Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Sri Karanikada Kulkuda-Kallurti.

ಶ್ರೀ ಕಾರಣೀಕದ ಕಲ್ಕುಡ(ಪಾಷಾಣಮೂರ್ತಿ) ಮತ್ತು ಕಲ್ಲುರ್ಟಿ(ಸತ್ಯದೇವತೆ) ಮಹಿಮೆ
Shree Karnikada Kalkuda-Kallurti Mahime


ಕರುಣೆಯ ಹರಸುವ ಕಲ್ಕುಡ-ಕಲ್ಲುರ್ಟಿಯ ಚರಿತ್ರೆ
Sri Veera Kalkuda(Kallukuttiga)
ಶ್ರೀ ವೀರ ಕಲ್ಕುಡ(ಕಲ್ಲುಕುಟ್ಟಿಗ)
          ಕಲಿಯುಗಲ್ಲಿ ಧರ್ಮವು ಹೀನರಿಂದ ನಾಶವಾಗುತ್ತಾ, ಅಧರ್ಮವು ತಾಂಡವಾಡುತ್ತಾ, ಕೊಲೆ-ಸುಲಿಗೆ, ಮೋಸ-ವಂಚನೆ ನಡೆಯುತ್ತಾ ಇರುವುದು ಕಲಿಯುಗದ ಸೂಚನೆಯೂ ಮತ್ತು ಮಾನವನ ಅತೀ ಅವಿವೇಕದ ಪರಮಾವಧಿಯೂ ಕೂಡಾ ಆಗಿದೆ. ಅಂತೆಯೇ ಈ ಅಧರ್ಮ –ಅಸತ್ಯ-ಮೋಸ ವಂಚನೆಗಳನ್ನು ಮಟ್ಟ ಹಾಕಲು ದೇವರು ಹಲವಾರು ರೂಪಗಳನ್ನು ತಾಳಿಬಂದು ಕಂಟಕರನ್ನು ವಧಿಸಿ ಲೋಕಕಲ್ಯಾಣಗೈದಿರುವ ಹಲವಾರು ಪುರಾಣ ಪುಣ್ಯ ಕಥೆಗಳು ನಮಗೆ ಕಾಣಸಿಗುತ್ತದೆ. ಈ ರೀತಿಯಲ್ಲೆ ಲೋಕೋದ್ದಾರಕ್ಕಾಗಿ ಮತ್ತು ಧರ್ಮ-ಸತ್ಯ ಸ್ಥಾಪನೆಗಾಗಿ ಹಲವಾರು ದೈವಗಳು ಕೂಡಾ ದೇವರ ಮೂಲಕ ಹುಟ್ಟಿ ಬಂದಿದ್ದಾರೆ. ಹೀಗೆ ಸತ್ಯ-ಧರ್ಮ –ನ್ಯಾಯ – ನೀತಿಯ ಮೌಲ್ಯಗಳನ್ನು ಸ್ಥಾಪಿಸಿ ಧರ್ಮ ಸ್ಥಾಪನೆಗಾಗಿ ಭೂಮಂಡಲದಲ್ಲಿ ದೈವಿಶಕ್ತಿಯಿಂದಾಗಿ ಭೂಷಿತರಾಗಿ ಭುವಿಯ ಒಡಲಲ್ಲಿ ಜನಿಸಿ ಇಂದು ಮಹಾನ್ ಕಾರಣೀಕ ದೈವವಾಗಿ ಈ ತುಳುನಾಡ ಸೀಮೆಯುದ್ದಕ್ಕೂ ತಮ್ಮ ಕಾರಣೀಕತೆಯನ್ನೂ ತೋರಿಸುತ್ತಿರುವಂತಹ ಕಲಿಯುಗದ ಕಾರಣೀಕ ಶಕ್ತಿಯೇ “ಶ್ರೀ ವೀರ ಕಲ್ಲುಕುಟಿಕ(Kallukuttiga) ಮತ್ತು ಕಲ್ಲುರ್ಟಿ(Kallurti)” ಎಂಬ ಅಣ್ಣ-ತಂಗಿಯರು.

