Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Shree Balmuri Galaveshwara Temple, Japthi, Kundapura Tq.
ಶ್ರೀ ಬಲ್ಮೂರಿ ಗಾಲವೇಶ್ವರ ದೇವಸ್ಥಾನ, ಜಪ್ತಿ, ಕುಂದಾಪುರ ತಾ||


Shree Galaveshwara Udhbava Moorthi, Japthi


ಕುಂದಾಪುರ ತಾಲೂಕಿನ ಪ್ರಕೃತಿ ಮನೋಹರ ವಾರಾಹಿ ನದಿಯ ಜಲರಾಶಿಯ ತಟದಲ್ಲಿರುವ ಜಪ್ತಿ ಶ್ರೀ ಬಲ್ಮೂರಿ ಗಾಲವೇಶ್ವರ ದೇವಸ್ಥಾನವು(Japthi Shree Balamuri Galaveshwara Temple) ಪೌರಾಣಿಕ ಹಿನ್ನಲೆಯನ್ನು ಹೊಂದಿರುವ ಒಂದು ಅಪೂರ್ವ ದೇವಾಲಯವಾಗಿದೆ. ಈ ದೇವಾಲಯದ ಇತಿಹಾಸದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದೇ ಹೋದರೂ ಇಲ್ಲಿನ ಅರ್ಚಕರ ಪ್ರಕಾರ ಈ ದೇವಸ್ಥಾನವು ಸರಿಸುಮಾರು 5 ಶತಮಾನಗಳಷ್ಟು ಹಳೆಯದೆಂದು ಹೇಳುತ್ತಾರೆ. ಶ್ರೀ ಗಾಲವೇಶ್ವರ ದೇವಸ್ಥಾನವು ವಾರಾಹಿ(Varahi) ನದಿ ತೀರದ ಸುಂದರ ಪೃಕೃತಿಯ ನಡುವೆ ನಿರ್ಮಾಣಗೊಂಡಿದ್ದು ಈ ದೇವಸ್ಥಾನವು ಬಹಳ ಗಮ್ಯತೆಯನ್ನು ತನ್ನಲ್ಲಿ ಅಡಗಿಸಿಕೊಂಡಿದೆ.
ಈ ದೇವಸ್ಥಾನವು ಭವ್ಯ ಪುರಾಣದ ಹಿನ್ನಲೆಯನ್ನು ಒಳಗೊಂಡಿದ್ದು ಶ್ರೀ ಗಾಲವ ಮುನಿಯೋರ್ವರಿಂದ ನಿರ್ಮಾಣವಾಗಿದ್ದು ಎಂದು ಕ್ಷೇತ್ರ ಪುರಾಣ ಸಾರುತ್ತದೆ. ಈ ಕಾರಣದಿಂದಲೇ ಇಲ್ಲಿನ ಮೂಲಶಕ್ತಿಯಾದ ಶಿವನು ಶ್ರೀ ಗಾಲವೇಶ್ವರ ಎಂದು ನೆಲೆಸಿದ್ದು ಎಂದು ಪುರಾಣದ ತಿರುಳು. ಇಲ್ಲಿ ಶ್ರೀ ಗಾಲವೇಶ್ವರ ಸ್ವಾಮಿ ಮೂಲ ದೇವರಾಗಿದ್ದು, ಶಿವನ ವಾಹನವಾದ ಶ್ರೀ ನಂದಿಕೇಶ್ವರನು ಪರಿವಾರದ ಪ್ರಮುಖ ಗಣವಾಗಿ ನೆಲೆಸಿದ್ದಾನೆ. ಅಲ್ಲದೆ ಇವನೊಂದಿಗೆ ಅಮ್ಮನವರು, ಕೋಟದ ಹಾಯ್ಗುಳಿ, ಕಿಣಿಯರ ಹಾಯ್ಗುಳಿ, ರಕ್ತ ಹಾಯ್ಗುಳಿ, ಬೊಬ್ಬರ್ಯ ಪರಿವಾರವಾಗಿ ನೆಲೆಸಿದ್ದಾರೆ. ದೇವಸ್ಥಾನದ ಮುಂಬಾಗದಲ್ಲಿರುವ ಅಶ್ವಥ ವೃಕ್ಷದಲ್ಲಿ 101 ಗಣಗಳು ನೆಲೆಸಿವೆ ಎಂಬುದು ಇಲ್ಲಿನವರ ನಂಬಿಕೆಯಾಗಿದೆ.
