) ಬೆಳ್ಳಿ ಹರಿಕೆ ಹಾಗೂ ಅನೇಕ ಸೇವಾಧಿಗಳು ನಡೆಯುತ್ತದೆ. ಶ್ರೀ ಕ್ಷೇತ್ರದಲ್ಲಿ ಪರಿವಾರದಲ್ಲಿ ಕ್ಷೇತ್ರಪಾಲ, ಭೂತರಾಯ ಶಕ್ತಿಗಳೂ ಇದ್ದು ಅವುಗಳಿಗೂ ಪೂಜಾಧಿಗಳು ನಡೆಯುತ್ತದೆ. ದಟ್ಟ ಕಾನನದ ಮಧ್ಯೇ ಇರುವ ಈ ದೇಗುಲ ನೋಡಲು ಬಹು ಸಂತೋಷವನ್ನು, ಕಾನನದ ಸೊಬಗನ್ನು ನಮಗೆ ಉಣಬಡಿಸುತ್ತದೆ. ಇಲ್ಲಿ ಷಷ್ಠಿ ಮಾತ್ರವಲ್ಲದೆ ಶಿವರಾತ್ರಿ ಸಮಯದಲ್ಲಿ ವಿಶೇಷ ಪೂಜಾದಿಗಳು ನಡೆಯುತ್ತದೆ. ಹಿರಿಷಷ್ಠಿಯಂದು ಅನ್ನದಾನ ಸೇವೆ ನಡೆಯುತ್ತದೆ. ಶ್ರೀ ದೇವರು ಚರ್ಮವ್ಯಾದಿ, ಸಂತಾನ, ಉದ್ಯೋಗ, ಕಂಕಣ, ನೆಮ್ಮದಿ ಕರುಣಿಸುವುದರೊಂದಿಗೆ ಧರ್ಮದಿಂದ ಕೇಳಿದ ಎಲ್ಲಾ ಬೇಡಿಕೆಯನ್ನು ಈಡೇರಿಸುತ್ತಾನೆ. ಇಲ್ಲಿ ಚಿಕ್ಕಪುಟ್ಟ ವ್ಯಾದಿಗಳಿಗೆ ಬೆಳ್ಳಿಯ ಹರಕೆಯನ್ನು ಹಾಕುವುದು ವಾಡಿಕೆ. ಇದರಂತೆ ಹಲವಾರು ವ್ಯಾದಿಗಳು ನಿವಾರಣೆಯಾದ ನಿದರ್ಶನಗಳೂ ಕೂಡಾ ನಾವು ಕಾಣಬಹುದು.