ಈ ಅಣ್ಣ-ತಂಗಿಯರ ಕಾರಣೀಕವನ್ನು ನಮ್ಮೀ ತುಳುವನಾಡಿನುದ್ದಕ್ಕೂ ಅರಿಯದವರಿಲ್ಲ. ಈ ಅದ್ಭುತ ಕಾರಣೀಕ ಶಕ್ತಿಗಳಾಗಿ ನಮ್ಮ ಕಾಯ್ವ “ಶ್ರೀ ಕಲ್ಕುಡ(kalkuda) ಮತ್ತು ಕಲ್ಲುರ್ಟಿ(Kallurti)” ದೈವದ ಮಹಿಮೆಯು ಅಪಾರ, ಅನನ್ಯ, ಅನಂತವಾದುದು. ಈ ಸೋದರ-ಸೋದರೀಯರು ಹೇಗೆ ದೈವಗಳಾದರು? ಹೇಗೆ ಈ ಭೂಮಂಡಲದಲ್ಲಿ ಅಷ್ಟೋಂದು ಶಕ್ತಿಯನ್ನು ಪಡೆದರು? ಹೇಗೆ ಕಾರಣೀಕವಾದರು? ಅವರ ಹುಟ್ಟು, ಹಿನ್ನಲೆ, ಚರಿತ್ರೆ ಇವೆಲ್ಲವೂ ಹೇಗೆ? ಎಂದು ಅರಸುತ್ತಾ ಸಾಗಿದಾಗ ‘ಅಂತರಲೋಕದ ಅಂತರಜಾಲ’ದಲ್ಲಿ ಈ ಬಗ್ಗೆ ಕೆದಕಿದಾಗ ಸಿಕ್ಕ ಹಲವಾರು ಮಾಹಿತಿಯನ್ನು ಕಲೆಹಾಕಿ ಬಸಿದು ಸರ್ವರಿಗೂ ಈ ಕಾರಣೀಕದ ‘ಕಲ್ಕುಡ-ಕಲ್ಲುರ್ಟಿ’ಯ ಮಹಿಮೆಯು ತಿಳಿಯಬೇಕೆಂಬ ಮನೋವಾಂಛೆಯಿಂದ ಈ ದೈವರೂಪಿ ಶಕ್ತಿಯ ಬಗ್ಗೆ ‘ನಮ್ಮ-ನಾಡು’ ಬ್ಲಾಗ್ ನಲ್ಲಿ ಪ್ರಕಟಿಸುತ್ತಾ ಇದ್ದೇನೆ.

‘ಕಲ್ಕುಡ-ಕಲ್ಲುರ್ಟಿ’ ಎಂಬ ಕಾರಣಿಕ ಅಣ್ಣ-ತಂಗಿ ಭೂಮಿಯಲ್ಲಿ ಅವತರಿಸುವ ಮುನ್ನ ದೇವಲೋಕದಲ್ಲಿ ಇದ್ದಂತ ದೇವತಾ ಮನುಷ್ಯರು. ಇವರು ದೇವಲೋಕದಲ್ಲಿ ಮಾಡಿದ ಒಂದು ಪ್ರಮಾದವೆ ಇಂದು ಈ ಭೂಲೋಕದಲ್ಲಿ ದೈವಿಶಕ್ತಿಗಳಾಗಿ ನೆಲೆಯಾಗಲು ಕಾರಣವಾಯ್ತು.