ಈ ದೇವಸ್ಥಾನವು ಪೂರ್ವಕ್ಕೆ ಮುಖವಾಗಿದ್ದು ಮುಂದೆ ವಾರಾಹಿಯ ಝಳು-ಝಳು ನಿನಾಧ, ಸುತ್ತುಲೂ ಪ್ರಕೃತಿಯ ಸುಂದರ ಹಸಿರು ಹೂರಣ. ಶಾಂತ ಪರಿಸರದಲ್ಲಿ ಎಂಥವರೂ ಒಂದು ಬಾರಿ ಮಂತ್ರಮುಗ್ಧರಾಗಿ ಏಕಾಗ್ರತೆಯ ಉತ್ತುಂಗಕ್ಕೆ ಹೋಗುವಂತ ವಾತಾವರಣ. ಇಲ್ಲಿನ ನಂದಿಕೇಶ್ವರನು ದೇವಸ್ಥಾನ ಮುಂದೆ ಇರುವ ವಾರಾಹಿಯ ಜಲರಾಶಿಯಿಂದ ಮೇಲೇರಿ ಬಂದವನೆಂದು ಪ್ರತೀತಿ. ಅಲ್ಲದೇ ನಂದಿಕೇಶ್ವರನು ನೀರಿನಿಂದ ಮೇಲೆದ್ದು ಬರುವಾಗ ತನ್ನ ಪಾದವನ್ನು ಅಲ್ಲೇ ಪಕ್ಕದ ಬಂಡೆಯ ಮೇಲೆ ಇರಿಸಿದ ಕುರುಹಾಗಿ ಈಗಲೂ ಅಲ್ಲಿ ನಂದಿಯ ಪಾದದ ಅಚ್ಚನ್ನು ಕಾಣಬಹುದು. ಇಲ್ಲಿನ ನಂದಿ ನೀರಿನಿಂದ ಮೇಲೆದ್ದು ಬಂದು ಕಾರಣದಿಂದ 'ಜಲ ನಂದಿ' ಎಂದೇ ಪ್ರಖ್ಯಾತವಾಗಿದ್ದಾನೆ. ಶಿವನ ಬಿಂಬವು ದಿನದಿಂದ ದಿನಕ್ಕೆ ವೃದ್ಧಿಯಾಗುತ್ತದೆ ಎಂದು ಮುಖ್ಯ ಅರ್ಚಕರಾದ ಶ್ರೀ ಶಿವರಾಮ ಮಧ್ಯಸ್ಥರು ಹೇಳುತ್ತಾರೆ.

1. Shree Kotada Haiguli | 2. Shree Nandikeshwara | 3. Shee Shakthi Haiguli(gudi)
ಸ್ಥಳ ಪುರಾಣ : ಅನಾದಿಯಲ್ಲಿ ಗಾಲವನೆಂಬ ಋಷಿಮುನಿಯು ಇಂದಿನ ಈ ಈ ಸ್ಥಳವನ್ನು ತಮ್ಮ ಆಶ್ರಮವನ್ನಾಗಿ ಮಾಡಿಕೊಂಡಿದ್ದರು. ಗಾಲವ ಮಹರ್ಷಿಯು ಮಹಾನ್ ಶಿವ ಭಕ್ತ. ಹೀಗೆ ಮಹಾನ್ ಶಿವಭಕ್ತನಾದ ಗಾಲವ ಮಹರ್ಷಿಯು ಉತ್ತರಕ್ಷೇತ್ರದಲ್ಲಿ ಬ್ರಹ್ಮನ ಕುರಿತು ಶತಸಹಸ್ರ ವರ್ಷ ತಪಸ್ಸು ಮಾಡಿ ಬ್ರಹ್ಮ ದೇವನ ಕೈಯ್ಯಲ್ಲಿರುವ ಬಲಮುರಿ ಶಂಕವನ್ನು ವರವಾಗಿ ಪಡೆಯುತ್ತಾರೆ. ಹೀಗೆ ತಪಸ್ಸಿನಿಂದ ಪಡೆದ ಬಲಮುರಿ ಶಂಖದೊಂದಿಗೆ ತಮ್ಮ ಆಶ್ರಮಕ್ಕೆ ಪುನಃ ಮರಳುತ್ತಾರೆ. ಹೀಗೆ ಮರಳಿ ಬಂದ ಗಾಲವ ಮಹರ್ಷಿಯು ದೇಹಬಾದೆಯ ಸಲುವಾಗಿ ಶಂಖ ಮತ್ತು ಕಮಂಡಲವನ್ನು ವಾರಾಹಿ ನದಿಯ ದಡದ ಮೇಲೆ ಇಟ್ಟು ತಮ್ಮ ನಿತ್ಯ ಕರ್ಮದಲ್ಲಿ ತೊಡಗುತ್ತಾರೆ.