ಈ ಕ್ಷೇತ್ರವನ್ನು 2ನೇಯ ಸುಬ್ರಹ್ಮಣ್ಯವೆಂದೇ ಕರೆಯಲಾಗುತ್ತದೆ. ಕುಕ್ಕೆಯಲ್ಲಿ ಮಾಡುವ ಎಲ್ಲಾ ಕಾರ್ಯಗಳು ಇಲ್ಲಿ ಕೂಡಾ ಮಾಡುವ ಅವಕಾಶವಿದ್ದು, ಸಮಾನ ಫಲವನ್ನು ನೀಡುತ್ತದೆ ಎಂಬುದು ಪ್ರಾಜ್ಞರ ನುಡಿ. ಕುಕ್ಕೆಗೂ - ಕಾಳಾವರಕ್ಕೂ ಹಲವಾರು ಸಾಮತ್ಯೆಯನ್ನು ಕಾಣಬಹುದು. ಕುಕ್ಕೆ ಮತ್ತು ಕಾಳಾವರದಲ್ಲಿ ಸುತ್ತಲೂ ಆವರಿಸಿದ ನೀರಿನ ಸೆಲೆ ಮಾತ್ರವಲ್ಲದೆ ಮೂಲ ಹುತ್ತಕ್ಕೆ ಸೇವೆಗಳು ನಡೆಯುತ್ತದೆ. ಕಾಳಾವರ ಕ್ಷೇತ್ರದ ಹುತ್ತವು ಬಾವಿಯಿಂದ ಮೇಲೆದ್ದು ಬಂದಿದ್ದು ಎಂಬುದು ಐತಿಹ್ಯ. ಕಾಳಾವರ ಎಂಬುದು ಕಾಳಿಂಗನಿಂದಲೇ ಬಂದಿರಬೇಕು ಎಂಬುದು ಬಲ್ಲವರ ಅಭಿಮತ. ಕಾಳಾ+ಆವರ ಅಂದರೆ ಕಾಳಿಂಗನಿಂದ ಆವೃತವಾದ ಎಂಬ ಅರ್ಥವನ್ನು ನೀಡುತ್ತದೆ. ಈ ಕಾರಣದಿಂದ ಈ ಊರು ಕಾಳಿಂಗನಿಂದ ಕಾಳಾವರ ಆಗಿರಬೇಕು. ದೇವಾಲಯದ ಬಗ್ಗೆ ಪೂರ್ಣ ಮಾಹಿತಿ ಲಭ್ಯವಿಲ್ಲದಿದ್ದರೂ, ಕೆಲವೊಂದು ಆಡುನುಡಿ ಹಾಗೂ ಹಿರಿಯರ ಅಭಿಪ್ರಾಯವನ್ನು ಸಂಗ್ರಹಿಸಿ ಈ ಲೇಖನವನ್ನು ಸೃಜಿಸಲಾಗಿದೆ. ಕಾಳಾವರ ಷಷ್ಠಿ ಅತ್ಯಂತ ಪ್ರಸಿದ್ದವಾದ ಹಬ್ಬವೇ ಆಗಿದೆ. ಹಿಂದೆ ಈ ದೇಗುಲಕ್ಕೆ ಹೋಗುವ ಮಾರ್ಗ ತುಂಬಾ ಕಷ್ಟದಾಯಕವಾಗಿತ್ತು, ಆದರೆ ಇತ್ತಿಚೇಗೆ ಇಲ್ಲಿನ  ದಾರಿಯನ್ನು ಸುಗಮಗೊಳಿಸಿದ್ದಾರೆ. ಈ ದೇಗುಲದ ಪೂರ್ಣ ಮಾಹಿತಿಯನ್ನು ತಿಳಿಯಲು ಹಾಗೂ ಜೀರ್ಣೋದ್ದಾರದ ದೃಷ್ಟಿಯಿಂದ ಅಷ್ಟಮಂಗಳಾಧಿ ಸ್ವರ್ಣಾರೂಢ ಪ್ರಶ್ನೆಯನ್ನು ಇಡುವ ಉದ್ದೇಶವನ್ನು ದೇಗುಲದ ಸಮಿತಿಯವರು ಹೊಂದಿದ್ದಾರೆ. 


ಈ ದೇಗುಲವು 2013ರಿಂದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು, ಮುಂದೆ ಹಲವಾರು ಕಾರ್ಯಗಳು ಆಗಬೇಕಾಗಿದೆ. ಇಂಥ ಪ್ರಸಿದ್ಧ ಕ್ಷೇತ್ರ ಸಂಪೂರ್ಣ ಜೀರ್ಣೋದ್ಧಾರಗೊಂಡರೆ ಖಂಡಿತವಾಗಿಯೂ ಕುಕ್ಕೆಯ ಸಮಾನವಾಗುವುದರಲ್ಲಿ ಸಂಶಯವಿಲ್ಲ. ಸಹೃದಯಿಗಳ, ಭಕ್ತರ ಸಹಕಾರ ಸಿಕ್ಕರೆ ದೇಗುಲ ನವರೂಪ ಪಡೆದು ಮುಂದೆ ಇದೊಂದು ಯಾತ್ರಾಸ್ಥಳ ಆಗುವುದರಲ್ಲೂ ಸಂದೇಹ ಬೇಡ. ಇಂಥ ಪುಣ್ಯ ಕ್ಷೇತ್ರವನ್ನು ನೀವೂ ಕೂಡಾ ಒಮ್ಮೆ ಭೇಟಿ ನೀಡಿ ಶ್ರೀ ಮಹಾಲಿಂಗೇಶ್ವರನ ಸಮೇತ ಶ್ರೀ ಕಾಳಿಂಗ ಸುಬ್ರಹ್ಮಣ್ಯನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಿ.



