Shree Mahalingeshwara Kalinga(Subramanya) Temple,
Kalavara ||
ಶ್ರೀ ಮಹಾಲಿಂಗೇಶ್ವರ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನ,
ಕಾಳಾವರ, ಕುಂದಾಪುರ ತಾಲೂಕು||
ಉಡುಪಿ
ಜಿಲ್ಲೆ ಕುಂದಾಪುರ ತಾಲೂಕಿನ ಪ್ರಸಿದ್ಧ ಶಿವನ ಸಮೇತ ಇರುವ ನಾಗಕ್ಷೇತ್ರ(ಸುಬ್ರಹ್ಮಣ್ಯ)ಗಳಲ್ಲಿ ತಾಲೂಕಿನ
ಪ್ರಮುಖ ನಗರವಾದ ಕೋಟೇಶ್ವರದಿಂದ(Koteshwara) ಸರಿಸುಮಾರು 4 ಕಿ.ಮೀ. ಅಂತರದಲ್ಲಿ ಇರುವ ಕ್ಷೇತ್ರವೇ
ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ(ಸುಬ್ರಹ್ಮಣ್ಯ)
ದೇವಸ್ಥಾನ( Kalavara Shree Mahalingeshwara Kalinga(Subramanya) Temple). ಕಾಳಾವರದ
ಈ ದೇವಸ್ಥಾನವು ಶಿವನಿಗಿಂತ ಹೆಚ್ಚಾಗಿ ಶಿವ ಕುಮಾರನಿಂದಲೇ ಜನಜನಿತವಾಗಿದೆ. ಕಾರಣ ಇದೊಂದು ನಾಗಕ್ಷೇತ್ರವಾಗಿ
ಶ್ರೀ ಕ್ಷೇತ್ರ ಕುಕ್ಕೆಗೆ ಸಮಾನವೆಂತಲೂ, ಅಲ್ಲಿನ ಎಲ್ಲಾ ಶಕ್ತಿ ಇಲ್ಲಿ ಐಕ್ಯವಾಗಿದೆ ಎಂಬುದು ಪ್ರಾಜ್ಞರ
ಅಭಿಪ್ರಾಯವಾಗಿದೆ.
ಈ
ಕಾರಣದಿಂದ ಇಲ್ಲಿ ಸಕಲ ನಾಗಬಾಧೆಯ ನಿವೃತ್ತಿ ಸಮೇತ ಶ್ರೀ ಮಹಾಲಿಂಗೇಶ್ವರ ಶ್ರೀ ಸುಬ್ರಹ್ಮಣ್ಯನ ಅನುಗ್ರಹವಾಗುತ್ತದೆ
ಎಂಬುದು ನಂಬಿಕೆ. ಅನಾದಿಯಿಂದಲೂ ಇಲ್ಲಿ ಒಂದು ಶಿವನ ಮಂದಿರ ಇದ್ದು ಅದರ ಪಕ್ಕದಲ್ಲೇ ಪ್ರಕೃತಿ ನಿರ್ಮಿತವಾದ
ನಾಗಾಲಯ ಇದೆ. ದೊಡ್ಡ ಮರದ ಬೀಳಿನಿಂದ ಆವೃತವಾಗಿ ಅದುವೇ ಕಾಳಿಂಗನ ಮೂಲ ಸಾನ್ನಿಧ್ಯವೆಂದು ಹೇಳಲಾಗುತ್ತದೆ. ಅದರ ಮುಂಬಾಗ ನಾಗರ ಕಲ್ಲುಗಳು ಮತ್ತು
ವಿಶಾಲವಾದ ಹುತ್ತವಿದ್ದು ಅದಕ್ಕೆ ಮಾಡನ್ನು ನಿರ್ಮಾಣ ಮಾಡಲಾಗಿದೆ. ವಿಶೇಷ ಪೂಜಾದಿಗಳು ಹುತ್ತ ಸಮೇತ
ನಾಗರ ಕಲ್ಲುಗಳಿಗೆ ನಡೆಯುತ್ತದೆ.