ಒಮ್ಮೆ ದೇವಲೋಕದ ದೇವತೆಗಳ ಸಭೆಯಲ್ಲಿ ದೇವಗುರು ಬ್ರಹಸ್ಪತಿಯು ಕೆಲವು ಕಾರಣಗಳಿಂದ ಸಭೆಗೆ ಗೈರು ಹಾಜರಾಗಬೇಕಾಯಿತು. ಆ ಸಮಯದಲ್ಲಿ ಈ ಇರ್ವರು(ಕಲ್ಕುಡ-ಕಲ್ಲುರ್ಟಿ) ಸೇರಿ ವಿಶ್ವಕರ್ಮರನ್ನು ಸಭೆಗೆ ಕರೆದು ಸಭೆಯನ್ನು ಅಲಂಕರಿಸಲು ತಿಳಿಸಿ ಈ ಮೂಲಕವಾಗಿ ದೇವಗುರುವಿಗೆ ಅಗೌರವ ಮತ್ತು ಅಪಮಾನವನ್ನು ಮಾಡುತ್ತಾರೆ. ಹೀಗೆ ಅಗೌರವ ತೋರಿದ ಈ ದೇವಲೋಕದ ವಾಸಿಗಳಾದ ಈ ಸೋದರ-ಸೋದರೀಯರ ರುಂಡವನ್ನು ಕಡಿದು ಭೂಮಿಗೆ ಬಿಸುಡುತ್ತಾರೆ. ಈ ಮೂಲಕ ಭೂಮಿಯಲ್ಲಿ ಮಾನವರಾಗಿ ಹುಟ್ಟಿ ಕಷ್ಟ-ನಷ್ಟವನ್ನು ಅನುಭವಿಸಿ ಎಂಬ ಶಾಪವನ್ನು ನೀಡುತ್ತಾರೆ, ಹಾಗೇ ಮುಂದೆ ಭೂಲೋಕದಲ್ಲಿ ಮಾನವರಾಗಿ ಜನಿಸುತ್ತಾರೆ.
ಅಂತೆಯೇ ಶಾಪಗ್ರಸ್ತರಾಗಿ ಅಣ್ಣ-ತಂಗಿಯರು ಭೂಮಿಯ ದೈವಗಳ ನೆಲೆವೀಡಾದ ‘ತುಳುನಾಡಿ(Tulunadu)’ ನ ಕಾರ್ಕಳ(Karkala) ಸೀಮೆಯ ವಿಶ್ವಕರ್ಮ(Vishwakarma) ಸಮಾಜದ ಬಡ ಕುಟುಂಬದ ‘ಈರಮ್ಮ ಆಚಾರ್ತಿ ಮತ್ತು ಶಂಭು ನಾರಾಯಣ ಕಲ್ಕುಡ’ ಎಂಬ ದಂಪತಿಗಳ 6ನೇಯವನಾಗಿ ‘ಬೀರೆ(Beere-kalkuda)’ ಮತ್ತು 7ನೇಯವಳಾಗಿ ‘ಕಾಳಮ್ಮ(Kalamma-kallurti)’ ಜನಿಸುತ್ತಾರೆ. ಹುಟ್ಟುತ್ತಲೇ ತಮ್ಮ ದೈವಿಶಕ್ತಿಯನ್ನು ಅರಿಯದೇ, ಬೆಳೆದಂತೆ ತಂದೆಯನ್ನು ಕಳೆದುಕೊಂಡು ಕುಟುಂಬ ವಿಪರೀತವಾದ ಸಂಕಷ್ಟಕ್ಕೆ ಗುರಿಯಾಗುತ್ತದೆ. ತಂದೆ ಶಂಭು ನಾರಾಯಣರು ಅದ್ವೀತಿಯ ಶಿಲ್ಪಿಯಾಗಿದ್ದು ಮಗ ‘ಬೀರೆ(Beere-ಕಲ್ಕುಡ)’ ಕೂಡಾ ತನ್ನ ತಂದೆಯಿಂದ ಶಿಲ್ಪಕಲೆಯನ್ನು ಕರಗತ ಮಾಡಿಕೊಂಡಿದ್ದ. ತನ್ನ ತಂದೆಯ ಮರಣಾನಂತರ ತಾನೂ ತನ್ನ ಕುಲಕಸುಬನ್ನು ಮುಂದುವರಿಸಿಕೊಂಡು ಹೋಗುತ್ತಾನೆ. ಹಾಗೆ ತಂದೆಯ ಮುಖಾಂತರ ಶಿಲ್ಪಕಲೆಯನ್ನು ಕರಗತಮಾಡಿಕೊಂಡಿದ್ದ ‘ಬೀರೆ(ಕಲ್ಕುಡ)’ ಕಾರ್ಕಳದ ಅರಸನ ಮುಖಾಂತರ ಕಾರ್ಕಳದ ‘ಗೊಮ್ಮಟ(Gommata)’ ನನ್ನು ಮಾಡಲು ತೊಡಗುತ್ತಾನೆ. ಹೀಗೆ ತನ್ನ ಸೂಕ್ಷ್ಮತೆಯಿಂದ ಸುಂದರವಾದ ಗೊಮ್ಮಟನನ್ನು ನಿರ್ಮಿಸಿಯೇ ಬಿಡುತ್ತಾನೆ. ಮುಂದೆ ಈ ಗೊಮ್ಮಟನನ್ನು ಕಂಡು ಜನರು ಬಹಳವಾಗಿ ಆಕರ್ಷಿತರಾಗಿ, ಈ ಗೊಮ್ಮಟದ ಶಿಲ್ಪಕಲೆಯು ಅತೀ ಕಡಿಮೆ ಸಮಯದಲ್ಲೇ ಜನಜನಿತವಾಗಿ ಕಾರ್ಕಳದ ಸೀಮೆಯ ಹೆಸರು ಜನಜನಿತವಾಗಿ ಬಹಳ ಹೆಸರುವಾಸಿಯಾಗುತ್ತದೆ.