ವಿಳಾಸ :-

          ಶ್ರೀ ಮಹಾಲಿಂಗೇಶ್ವರ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನ,

          ಕಾಳಾವರ, ಅಂಚೆ : ಸಳ್ವಾಡಿ, ಕುಂದಾಪುರ ತಾಲೂಕು.

          ಉಡುಪಿ ಜಿಲ್ಲೆ.



ದಾರಿಯ ವಿವರ : ತಾಲೂಕು ಕೇಂದ್ರ ಕುಂದಾಪುರದಿಂದ ಕೋಟೇಶ್ವರವನ್ನು ತಲುಪಿ, ಅಲ್ಲಿಂದ ಹಾಲಾಡಿ ಮಾರ್ಗವಾಗಿ 4ಕಿ.ಮೀ. ಕ್ರಮಿಸಿದರೆ ಶ್ರೀ ಕ್ಷೇತ್ರವನ್ನು ತಲುಪಬಹುದು. ದೇಗುಲದ ಮುಂಭಾಗದ ತನಕ ರಸ್ತೆಯಿದ್ದು ಎಲ್ಲಾ ರೀತಿಯ ವಾಹನಗಳು ದೇಗುಲವನ್ನು ತಲುಪಬಹುದು.

Shree Mahadevi Kunthi AmmanavaraTemple, Tallur, Kundapura Tq,
ಶ್ರೀ ಮಹಾದೇವಿ ಕುಂತಿ ಅಮ್ಮನವರ ದೇವಸ್ಥಾನ, ತಲ್ಲೂರು, ಕುಂದಾಪುರ ತಾಲೂಕು