ಇಲ್ಲಿ
ಶ್ರೀ ಮಹಾಲಿಂಗೇಶ್ವರ ದೇವರ ಪ್ರತ್ಯೇಕ ಗುಡಿ ಇದ್ದು, ಶ್ರೀ ದೇವರ ಪಾಣೀಪೀಠದಲ್ಲಿ ಶಿವನ ಸಮೇತ ಶಕ್ತಿದೇವತೆ
ದುರ್ಗೆ ಮತ್ತು ಗಣಪತಿಯ ಸಾನ್ನಿಧ್ಯ ಇರುವುದು ಕಂಡುಬಂದಿದೆ. ಈ ಕಾರಣದಿಂದ ಶಿವನ ಸಾನ್ನಿಧ್ಯದಲ್ಲಿ
ಶಿವನ ಸಮೇತ ದುರ್ಗೆ ಮತ್ತು ಗಣಪತಿಗೂ ಪೂಜೆ ಸಲ್ಲುತ್ತದೆ. ಇಲ್ಲಿನ ಆಲಯಗಳು ಬಹು ಪುರಾತನವಾಗಿದ್ದು
ಇತ್ತಿಚೀನ ದಿನಗಳಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ದೇಗುಲವು ಹೊಸ ಹೊಳಪನ್ನು
ಪಡೆಯುತ್ತಿದೆ.
ಈ
ದೇವಾಲಯಕ್ಕೆ ಸಂಬಂಧಿಸಿದಂತೆ ಒಂದು ಕೆರೆ ಕೂಡಾ ದೇವಾಲಯದ ಬಲ ಭಾಗದ ರಸ್ತೆಯ ಪಕ್ಕದಲ್ಲಿ ಕಾಣಬಹುದು.
ಇಲ್ಲಿ ಬೇಸಿಗೆ ಹೊರತಪಡಿಸಿ ಇನ್ನುಳಿದ ಕಾಲದಲ್ಲಿ ನೀರಿನ ಸೆಲೆ ಇರುತ್ತದೆ. ಶ್ರೀ ಕ್ಷೇತ್ರದಲ್ಲಿ
ಪ್ರತಿ ವರ್ಷ ಚಂಪಾ ಷಷ್ಠಿಯಂದು ವಿಜೃಂಭಣೆಯ ಮಹೋತ್ಸವವು
ನಡೆಯುತ್ತದೆ. ಅಂದು ಮೂಲೆ-ಮೂಲೆಯಿಂದ ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಇದನ್ನು
ಹಿರಿ ಷಷ್ಠಿ ಎಂದು ಕರೆಯಲಾಗುತ್ತದೆ. ಅಂದು ಕೋಟೇಶ್ವರ
ಹಾಗೂ ಕುಂದಾಪುರ ತಾಲೂಕಿನ ಸುತ್ತಮುತ್ತಲ ಊರಿನವರು ಶ್ರೀ ದೇವಳಕ್ಕೆ ಮುಂಜಾನೆ 4.00 ಗಂಟೆಗೆ ಆಗಮಿಸಲು
ಆರಂಭಿಸುತ್ತಾರೆ. ಅಷ್ಟೊಂದು ಜನನಿಬಿಡವಾಗಿರುತ್ತದೆ. ಅಂದು ನಾಗದೇವರಿಗೆ(ಸುಬ್ರಹ್ಮಣ್ಯ) ಬೆಳ್ಳಿ
ಹರಿಕೆ ಹಾಗೂ ಅನೇಕ ಸೇವಾಧಿಗಳು ನಡೆಯುತ್ತದೆ. ಶ್ರೀ ಕ್ಷೇತ್ರದಲ್ಲಿ ಪರಿವಾರದಲ್ಲಿ ಕ್ಷೇತ್ರಪಾಲ,
ಭೂತರಾಯ ಶಕ್ತಿಗಳೂ ಇದ್ದು ಅವುಗಳಿಗೂ ಪೂಜಾಧಿಗಳು ನಡೆಯುತ್ತದೆ. ದಟ್ಟ ಕಾನನದ ಮಧ್ಯೇ ಇರುವ ಈ ದೇಗುಲ
ನೋಡಲು ಬಹು ಸಂತೋಷವನ್ನು, ಕಾನನದ ಸೊಬಗನ್ನು ನಮಗೆ ಉಣಬಡಿಸುತ್ತದೆ. ಇಲ್ಲಿ ಷಷ್ಠಿ ಮಾತ್ರವಲ್ಲದೆ
ಶಿವರಾತ್ರಿ ಸಮಯದಲ್ಲಿ ವಿಶೇಷ ಪೂಜಾದಿಗಳು ನಡೆಯುತ್ತದೆ. ಹಿರಿಷಷ್ಠಿಯಂದು ಅನ್ನದಾನ ಸೇವೆ ನಡೆಯುತ್ತದೆ.