ಶ್ರೀ ವೀರ ಕಲ್ಕುಡ ಮತ್ತು ಅಮ್ಮ ಕಲ್ಲುರ್ಟಿ
Sri Kalkuda & Kallurti
ಈ ರೀತಿಯಲ್ಲಿ ಕಾರ್ಕಳ ಗೊಮ್ಮಟನ ಕೀರ್ತಿ ಹಬ್ಬುತ್ತಿದ್ದಂತೆ ಕಾರ್ಕಳದ ದೊರೆ ‘ಬೈಲಸುದ್ದರಸು’ ಗೆ ನಮ್ಮಿಲ್ಲಿನ ಈ ಸ್ಥಳದಲ್ಲಿ ಸ್ಥಾಪಿತವಾದ, ಕೆಲವೇ ಸಮಯದಲ್ಲಿ ಪ್ರಸಿದ್ದಿ ಪಡೆದ, ಈ ಶಿಲ್ಪಕಲೆಯು ಮುಂದೆ ಎಲ್ಲಿಯೂ ಆಗಕೂಡದೂ ಎಂದು ಆಲೋಚಿಸುತ್ತಾನೆ. ಹೀಗೆ ‘ಬೈಲಸುದ್ದರಸು’ ಒಂದು ಕುತಂತ್ರವನ್ನು ಹೂಡಿ ‘ಬೀರೆ ಕಲ್ಕುಡ’ನನ್ನು ಕರೆಸಿ ಅಪೂರ್ವ ಶಿಲ್ಪಕಲೆಯನ್ನ ಹೊಗಳಿ ನಮ್ಮ ಈ ನಾಡಿಗೆ ಕೀರ್ತಿ ತಂದುಕೊಟ್ಟ ನಿಮಗೆ ಸಮ್ಮಾನವನ್ನು ಮಾಡಲು ಬಯಸಿದ್ದೇನೆ, ಅಂತೆಯೇ ಒಂದು ದಿನವನ್ನು ಗೊತ್ತಪಡಿಸಿ ಅಂದು ಅರಮನೆಗೆ ಆಹ್ವಾನಿಸುತ್ತಾನೆ.
ಹೀಗೆ ರಾಜನ ಅಪ್ಪಣೆಯಂತೆ ‘ಬೀರೆ(ಕಲ್ಕುಡ)’ ಅರಮನೆಗೆ ಹೊಗುತ್ತಾನೆ. ಅಲ್ಲಿ ರಾಜನು ‘ಬೀರೆ(ಕಲ್ಕುಡ)’ನ ಒಂದು ಕೈ ಮತ್ತು ಒಂದು ಕಾಲನ್ನು ಕತ್ತರಿಸುತ್ತಾನೆ. ಇದಕ್ಕೆ ಕಾರಣ ಬೀರೆ ಈ ರೀತಿಯಾದ ಅಪೂರ್ವ ಮೂರ್ತಿಯನ್ನು ಬೇರೆಲ್ಲೂ ಮಾಡಕೂಡದು ಎಂಬ ಉದ್ದೇಶದಿಂದ.