        ಕುಂದಾಪುರ ತಾಲೂಕಿನ ಹಲವಾರು ಶಕ್ತಿ ದೇವತೆಯ ಕ್ಷೇತ್ರಗಳ ಸಾಲಿನಲ್ಲಿ ಕುಂದಾಪುರದ ತಲ್ಲೂರು ಸಮೀಪದ ಶ್ರೀ ಮಹಾದೇವಿ ಕುಂತಿಯಮ್ಮನವರ ದೇವಸ್ಥಾನವು(Talluru Shree Mahadevi Kunthiyamma Temple) ಬಹಳ ಮಹತ್ವವನ್ನು ಹೊಂದಿರುವ ಕಾರಣೀಕ ಕ್ಷೇತ್ರವೆನ್ನಿಸುತ್ತದೆ. ಏಕೆಂದರೆ ಶಕ್ತಿದೇವತೆ ಮೂರು ರೂಪದಲ್ಲಿ ಜಗದಗಲ ವ್ಯಾಪಿತವಾಗಿದ್ದಾಳೆ. ದೇವಿ ಭಾಗವತದ(ದೇವಿ ಪುರಾಣ) ಪ್ರಕಾರ ತ್ರಿಶಕ್ತಿ ಸ್ವರೂಪಿಣಿ ಮೂಲ ರೂಪದಲ್ಲಿ ಪಾರ್ವತಿ ದೇವಿ ಪರಾಶಕ್ತಿಯಾದರೂ ತನ್ನದೇ ರಾಜಸ ರೂಪವಾದ ಮಹಾಲಕ್ಷ್ಮೀಯಾಗಿಯೂ, ಸಾತ್ವಿಕ ಸ್ವರೂಪವಾದ ಮಹಾಸರಸ್ವತೀಯಾಗಿಯೂ ಪ್ರಕಟವಾಗಿ ಹಲವಾರು ಕಡೆ, ಕೋಟ್ಯಾನುಕೋಟಿ ನಾಮದಿಂದ ಪೂಜಿಸಲ್ಪಡುತ್ತಾಳೆ. ಹೀಗೆ ಆದಿಮಾಯೆ ಸ್ವರೂಪಿಯಾದ ಮಹಾದೇವಿಯು ತಲ್ಲೂರು ಶ್ರೀ ಮಹಾದೇವಿ ಕುಂತಿಯಮ್ಮ ದೇವಸ್ಥಾನದಲ್ಲಿ ತನ್ನ ತಾಮಸ(ಕಾಳಿ), ರಾಜಸ(ಲಕ್ಷ್ಮೀ), ಸಾತ್ವಿಕ(ಸರಸ್ವತಿ) ಈ ಮೂರು ರೂಪಗಳಿಂದ ಪೂಜೆ ಪಡೆಯುತ್ತಿರುವುದು ವಿಶೇಷ. ಇಲ್ಲಿ ಮೂಲ ಸಾನ್ನಿಧ್ಯ ಹುತ್ತದಿಂದ ಆವೃತವಾಗಿದ್ದು ಅದರ ಮುಂದೆ ಅಮ್ಮನವರ ಮೂರು ಬಿಂಬಗಳನ್ನು ಪ್ರತಿಷ್ಠಾಪಿಸಲಾಗಿದೆ. ಕ್ರಮವಾಗಿ ಕಾಳಿ-ಲಕ್ಷ್ಮೀ-ಸರಸ್ವತೀ ದೇವಿಯರ ಬಿಂಬವು ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತದೆ. 
         ಹಿಂದೆ ಕಾಷ್ಠದ ಬಿಂಬವಿದ್ದು ಕಾಲಕ್ರಮೇಣ ಶಿಲೆಯ ಬಿಂಬವನ್ನು ಪ್ರತಿಷ್ಠಾಪಿಸಿದ್ದಿರಬಹುದು. ಇಲ್ಲಿನ ಸ್ಥಳ ಪುರಾಣ ಪೌರಾಣಿಕ ಹಿನ್ನಲೆ ದೊರೆಯದೆ ಹೋದರೂ ಕೂಡಾ ಜನಜನಿತವಾದ ಕೆಲವೊಂದು ಹಿನ್ನಲೆಯಂತೆ ಇಲ್ಲಿ ದೇವಿ ನೆಲೆಸಿರುವ ಸ್ಥಳದಲ್ಲಿ ಗರ್ಭಗುಡಿಯಲ್ಲಿರುವ ದೊಡ್ಡದಾದ 'ಹುತ್ತ' ಇದ್ದು, ಕುಂದಾಪುರ ಆಡುನುಡಿಯಲ್ಲಿ 'ಹುಂತ' ಎಂಬುದಾಗಿಯೂ, ಮುಂದೆ ಹುಂತದಲ್ಲಿ ಕುಂತ ಅಮ್ಮ ಎಂಬ ಅನ್ವರ್ಥವನ್ನು ಪಡೆದು ಕಾಲಕ್ರಮೇಣ ಕುಂತ ಎಂಬುದು – ಕುಂತಿ(Kunthi) ಆಗಿರಬಹುದು ಎಂಬುದು ಪ್ರಾಜ್ಞರ ಸಹಮತ. ಅಲ್ಲದೇ ಮಾಂಡವ್ಯ ಋಷಿಯ ತಪಸ್ಸಿಗೆ ಮೆಚ್ಚಿದ ಶಿವಪಾರ್ವತಿಯರ ಅನುಗ್ರಹದಂತೆ ಅಮ್ಮನವರು ಇಲ್ಲಿ ತ್ರಿಶಕ್ತಿ ಸ್ವರೂಪದಲ್ಲಿ ನೆಲೆಸಿದಳು ಎಂಬುದು ಪ್ರತೀತಿ.
ಹೀಗೆ ವಿಶಿಷ್ಟ ಆಚರಣೆಯನ್ನು ಹೊಂದಿರುವ ಶ್ರೀ ಮಹಾದೇವಿ ಕುಂತಿಯಮ್ಮನ ದೇವಸ್ಥಾನವನ್ನು ಹಲವರು ಮಹಾಭಾರತದ 'ಕುಂತಿ' ಎಂಬುದಾಗಿ ಭಾವಿಸಿದ್ದಾರೆ. ಆದರೆ ಇದರ ಹಿಂದಿನ ಹಿನ್ನಲೆ ಬೇರೆಯೇ ಆಗಿದೆ ಎಂಬುದು ಕ್ಷೇತ್ರದ ಹಿನ್ನಲೆಯನ್ನು ಪರಿಶೀಲಿಸಿದಾಗ ತಿಳಿದುಬರುತ್ತದೆ. ಅಮ್ಮನವರ ಕಾರಣೀಕ ಅಪಾರ. ಇಲ್ಲಿ ಅಮ್ಮನವರಿಗೆ ಹಲವಾರು ವಿಶೇಷ ಸೇವೆಗಳು ನಡೆಯುತ್ತದೆ. ವಿಶೇಷ ದಿವಸಗಳಲ್ಲಿ ಅಂದರೆ ಸಂಕ್ರಮಣ, ನವರಾತ್ರಿ, ಮಕರ ಸಂಕ್ರಾಂತಿ ಇನ್ನಿತರ ಸಮಯದಲ್ಲಿ ವಿಶೇಷ ಪೂಜಾದಿಗಳು ನಡೆಯುತ್ತದೆ. ದೇವಿಗೆ ಕ್ಷೀರ ಪಾಯಸ ಅತೀ ಪ್ರೀಯವಂತೆ. ಜೀವನದಲ್ಲಿನ ಹಲವಾರು ಸಂಕಷ್ಟಗಳಿಗೆ ಅಮ್ಮನವರು ಪರಿಹಾರ ಕೊಡುತ್ತಾರಂತೆ. ವಿದ್ಯೆ-ಉದ್ಯೋಗ- ವಿವಾಹ, ಸಂತಾನ ಹೀಗೆ ಹಲವಾರು ರೀತಿಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊಂಡ ಅದೇಷ್ಟೋ ಭಕ್ತರೆ ಸಾಕ್ಷಿ. ಅಮ್ಮನವರ ಮಹಿಮೆಯು ಅಪಾರವಾಗಿದ್ದು ಇಲ್ಲಿ ವಾರ್ಷಿಕ ಮಾರಿಪೂಜೆ ನಡೆಯುತ್ತದೆ. ಅಲ್ಲದೇ ವಿವಾಹಕ್ಕಾಗಿ ಪ್ರಸಾದ ನೋಡುವ ಸಂಪ್ರದಾಯವೂ ಕೂಡಾ ಇದೆ.
ಹೀಗೇ ತ್ರಿಶಕ್ತಿ ಸ್ವರೂಪಿಣಿಯಾದ ಜಗನ್ಮಾತೆ ಸರ್ವರನ್ನೂ ಹರಸಲಿ, ನೀವೂ ಕೂಡಾ ಒಮ್ಮೆ ದೇವಿ ದರುಶನ ಪಡೆದು ಅಮ್ಮನವರ ಕೃಪಾ-ಕಟಾಕ್ಷಕ್ಕೆ ಪಾತ್ರರಾಗಿ.