          ಈ ರೀತಿಯಾಗಿ ಶಿವಪಾರ್ವತಿ ನಂದಿಯನ್ನೇರಿ ಆಕಾಶ ಮಾರ್ಗವಾಗಿ ಸಂಚಾರ ಬರುವಾಗ ಶಿವನು ಶಕ್ತಿ ಮಾತೆ ಪಾರ್ವತಿಯಲ್ಲಿ ಇಂತೆಂದರು "ಎಲೈ ಪಾರ್ವತಿಯೇ ಇಲ್ಲಿ ನೋಡು. ಕೆಳಗೆ ಕಾಣುತ್ತಿರುವ ಸ್ಥಳವೇ ಪುಣ್ಯವಾದ ಗಾಲವ ಋಷಿಯ ಆಶ್ರಮ. ಗಾಲವನು ನನ್ನ ಪರಮ ಭಕ್ತ, ತನ್ನ ಪೂಜೆಯಲ್ಲಿ ಸದಾ ನನ್ನನ್ನು ನೋಡಲು ಭಯಸುತ್ತಾನೆ. ಈ ಕಾರಣದಿಂದ ಬ್ರಹ್ಮ ದೇವನ ಕೈಯ್ಯಲ್ಲಿರುವ ಬಲಮುರಿ ಶಂಖವನ್ನು ತಪಸ್ಸಿನಿಂದ ಪಡೆದು ತಂದಿರುತ್ತಾನೆ. ಆದರೆ ಈ ಶಂಖ ಬ್ರಹ್ಮನ ಕೈಯ್ಯಲ್ಲಿ ಇರಬೇಕೆ ವಿನಃ, ಮತ್ಯಾರ ಕೈಯ್ಯಲ್ಲು ಇರಬಾರದು ಎಂದು ನುಡಿಯುತ್ತಾನೆ." ಹೀಗೆಂದ ಶಿವನು ಪಾರ್ವತೀ ಸಮೇತ ನಂದಿರೂಢನಾಗಿ ಧರೆಗಳಿದು ಗಾಲವನು ನದಿಯ ದಂಡೆಯ ಮೇಲೆ ಇರಿಸಿದ ಬಲಮುರಿ ಶಂಖವನ್ನು ತನ್ನ ವಶಕ್ಕೆ ತೆಗೆದುಕೊಂಡು ಅದೃಶ್ಯರೂಪದಲ್ಲಿ ಅಲ್ಲಿಯೇ ನಿಲ್ಲುತ್ತಾನೆ.