ಹೀಗೆ ಅಂಗವಿಕಲನಾಗಿ ನೋವಿನಿಂದ ‘ಬೀರೆ ಕಲ್ಕುಡ’ ಮನೆಗೆ ತೆರಳಲಾಗದೆ ಮುಂದೆ ನೇರವಾಗಿ ‘ವೇಣೂರು(Venur)’ಗೆ ಹೋಗುತ್ತಾನೆ. ಅಲ್ಲಿಗೆ ತೆರಳಿ ತನ್ನ ಅಂಗವೈಕಲ್ಯದ ಮದ್ಯೆಯೇ ಪುನಃ ಮತ್ತೊಂದು ‘ಗೊಮ್ಮಟ’ನನ್ನು ಕೆತ್ತಲು ಪ್ರಾರಂಭಿಸುತ್ತಾನೆ. ಹಾಗೇ ದಿನಗಳು ಉರುಳಿದರು ತನ್ನ ಅಣ್ಣನ ಬರುವಿಕೆಯನ್ನು ಕಾಣದೆ ನೊಂದ ‘ಕಾಳಮ್ಮ(kallurti)’ ರಾತ್ರಿಯಲ್ಲಿ ಅಣ್ಣನ ಬಗ್ಗೆ ಒಂದು ದುಸ್ವಪ್ನವನ್ನು ಕಾಣುತ್ತಾಳೆ. ಹೀಗೆ ‘ಕಾಳಮ್ಮ’ ತನ್ನ ತಾಯಿಯನ್ನು ಬಿಟ್ಟು ಅಣ್ಣನನ್ನು ಅರಸುತ್ತಾ ಕಾರ್ಕಳದತ್ತ ಸಾಗುತ್ತಾಳೆ. ಮುಂದೆ ಸಾಗಿದಾಗ ಅಲ್ಲಿ ತನ್ನ ಅಣ್ಣ ಕಾರ್ಲದಲ್ಲಿ ಇಲ್ಲವೆಂಬುದನ್ನು ಪರರ ಮೂಲಕ ತಿಳಿಯುತ್ತಾಳೆ.
ಹೀಗೆ ‘ಕಾಳಮ್ಮ ಕಲ್ಲುರ್ಟಿ’ ತನ್ನ ಅಣ್ಣನನ್ನು ಹುಡುಕುತ್ತಾ ಮುಂದೆ ಸಾಗುತ್ತಾಳೆ, ಅದೇ ರೀತಿಯಲ್ಲಿ ವೇಣೂರಿನೆಡೆಗೆ ಸಾಗುವ ದಾರಿಯ ಮದ್ಯದಲ್ಲಿ ದಟ್ಟಡವಿಯ ಬಳಿ ಒಬ್ಬ ಕುಡುಕ ಯುವಕ ‘ಕಾಳಮ್ಮ’ನನ್ನು ತಡೆದು ಅಸಭ್ಯವಾಗಿ ವರ್ತಿಸುತ್ತಾನೆ. ಆಗ ಅವಳನ್ನು ನಾಗದೇವರು ಕಾಪಾಡುತ್ತಾರೆ. ಹೀಗೆ ಮುಂದೆ ಕಾಳಮ್ಮ ನಡೆದು ನಡೆದು ವೇಣೂರನ್ನು ತಲುಪುತ್ತಾಳೆ. ಅಲ್ಲಿ ತನ್ನ ಅಣ್ಣನನ್ನು ನೋಡುತ್ತಾಳೆ. ತನ್ನ ಅಣ್ಣ ಒಂದು ಕಾಲು- ಒಂದು ಕೈಯನ್ನು  ಕಳೆದುಕೊಂಡು ಭಯಾನಕವಾಗಿ ಕಾಣಿಸುತ್ತಾನೆ. ಅಣ್ಣನ ಭೀಕರತೆಯನ್ನು ಕಂಡು ಮರುಗಿ, ಕಣ್ಣೀರಿಟ್ಟು ಅಣ್ಣನನ್ನು ಅಪ್ಪಿ ಅಳುತ್ತಾಳೆ. ಹಾಗೇ ಅಣ್ಣನಿಂದ ಎಲ್ಲಾ ವಿಚಾರವನ್ನು ತಿಳಿದು, ಅಣ್ಣನ ಈ ಭೀಕರ ಪರಿಸ್ಥಿತಿಗೆ ಕಾರಣರಾದ ‘ಬೈಲಸುದ್ದರಸು’ ವಿನ ವಿರುದ್ದ ಸೇಡು ತೀರಿಸಿಕೊಳ್ಳಲು ಅಣ್ಣ-ತಂಗಿಯರಿಬ್ಬರೂ ಶಪಥ ಮಾಡುತ್ತಾರೆ.