ವಿಳಾಸ :-
ಶ್ರೀ ಮಹಾದೇವಿ ಕುಂತಿಯಮ್ಮ ದೇವಸ್ಥಾನ,
ತಲ್ಲೂರು, ಕುಂದಾಪುರ ತಾಲೂಕು.

ದಾರಿಯ ವಿವರ : ತಾಲೂಕು ಕೇಂದ್ರ ಕುಂದಾಪುರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂದಾಪುರ-ಮುಂಬೈ ಮಾರ್ಗವಾಗಿ ಸರಿಸುಮಾರು 5ಕಿ.ಮೀ ಸಾಗಿದರೆ ತಲ್ಲೂರು ಪೇಟೆ ಸಿಗುತ್ತದೆ. ಅಲ್ಲಿಂದ ಪೂರ್ವಕ್ಕೆ ಎತ್ತರದ ರಸ್ತೆಯನ್ನು ಬಳಸಿ ಮುಂದೆ ಹೋದರೆ ಕೇವಲ 1 ರಿಂದ 2ಕಿ.ಮೀ ಅಂತರದಲ್ಲಿ ಅಮ್ಮನವರ ದೇವಸ್ಥಾನವು ರಸ್ತೆ ಪಕ್ಕದಲ್ಲಿಯೇ ನಮಗೆ ಕಾಣಸಿಗುತ್ತದೆ. ಸಂಪೂರ್ಣ ರಾಜಗೋಪುರ ಸಮೇತ ಸುಂದರವಾಗಿ ನಮ್ಮನ್ನು ಸೆಳೆಯುತ್ತದೆ.