ಶ್ರೀ ದೇವರು ಚರ್ಮವ್ಯಾದಿ, ಸಂತಾನ, ಉದ್ಯೋಗ, ಕಂಕಣ, ನೆಮ್ಮದಿ ಕರುಣಿಸುವುದರೊಂದಿಗೆ ಧರ್ಮದಿಂದ ಕೇಳಿದ
ಎಲ್ಲಾ ಬೇಡಿಕೆಯನ್ನು ಈಡೇರಿಸುತ್ತಾನೆ. ಇಲ್ಲಿ ಚಿಕ್ಕಪುಟ್ಟ ವ್ಯಾದಿಗಳಿಗೆ ಬೆಳ್ಳಿಯ ಹರಕೆಯನ್ನು
ಹಾಕುವುದು ವಾಡಿಕೆ. ಇದರಂತೆ ಹಲವಾರು ವ್ಯಾದಿಗಳು ನಿವಾರಣೆಯಾದ ನಿದರ್ಶನಗಳೂ ಕೂಡಾ ನಾವು ಕಾಣಬಹುದು.
ಈ
ಕ್ಷೇತ್ರವನ್ನು 2ನೇಯ ಸುಬ್ರಹ್ಮಣ್ಯವೆಂದೇ ಕರೆಯಲಾಗುತ್ತದೆ.
ಕುಕ್ಕೆಯಲ್ಲಿ ಮಾಡುವ ಎಲ್ಲಾ ಕಾರ್ಯಗಳು ಇಲ್ಲಿ ಕೂಡಾ ಮಾಡುವ ಅವಕಾಶವಿದ್ದು, ಸಮಾನ ಫಲವನ್ನು ನೀಡುತ್ತದೆ
ಎಂಬುದು ಪ್ರಾಜ್ಞರ ನುಡಿ. ಕುಕ್ಕೆಗೂ - ಕಾಳಾವರಕ್ಕೂ ಹಲವಾರು ಸಾಮತ್ಯೆಯನ್ನು ಕಾಣಬಹುದು. ಕುಕ್ಕೆ
ಮತ್ತು ಕಾಳಾವರದಲ್ಲಿ ಸುತ್ತಲೂ ಆವರಿಸಿದ ನೀರಿನ ಸೆಲೆ ಮಾತ್ರವಲ್ಲದೆ ಮೂಲ ಹುತ್ತಕ್ಕೆ ಸೇವೆಗಳು ನಡೆಯುತ್ತದೆ.
ಕಾಳಾವರ ಕ್ಷೇತ್ರದ ಹುತ್ತವು ಬಾವಿಯಿಂದ ಮೇಲೆದ್ದು ಬಂದಿದ್ದು ಎಂಬುದು ಐತಿಹ್ಯ. ಕಾಳಾವರ ಎಂಬುದು
ಕಾಳಿಂಗನಿಂದಲೇ ಬಂದಿರಬೇಕು ಎಂಬುದು ಬಲ್ಲವರ ಅಭಿಮತ. ಕಾಳಾ+ಆವರ ಅಂದರೆ ಕಾಳಿಂಗನಿಂದ ಆವೃತವಾದ ಎಂಬ ಅರ್ಥವನ್ನು ನೀಡುತ್ತದೆ. ಈ ಕಾರಣದಿಂದ
ಈ ಊರು ಕಾಳಿಂಗನಿಂದ ಕಾಳಾವರ ಆಗಿರಬೇಕು. ದೇವಾಲಯದ
ಬಗ್ಗೆ ಪೂರ್ಣ ಮಾಹಿತಿ ಲಭ್ಯವಿಲ್ಲದಿದ್ದರೂ, ಕೆಲವೊಂದು ಆಡುನುಡಿ ಹಾಗೂ ಹಿರಿಯರ ಅಭಿಪ್ರಾಯವನ್ನು
ಸಂಗ್ರಹಿಸಿ ಈ ಲೇಖನವನ್ನು ಸೃಜಿಸಲಾಗಿದೆ. ಕಾಳಾವರ ಷಷ್ಠಿ ಅತ್ಯಂತ ಪ್ರಸಿದ್ದವಾದ ಹಬ್ಬವೇ ಆಗಿದೆ.