Kalkuda Kola, ಕಲ್ಲುಕುಟ್ಟಿಕ ಕೋಲದ ವೇಷದಾರಿ.
ಅದೇ ವೇಳೆಯಲ್ಲಿ ಆಕಾಶದಿಂದ ಒಂದು ಅಶರೀರವಾಣಿ ಮಾಯಾಶಕ್ತಿಯ ಮೂಲಕ ‘ಬೀರೆ ಮತ್ತು ಕಾಳಮ್ಮ’ ನ ಹಿಂದಿನ ಹಿನ್ನಲೆ ಮತ್ತು ಈಗಿನ ವಿಚಾರವನ್ನು ತಿಳಿಸಿ ಅದೃಶ್ಯವಾಗುತ್ತದೆ. ಹಾಗೇ ತಮ್ಮ ಹಿಂದಿನ ಶಾಪ ಮತ್ತು ತಮ್ಮ ದೈವಿಶಕ್ತಿಯನ್ನ ಅರಿತ ‘ಬೀರೆ ಕಲ್ಕುಡ ಮತ್ತು ಕಾಳಮ್ಮ ಕಲ್ಲುರ್ಟಿ’ ನೇರವಾಗಿ ವೇಣೂರಿನ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಗೆ ತೆರಳಿ ಅಲ್ಲಿ ಭೂತನಾಥನಾದ ಪರಶಿವನಿಗೆ ಹಲವಾರು ವಿಧದ ಸೇವೆಗಳನ್ನು ಮಾಡಿಸುತ್ತಾರೆ. ಅಂತೆಯೇ ಅಣ್ಣ-ತಂಗಿ ‘ಕಲ್ಕುಡ-ಕಲ್ಲುರ್ಟಿ’ ಶ್ರೀ ಮಹಾಲಿಂಗೇಶ್ವರನ ಸನ್ನಿಧಾನದಲ್ಲಿನ ಪವಿತ್ರ ಬಾವಿಗೆ ಧುಮುಕುತ್ತಾರೆ.
ಅಂತೆಯೇ ಬಾವಿಯಲ್ಲಿ ಧುಮುಕಿದ ‘ಬೀರೆ ಮತ್ತು ಕಾಳಮ್ಮ’  ಭಯಂಕರವಾದ ದೈವರೂಪದಿಂದ ಮೈದಾಳಿ ಮೇಲೆ ಬರುತ್ತಾರೆ. ಅಂದಿಗೆ ಅವರಿಬ್ಬರ ಶಾಪ ವಿಮೋಚನೆಯಾಗುತ್ತದೆ. ‘ಬೀರೆ’ ಯು ‘ಶ್ರೀ ವೀರ ಕಲ್ಕುಡ’ ನಾಗಿ ಕಪ್ಪು ವರ್ಣದ ಮುಖದ ಮೇಲೆ ಬಿಳಿಯ ಚುಕ್ಕೆ, ಒಂದು ಕೈ- ಒಂದು ಕಾಲು ಕಡಿದ ರೀತಿಯಲ್ಲಿ, ಒಂದು ಕೈಯಲ್ಲಿ ಬೆಂಕಿಯ ದೊಂದಿ ಹಿಡಿದು ಬರುತ್ತಾನೆ. ಅಂತೆಯೇ ಸೋದರಿ ‘ಕಾಳಮ್ಮ’ ಕಪ್ಪು ದೇಹದವಳಾಗಿ ಮಹಾಕಾಳಿಯಂತೆ ಗೋಚರಿಸುತ್ತಾ ಒಂದು ಕೈಯಲ್ಲಿ ಬೆಂಕಿಯ ದೊಂದಿ, ಮತ್ತೊಂದು ಕೈಯ್ಯಲ್ಲಿ ನಾಗರ ಬೆತ್ತವನ್ನು ಹಿಡಿದು ಮೇಲೆ ಬರುತ್ತಾಳೆ. ಹೀಗೆ ಅಣ್ಣ ತಂಗಿ ಭಯಂಕರವಾದ ಉಗ್ರರೂಪವನ್ನು ತಾಳಿ ಮೇಲೆ ಬಂದಾಗ ಲೋಕದ ತಾಯಿ-ತಂದೆಯರಾದ ಪರಶಿವ-ಪರಶಿವೆ ಇಬ್ಬರು ಅಣ್ಣ-ತಂಗಿಗೆ ಅನುಗ್ರಹಿಸುತ್ತಾರೆ.