Shree Lokanatheshwara Temple, Hattiyangadi, Kundapura Tq.
ಶ್ರೀ ಲೋಕನಾಥೇಶ್ವರ ದೇವಸ್ಥಾನ, ಹಟ್ಟಿಯಂಗಡಿ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ||


Lord Shree Lokanatheshwara, Hattiyangadi, Kundapura Tq, Udupi Dist


         ಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಲವಾರು ಕಡೆಗಳಲ್ಲಿ ಇರುವ ಶಿವ ದೇವಾಲಯಗಳ ಸಾಲಿನಲ್ಲಿ ಅತ್ಯಂತ ಪುರಾತನ ಮತ್ತು ಐತಿಹಾಸಿಕವಾದ ಹಿನ್ನಲೆಯನ್ನು ಹೊಂದಿರುವ ತಾಲೂಕು ಕೇಂದ್ರ ಕುಂದಾಪುರದಿಂದ ಸರಿಸುಮಾರು 10ಕಿ.ಮೀ ಅಂತರದಲ್ಲಿರುವ ಹಟ್ಟಿಯಂಗಡಿ ಶ್ರೀ ಲೋಕನಾಥೇಶ್ವರ ದೇವಸ್ಥಾನ (Hattiyangadi Shree Lokanatheshwara Temple) ಒಂದು.
        ಈ ದೇವಾಲಯವು ಅತ್ಯಂತ ಪುರಾತನವಾಗಿದ್ದು ಅಳುಪರ ಮತ್ತು ಶಾಂತರರ(Alupa & Shantharar) ಕಾಲದ ಆಳ್ವಿಕೆ ಇದ್ದಿರಬಹುದು ಎಂದು ಕೆಲವೊಂದು ಶಾಸನಗಳಿಂದ ನಮಗೆ ಮಾಹಿತಿ ಲಭ್ಯವಾಗುತ್ತದೆ. ಮಾತ್ರವಲ್ಲದೇ ಹಟ್ಟಿಯಂಗಡಿ ಜೈನ(Jain) ಪ್ರಾಬಲ್ಯವನ್ನು ಹೊಂದಿದ್ದ ಪುರಾತನ ನಗರಿ ಎಂಬುದು ಇತಿಹಾಸದ ಪ್ರಕಾರ ತಿಳಿದುಬರುತ್ತದೆ. ಹಿಂದೆ ಇದು 'ಪಟ್ಟಿಯ ನಗರಿ' ಎಂದಿದ್ದು, ಕಾಲಾಂತರದಲ್ಲಿ 'ಹಟ್ಟಿಯಂಗಡಿ' ಎಂದು ಬದಲಾಯಿತು. ವಾರಹಿ(Varahi) ನದಿ ದಂಡೆಯ ಮೇಲಿರುವ ಈ ದೇವಾಲಯ ಮನಸ್ಸಿಗೆ ಶಾಂತಿಯನ್ನು ನೀಡುವ ಆಧ್ಯಾತ್ಮಿಕ ತಾಣವೆಂದರೆ ತಪ್ಪಾಗಲಾರದು.