1.Nandi Paada | 2. Nandikeshwara Temple | 3. Shree Ammanavaru
          ಹೀಗೆ ನಿತ್ಯಕರ್ಮ ಮುಗಿಸಿ ನದಿಯಿಂದ ಮೇಲೆ ಬಂದ ಗಾಲವ ಮುನಿಯು ತಾನು ಇಟ್ಟ ಬಲಮುರಿ ಶಂಖ ಮತ್ತು ಕಮಂಡಲವನ್ನು ಕಾಣದೇ ದಿಗ್ಭ್ರಾಂತನಾಗುತ್ತಾನೆ. ಸುತ್ತಮುತ್ತಲೂ ಎಲ್ಲಿ ಹುಡುಕಿದರೂ ಎಲ್ಲೂ ಶಂಖ ಕಾಣದೆ ಹೋಗುತ್ತದೆ. ಗಾಲವನು ತನ್ನ ದಿವ್ಯದೃಷ್ಠಿಯಲ್ಲಿ ನೋಡಿದರು ಸರ್ವಶಕ್ತನಾದ ಶಿವನ ಮಾಯೇಯಿಂದ ಏನನ್ನೂ ತಿಳಿಯದವನಾಗುತ್ತಾನೆ. ಹೀಗೆ ಮುಂದೆ ಇರುವ ವಾರಾಹಿ ನದಿಯಲ್ಲಿ ಬಿದ್ದಿರಬೇಕೆಂದು ಗ್ರಹಿಸಿ ನದಿಯನ್ನು ಎರಡೂ ಕಡೆಯಿಂದ ಸ್ತಂಭನ ಮಾಡಿ ಶೋಧಿಸುತ್ತಾನೆ. ಆದರೂ ಶಂಖವು ದೊರೆಯದಾದಾಗ ಗಾಲವನು ರೋಷವೇಷನಾಗಿ ಶಿವನೇ ನಿನ್ನನ್ನು ಸದಾ ಸೇವಿಸಲೋಸುಗ ಬ್ರಹ್ಮದೇವರನ್ನು ಮೆಚ್ಚಿಸಿ ಪಡೆದ ಶಂಖ ಕಾಣದೆ ವಿಧಿ ನನ್ನನ್ನು ವಂಚಿಸಿತು. ನಿನ್ನನ್ನು ಕಾಣದೇ, ನಿನ್ನಲ್ಲಿ ಐಕ್ಯವಾಗದ ಈ ಆತ್ಮಕೆ ಬೆಲೆ ಏನು? ಎಂದು ನುಡಿದು ನದಿಯ ಮಧ್ಯೆ 'ಅಗ್ನಿಕುಂಡ' ವನ್ನು ನಿರ್ಮಿಸಿ ಮೂರು ಪ್ರದಕ್ಷಿಣೆ ಬಂದು ಕುಂಡಕ್ಕೆ ಹಾರುವ ವೇಳೆಯಲ್ಲಿ ಶಿವನು ಪಾರ್ವತಿಯೊಡನೆ ಪ್ರತ್ಯಕ್ಷನಾಗಿ 'ತಾಳು ಗಾಲವ, ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ನೀನು ಪಡೆದ ಬಲಮುರಿ ಶಂಖವು ನನ್ನ ವಶದಲ್ಲಿರುವುದು. ನಿನಗೆ ಬೇಕಾದ ವರವನ್ನು ಕೇಳು ಎಂದು ಶಿವನು ಹೇಳಿದಾಗ, ಗಾಲವನು ಪರಮೇಶ್ವರ ನಿನ್ನಲ್ಲಿ ನನ್ನ ಆತ್ಮವನ್ನು ಐಕ್ಯಗೊಳಿಸಿಕೊಳ್ಳುವ ಉದ್ದೇಶದಿಂದಲೇ ಬ್ರಹ್ಮನಿಂದ ಶಂಖವನ್ನು ಪಡೆದೆನೆ ವಿನಃ ಬೇರೇನು ಉದ್ದೇಶದಿಂದಲ್ಲ, ನನ್ನ ಆತ್ಮವನ್ನು ನಿನ್ನಲ್ಲಿ ಐಕ್ಯಗೊಳಿಸಿಕೊಂಡು ಇಲ್ಲಿಯೇ ನೆಲೆಸಿ, ಭುವಿಯು ಪ್ರಳಯವಾಗುವಷ್ಟು ಕಾಲ ನೀನು ಇಲ್ಲಿ ನೆಲೆಸಿ ಈ ಕ್ಷೇತ್ರವು ಕಾಮ್ಯಾರ್ಥಮುಕ್ತಿ ಕ್ಷೇತ್ರವಾಗಿ ಬೆಳಗಲಿ ಎಂದು ಹೇಳುತ್ತಾನೆ.'