ಹಿಂದೆ ಈ ದೇಗುಲಕ್ಕೆ ಹೋಗುವ ಮಾರ್ಗ ತುಂಬಾ ಕಷ್ಟದಾಯಕವಾಗಿತ್ತು, ಆದರೆ ಇತ್ತಿಚೇಗೆ ಇಲ್ಲಿನ ದಾರಿಯನ್ನು ಸುಗಮಗೊಳಿಸಿದ್ದಾರೆ. ಈ ದೇಗುಲದ ಪೂರ್ಣ ಮಾಹಿತಿಯನ್ನು
ತಿಳಿಯಲು ಹಾಗೂ ಜೀರ್ಣೋದ್ದಾರದ ದೃಷ್ಟಿಯಿಂದ ಅಷ್ಟಮಂಗಳಾಧಿ ಸ್ವರ್ಣಾರೂಢ ಪ್ರಶ್ನೆಯನ್ನು ಇಡುವ ಉದ್ದೇಶವನ್ನು
ದೇಗುಲದ ಸಮಿತಿಯವರು ಹೊಂದಿದ್ದಾರೆ.
ಈ
ದೇಗುಲವು 2013ರಿಂದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು, ಮುಂದೆ ಹಲವಾರು ಕಾರ್ಯಗಳು ಆಗಬೇಕಾಗಿದೆ.
ಇಂಥ ಪ್ರಸಿದ್ಧ ಕ್ಷೇತ್ರ ಸಂಪೂರ್ಣ ಜೀರ್ಣೋದ್ಧಾರಗೊಂಡರೆ ಖಂಡಿತವಾಗಿಯೂ ಕುಕ್ಕೆಯ ಸಮಾನವಾಗುವುದರಲ್ಲಿ
ಸಂಶಯವಿಲ್ಲ. ಸಹೃದಯಿಗಳ, ಭಕ್ತರ ಸಹಕಾರ ಸಿಕ್ಕರೆ ದೇಗುಲ ನವರೂಪ ಪಡೆದು ಮುಂದೆ ಇದೊಂದು ಯಾತ್ರಾಸ್ಥಳ
ಆಗುವುದರಲ್ಲೂ ಸಂದೇಹ ಬೇಡ. ಇಂಥ ಪುಣ್ಯ ಕ್ಷೇತ್ರವನ್ನು ನೀವೂ ಕೂಡಾ ಒಮ್ಮೆ ಭೇಟಿ ನೀಡಿ ಶ್ರೀ ಮಹಾಲಿಂಗೇಶ್ವರನ
ಸಮೇತ ಶ್ರೀ ಕಾಳಿಂಗ ಸುಬ್ರಹ್ಮಣ್ಯನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಿ.
ವಿಳಾಸ
:-
ಶ್ರೀ ಮಹಾಲಿಂಗೇಶ್ವರ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನ,
ಕಾಳಾವರ, ಅಂಚೆ : ಸಳ್ವಾಡಿ, ಕುಂದಾಪುರ ತಾಲೂಕು.
ಉಡುಪಿ ಜಿಲ್ಲೆ.
ದಾರಿಯ
ವಿವರ : ತಾಲೂಕು ಕೇಂದ್ರ ಕುಂದಾಪುರದಿಂದ ಕೋಟೇಶ್ವರವನ್ನು ತಲುಪಿ, ಅಲ್ಲಿಂದ ಹಾಲಾಡಿ ಮಾರ್ಗವಾಗಿ
4ಕಿ.ಮೀ. ಕ್ರಮಿಸಿದರೆ ಶ್ರೀ ಕ್ಷೇತ್ರವನ್ನು ತಲುಪಬಹುದು. ದೇಗುಲದ ಮುಂಭಾಗದ ತನಕ ರಸ್ತೆಯಿದ್ದು ಎಲ್ಲಾ
ರೀತಿಯ ವಾಹನಗಳು ದೇಗುಲವನ್ನು ತಲುಪಬಹುದು.