ಹೀಗೆ ಮುಂದೆ ನಡೆದ ಅಣ್ಣ-ತಂಗಿ ಎಲ್ಲಾ ಪುಣ್ಯ ಕ್ಷೇತ್ರಕ್ಕೆ ತೆರಳಿ ಅಲ್ಲಿ ಪುಣ್ಯ ಸ್ನಾನಗೈದು ಬಹಳ ಶಕ್ತಿಶಾಲಿಗಳಾಗಿ ಪುನಃ ಕಾರ್ಲ ಸೀಮೆಗೆ ಬರುತ್ತಾರೆ. ಅಲ್ಲಿ ಮೊದಲಿಗೆ ‘ಉಬರ್(ubbar)’ ಎನ್ನುವ ಸ್ಥಳಕ್ಕೆ ಬರುತ್ತಾರೆ. ನಂತರ ಅಲ್ಲಿಂದ ‘ಬೈಲೂರಿಗೆ(Bailur)’ ತೆರಳುತ್ತಾರೆ. ಅಲ್ಲಿ ‘ಬೈಲಸುದ್ದರಸು’ ವಿಗೆ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡಲು ಪ್ರಾರಂಭಿಸುತ್ತಾರೆ. ಆದರೇ  ಬೈಲಸುದ್ದರಸು ಈ ಬಗ್ಗೆ ಏನನ್ನೂ ತಿಳಿಯದಾದಾಗ ಜ್ಯೋತಿಷ್ಯರ ಮೊರೆ ಹೋಗುತ್ತಾನೆ. ಅರಸು ಪ್ರಶ್ನೆಯ ಮೂಲಕ ತಿಳಿದ ವಿಷಯವೆಂದರೆ ಈ ತುಳುವನಾಡಿಗೆ ಎರಡು ಹೊಸ ದೈವಗಳು ಬಂದಿವೆ. ಅವುಗಳ ಹೆಸರು ‘ಕಲ್ಕುಡ-ಕಲ್ಲುರ್ಟಿ’ ಎಂಬುದಾಗಿ. ನಿನ್ನ ಅರಮನೆಯಲ್ಲಿ ಕಾಲು-ಕೈ ಕಡಿಸಿಕೊಂಡವನೇ ಮತ್ತು ಅವನ ಸೋದರಿಯೇ ‘ಕಲ್ಕುಡ-ಕಲ್ಲುರ್ಟಿ’ಯರು. ಇವರು ದೇವಲೋಕದವರು ಹಾಗೂ ಇಲ್ಲಿ ತಮ್ಮ ಶಾಪದಿಂದ ಜನಿಸಿ ಕಾರಣೀಕ ಶಕ್ತಿಗಳಾಗಿ ಮುಂದೆ ಈ ತುಳುವನಾಡಿನಲ್ಲಿ ನೆಲೆಯಾಗುತ್ತಾರೆ. ಈ ದೈವಗಳಿಗೆ ನೀನು ದೈವಸ್ಥಾನವನ್ನು ನಿರ್ಮಿಸಿ, ಪ್ರತಿ ಸಂವತ್ಸರವು ಕೋಲವನ್ನು ನಡೆಸಿ ಸೇವೆಯನ್ನು ನೀಡಿ, ಪೂಜಾ-ಪುನಸ್ಕಾರಗಳನ್ನು ನಡೆಸಬೇಕು ಎಂಬುದಾಗಿ ತಿಳಿಸಿ, ಮುಂದೆ ಈ ದೈವಗಳನ್ನು ನೀನು ನಂಬಿಕೊಂಡು ಬರಬೇಕು ಎಂದು ಹೇಳುತ್ತಾರೆ.