Shree Galaveshwara Temple View(Varahi river)
          ಹೀಗೆ ಶಿವನು ಗಾಲವನ ಭಕ್ತಿಗೆ ಮೆಚ್ಚಿ ಗೌರಿ ಸಮೇತನಾಗಿ ವಾರಾಹಿ ನದಿಯ ದಡದಲ್ಲಿರುವ ಒಂದು ಪವಿತ್ರ ಶಿಲೆಯಲ್ಲಿ ಉದ್ಘವಿಸುತ್ತಾನೆ. ಗಾಲವನ ಆತ್ಮವನ್ನು ತನ್ನಲ್ಲಿ ಐಕ್ಯವಾಗಿಸಿಕೊಂಡು, ಗಾಲವನು ಪಡೆದ ಬಲಮುರಿ ಶಂಖದ ಪ್ರತೀಕವಾಗಿ ಶಿವನು ಶಿಲೆಯ ಮೇಲೆ 'ಬಲಮುರಿ ಶಂಖದ ಆಕೃತಿಯಲ್ಲಿ, ಹಾಗೂ ಗಾಲವನ ಆತ್ಮವು ಐಕ್ಯವಾದ ಕಾರಣ ಶಂಖದ ಒಳಗೆ ಋಷಿಯ ಆಕೃತಿಯು ಮೂಡಿ ಶಿವನು ಗೌರಿ ಸಮೇತನಾಗಿ, ಶ್ರೀ ಗಾಲವೇಶ್ವರ ಎಂಬ ನಾಮದಿಂದ ನೆಲೆಯಾಗುತ್ತಾನೆ'. ಹೀಗೆ ಪರಮೇಶ್ವರನು ಕೃಷ್ಣಾಂಗಾರಕ ಚತುರ್ಧಶಿಯ ದಿನ ನೆಲೆಸಿದ ಕಾರಣ, ಪ್ರತೀ ಸಂವತ್ಸರದ ಇದೇ ದಿವಸದಂದು ಈ ಪುಣ್ಯ ನದಿಯಲ್ಲಿ ಯಾರು ಸ್ನಾನ ಮಾಡುವರೋ ಅವರ ಕಿವಿಯಲ್ಲಿ (ಅಗ್ನಿಯಲ್ಲಿ ತಿಲ[ಎಳ್ಳು] ಹೊಟ್ಟಿದಂತೆ) ಇಹದಲ್ಲಿ ಮಾಡಿದ ಎಲ್ಲಾ ಪಾಪವೂ ನಾಶವಾಗುವುದು. ಹಾಗೂ ಆ ವ್ಯಕ್ತಿಯು ಒಂದು ವರ್ಷದಲ್ಲಿ ಮರಣವಾದರೆ ಯಮನ ಶಿಕ್ಷೆಯು ಇಲ್ಲವಾಗುವುದು ಎಂದು ವರವನ್ನು ನೀಡುತ್ತಾನೆ. ಹೀಗೆ ಪರಮೇಶ್ವರನು ಜಪ್ತಿಯಲ್ಲಿ ಗಾಲವನಿಗೊಲಿದು ಶ್ರೀ ಗಾಲವೇಶ್ವರನಾಗಿ ಶಿವೆಯೊಡನೆ ಶಂಖರೂಪದಲ್ಲಿ ನೆಲೆಸಿ ಭಕ್ತನ್ನು ಪೊರೆದು ಕಾಯುವ ಈಶನಾಗಿದ್ದಾನೆ.

ಉತ್ಸವವಾದಿಗಳು : ಜಪ್ತಿ ಶ್ರೀ ಗಾಲವೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ಮಾರ್ಷ್ 2 ರಂದು ಬಹು ವಿಜೃಂಭಣೆಯಿಂದ ವಾರ್ಷಿಕ ಮಹೋತ್ಸವಗಳು ನಡೆಯುತ್ತದೆ. ಮಹಾಶಿವರಾತ್ರಿಯ ದಿವಸ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ವಾರ್ಷಿಕ ಪೂಜೆಯ ದಿನ ಶ್ರೀ ದೇವರಿಗೆ ರುದ್ರಹೋಮ ನಡೆದರೆ, ಶ್ರೀ ನಂದಿಕೇಶ್ವರ ಪರಿವಾರಕ್ಕೆ ನವಕಪ್ರದಾನ, ಢಕ್ಕೆ ಬಲಿ, ಗೆಂಡಮಹೋತ್ಸವ ನಡೆಯುತ್ತದೆ. ಅಂದು ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆಯು ಭಕ್ತಾದಿಗಳಿಗೆ ವಿನಿಯೋಗಿಸಲ್ಪಡುತ್ತದೆ. ಅದೇ ದಿನ ರಾತ್ರಿ ಕಮಲಶಿಲೆ ಮೇಳದವರಿಂದ ಯಕ್ಷಗಾನ ಸೇವೆಯು ನಡೆಯಲ್ಪಡುತ್ತದೆ.