ಈ ಸ್ಥಳವು ಜೈನರ ಪ್ರಾಬಲ್ಯ ಹೊಂದಿತ್ತು ಎಂಬುದಕ್ಕೆ ಹಲವಾರು ಜೈನ ಮಂದಿರಗಳು ಇಲ್ಲಿರುವುದೆ ಸಾಕ್ಷಿ. ಅಳುಪ ರಾಜನ ಒಂದನೇ ಚಿತ್ರವಾಹನದ ರಾಣಿ ಕುಂಕುಮದೇವಿ ಈ ನಗರದಲ್ಲಿ ಒಂದು ಜೈನ ಮಂದಿರವನ್ನು(ಆನೆಸಜ್ಜೆಯ ಬಸದಿ) ಕಟ್ಟಿಸಿದಳು ಎಂದು ಇತಿಹಾಸ ಸಾರುತ್ತದೆ. ಮಾತ್ರವಲ್ಲದೆ ಹೊನ್ನಕಂಬಳಿ ಅರಸರಿಗೆ ಸೇರಿದ ಹಲವಾರು ಶಾಸನಗಳು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಕಂಡುಬರುತ್ತದೆ. ಹೀಗೆ ಇವರು ಇಲ್ಲಿನ ಸ್ವಾಮಿಗೆ ನೀಡಿದ ಧಾನ-ಧರ್ಮಗಳ ಮಾಹಿತಿ ಹೊರೆಯುತ್ತದೆ. ಈ ದೇವಸ್ಥಾನವು ಕ್ರಿ.ಶ. 8ನೇ ಶತಮಾನಕ್ಕೆ ಸೇರಿದ್ದೆಂದು ತಿಳಿದುಬರುತ್ತದೆ. ಇಲ್ಲಿನ ಗಣಪತಿ ದೇವರು ಅತ್ಯಂತ ಪ್ರಾಚೀನತೆಯನ್ನು ಹೊಂದಿದ್ದು ಸುಂದರವಾಗಿ ಕೆತ್ತಲ್ಪಟ್ಟಿದೆ. ಮಾತ್ರವಲ್ಲದೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ(Shree Durgaparameshwari) ವಿಗ್ರಹವು ಕೂಡಾ ಸುಂದರವಾಗಿದ್ದು, ವಿಜಯನಗರ ಅರಸರ ಕಾಲಕ್ಕೆ ಸೇರಿದ್ದೆಂದು ಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಈ ದೇವಾಲಯದಲ್ಲಿ 'ದದಿ ವಾಮನ' ಎಂಬ ಜೈನ ಯಕ್ಷನ ಮೂರ್ತಿಯೊಂದು ಭಿನ್ನವಾದ ಸ್ಥಿತಿಯಲ್ಲಿದೆ.
ಹೀಗೆ ಇಲ್ಲಿನ ಸಂಪ್ರದಾಯವನ್ನು ಅವಲೋಕನ ಮಾಡುತ್ತಾ ಹೋದರೆ ಕೊಲ್ಲೂರು ಮೂಕಾಂಬಿಕೆ ಮತ್ತು ಲೋಕನಾಥೇಶ್ವರ ದೇವಸ್ಥಾನಕ್ಕೆ ಸಂಬಂಧವಿರುವುದು ಕಂಡುಬರುತ್ತದೆ. ಇಲ್ಲಿನ ಜಾತ್ರೆಯ ಮರುದಿನ ಕೊಲ್ಲೂರು ಜಾತ್ರೆ ನಡೆಯುತ್ತಿತ್ತು ಮಾತ್ರವಲ್ಲದೆ ಇಲ್ಲಿನ ಪ್ರಸಾದ ಕೊಲ್ಲೂರು ಕ್ಷೇತ್ರಕ್ಕೆ ತಲುಪಿ ಮುಂದೆ ಅಲ್ಲಿನ ಜಾತ್ರೆ ನಡೆಯುತ್ತಿತ್ತಂತೆ. ಆದರೆ ಈ ಸತ್ಸಂಪ್ರದಾಯಗಳು ನಿಂತು ಹಲವಾರು ಸಂವತ್ಸಗಳು ಕಳೆದಿದೆ. 
ಇಲ್ಲಿ ಪಾಲ್ಗುಣ ಹುಣ್ಣಿಮೆಯಂದು ರಥೋತ್ಸವವು ನಡೆಯಲ್ಪಡುತ್ತದೆ. ಇಲ್ಲಿ ಹಲವಾರು ಜೈನ ಜಟ್ಟಿಗ ಗುಡಿ, ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಮಾರಲ ದೇವಿ ದೇವಸ್ಥಾನ ಹತ್ತಿರದಲ್ಲೇ ಇದೆ. ಮೂಲ ದೇವರ(ಲೋಕನಾಥೇಶ್ವರ) ಮೂರ್ತಿ ಉದ್ಭವಲಿಂಗವೆಂಬುದು ತಿಳಿದುಬರುತ್ತದೆ. ಶಿವಶಕ್ತಿ ಸಮೇತನಾಗಿ ಇರುವ ಕ್ಷೇತ್ರ ಮಾತ್ರವಲ್ಲದೆ ಇಲ್ಲಿ ವೈಷ್ಣವ ಪರಂಪರೆಯನ್ನು ಕಾಣಬಹುದು. ಶ್ರೀ ಲಕ್ಷ್ಮೀನಾರಾಯಣ(Laxmi narayana) ಗುಡಿ ಕೂಡಾ ಈ ದೇವಾಲಯದಲ್ಲಿದೆ. ಪ್ರದಕ್ಷಿಣಾ ಪಥದ ವಾಯುವ್ಯದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸನ್ನಿಧಾನವಿದೆ. ಅಮ್ಮನವರು ದೇವಳದ ಮುಂಭಾಗದಲ್ಲಿ ಉತ್ತರಾಭಿಮುಖವಾಗಿ ಪ್ರತಿಷ್ಠಾಪಿತವಾಗಿದೆ. ಹಾಗೇ ಗಣಪತಿ ದೇವರು ದಕ್ಷಿಣದಲ್ಲಿ ಉತ್ತರಾಭಿಮುಖವಾಗಿದೆ. ಹೀಗೆ ಶ್ರೀ ದೇವಳ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕಾಣಬೇಕಾಗಿದ್ದು, ಭಕ್ತರ ಮತ್ತು ಆಸ್ತಿಕರ ಸಹಕಾರ ತುಂಭಾ ಅವಶ್ಯಕ.

          ಶ್ರೀ ಲೋಕನಾಥೇಶ್ವರ ದುರ್ಗಾಪರಮೇಶ್ವರೀ ಸಮೇತ ಎಲ್ಲಾ ಶಕ್ತಿಗಳು ನಿಮ್ಮೆಲ್ಲರನ್ನು ಅನುಗ್ರಹಿಸಲಿ. ಶ್ರೀ ಶಿವಶಕ್ತಿ ಸಮೇತ ಶಿವನ ಅನುಗ್ರಹ ನಿಮ್ಮದಾಗಲಿ.


ವಿಳಾಸ :-

          ಶ್ರೀ ಲೋಕನಾಥೇಶ್ವರ ದೇವಸ್ಥಾನ

          ಹಟ್ಟಿಯಂಗಡಿ, ಕುಂದಾಪುರ ತಾಲೂಕು,

          ಉಡುಪಿ ಜಿಲ್ಲೆ.
ದಾರಿಯ ವಿವರ : ತಾಲೂಕು ಕೇಂದ್ರ ಕುಂದಾಪುರದಿಂದ ಉತ್ತರಕ್ಕೆ ತಲ್ಲೂರು ಮುಖಾಂತ ಶ್ರೀ ಲೋಕನಾಥೇಶ್ವರ ದೇವಸ್ಥಾನವನ್ನು ತಲುಪಬಹುದು. ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಮುಖಮಂಟಪದ ಒಳಗಿನಿಂದ ಸಾಗಿದರೆ ಗಣಪತಿಯ ದೇವಸ್ಥಾನ ಮುಂಭಾಗದಲ್ಲೇ ಶ್ರೀ ಕ್ಷೇತ್ರ ನಮಗೆ ಕಾಣಸಿಗುತ್ತದೆ.

ಚಿತ್ರಕೃಪೆ & ಲೇಖನ ಕೃಪೆ : http://lokanatheshwartemple.com