ಜೀರ್ಣೋದ್ದಾರ : ಶ್ರೀ ಕ್ಷೇತ್ರವು ಒಂದು ಪುಣ್ಯ ಸಾನ್ನಿಧ್ಯವಾಗಿದ್ದು, ಹಲವಾರು ಜೀರ್ಣೋದ್ದಾರ ಕಾರ್ಯಗಳು ನಡೆಯಬೇಕಾಗಿದೆ. ಇಲ್ಲಿನ ನಂದಿಕೇಶ್ವರ ದೇವಸ್ಥಾನವು ಈಗಾಗಲೇ ಸಂಪೂರ್ಣ ಜೀರ್ಣೋದ್ಧಾರಗೊಂಡಿದ್ದು, ಗಾಲವೇಶ್ವರನ ಗುಡಿಯು ಅಜೀರ್ಣವಾಗಿದ್ದು ಜೀರ್ಣೋದ್ದಾರದ ಕಾರ್ಯವನ್ನು ಪ್ರಾರಂಭಿಸಲು ನೀಲನಕಾಶೆಯನ್ನು ಮಾಡುವ ಸದುದ್ದೇಶಕ್ಕೆ ಕೈ ಹಾಕಲು ಇಲ್ಲಿನ ಆಡಳಿತ ಮಂಡಳಿಯವರು ಚಿಂತನೆ ನಡೆಸಿದ್ದಾರೆ. ಇವರೊಂದಿಗೆ ನಂಬಿದ ಭಕ್ತಾಧಿಗಳು ಹಾಗೂ ಸಹೃದಯಿ ಭಕ್ತರ ನೆರವಿನಿಂದ ಜೀರ್ಣೋದ್ದಾರಗೊಂಡರೆ ಒಂದು ಪುಣ್ಯ ಕ್ಷೇತ್ರವಾಗುವುದರೊಂದಿಗೆ ಪ್ರೇಕ್ಷಣೀಯ ಸ್ಥಳವಾಗುವುದರಲ್ಲಿಯೂ ಸಂಶಯವಿಲ್ಲ.

ವಿಳಾಸ :-
ಶ್ರೀ ಬಲಮುರಿ ಗಾಲವೇಶ್ವರ ದೇವಸ್ಥಾನ,
ಜಪ್ತಿ, ಕುಂದಾಪುರ ತಾ| ಉಡುಪಿ ಜಿ |

ದಾರಿಯ ವಿವರ : ಕುಂದಾಪುರದಿಂದ ಬಿ.ಎಚ್ ಮಾರ್ಗವಾಗಿ ಹುಣ್ಸೆಮಕ್ಕಿ ತಲುಪುವ ಮಾರ್ಗ ಮದ್ಯದಲ್ಲಿ ಜಪ್ತಿ-ಕರಿಕಲ್ ಕಟ್ಟೆಯಿಂದ ಸರಿಸುಮಾರು 2ಕಿ.ಮೀ ಸಾಗಿದರೇ ಶ್ರೀ ಗಾಲವೇಶ್ವರ ದೇವಸ್ಥಾನವನ್ನು ತಲುಪಬಹುದು. ಅಲ್ಲದೇ ಹುಣ್ಸೆಮಕ್ಕಿಯಿಂದ ಜಪ್ತಿ ತಲುಪಿಯೂ ಶ್ರೀ ಕ್ಷೇತ್ರವನ್ನು ತಲುಪಬಹುದು.


ಹೆಚ್ಚಿನ ಮಾಹಿತಿಗಾಗಿ(ಅನುವಂಶೀಕ ಆಡಳಿತ) :-
• ಶಿವರಾಮ ಮದ್ಯಸ್ಥ - 9945976675/ 08259-202208
• ರಾಮಕೃಷ್ಣ ಮದ್ಯಸ್ಥ - 9448044775
• ವಾಸುದೇವ ಮದ್ಯಸ್ಥ - 8694915708