ಮುಂದೆ ಈ ವಿಚಾರವನ್ನು ತಿಳಿದ ಬೈಲಸುದ್ದರಸು ಕಾರಣಿಕದ ‘ಕಲ್ಕುಡ-ಕಲ್ಲುರ್ಟಿ’ ಗೆ ದೈವಸ್ಥಾನವನ್ನು ಕಟ್ಟಿಸಿ ಕೋಲವನ್ನು ನಡೆಸುತ್ತಾನೆ. ಹಾಗೇ ದೈವದ ಶಕ್ತಿ ತಿಳಿಯಲು ಕೋಲದಲ್ಲಿ ಬಾಗಿಯಾಗುತ್ತಾನೆ. ಅಲ್ಲಿ ದೈವದ ಶಕ್ತಿಯನ್ನು ತಿಳಿದು ತಾನು ಮಾಡಿದ ತಪ್ಪುಗಳಿಗೆ ನೊಂದು ದೈವದಲ್ಲಿ ಕ್ಷಮೆ ಯಾಚಿಸಿ ದೈವವನ್ನ ನಂಬಿ ನಡೆಯುತ್ತಾನೆ. ಈ ಸ್ಥಳವೇ ಮುಂದೆ ಕಾರ್ಕಳದ ‘ಪಳ್ಳಿ ಮಂಗಾಳ್ದಿಮಠ(Palli magaldhimutt)’ ಎಂಬುದಾಗಿ ಆಗಿದೆ.
ಹೀಗೆ ಮುಂದೆ ಈ ಅಣ್ಣ-ತಂಗಿ ನೊಂದವರಿಗೆ ರಕ್ಷಕರಾಗಿ, ನೋಯಿಸಿದವರಿಗೆ ಶಿಕ್ಷಕರಾಗಿ, ತಪ್ಪು ಮಾಡುವವರಿಗೆ ಉಗ್ರರೂಪಿಗಳಾಗಿ ಸತ್ಯದೇವತೆಗಳಾಗಿ, ಧರ್ಮದೇವತೆಗಳಾಗಿ ತುಳುನಾಡಿನುದ್ದಕ್ಕೂ ಕಾರಣೀಕ ಶಕ್ತಿಗಳಾಗಿ ನೆಲೆಯಾಗುತ್ತಾರೆ. ಹೀಗೆ ‘ಬೀರೆ’ ಯು ‘ಶ್ರೀ ವೀರ ಕಲ್ಲುಕಟ್ಟಿಕ, ಕಲ್ಕುಡ, ಪಾಷಾಣಮೂರ್ತಿ’ ಯಾಗಿ ತುಳುವನಾಡಿನ ಉದ್ದಕ್ಕೂ ಹಾಗೂ ಕೆಲ ಬೇರೆ ಪ್ರದೆಶದಲ್ಲು ಪೂಜೆ-ಪುನಸ್ಕಾರಗಳನ್ನು ಪಡೆಯುತ್ತಾ, ಸೋದರಿ ‘ಕಾಳಮ್ಮ’ , ‘ಶ್ರೀ ಕಲ್ಲುರುಟ್ಟಿ, ಕಲ್ಲುರ್ಟಿ, ವರ್ತೆ, ಮಂತ್ರದೇವತೆ, ಸತ್ಯದೇವತೆ’ ಎಂಬೀ ಮುಂತಾದ ನಾಮದಿಂದ ಕರೆಸಿಕೊಳ್ಳುತ್ತಾ ನಾಡಿನೆಲ್ಲೆಡೆ ತನ್ನ ಮಕ್ಕಳನ್ನು ಪೊರೆದು ಕಾಯುವ ಭಾರವನ್ನು ಹೊತ್ತಿದ್ದಾಳೆ. ತುಳು ದೈವದ ನುಡಿಯ ಒಂದು ಸಾಲಿನಂತೆ ಅಮ್ಮ ‘ಕಲ್ಲುರ್ಟಿ’ ಯು “ಸತ್ಯೋಗು ಸತ್ಯದೇವತೆಯಾದ್, ಧರ್ಮಗು ಧರ್ಮದೇವತೆಯಾದ್, ಕೃತಿಮೋಗು ಕೃತಿಮದೇವತೆಯಾದ್, ಕಪಟೊಗು ಪಾಷಾಣಮೂರ್ತಿ ಕಲ್ಲುರ್ಟಿ ಅಪ್ಪೆಯಾದ್’ ಮಾತೆರ್ನಲಾ ಕಾಪೊಂದ್ ಉಲ್ಲೊಲ್” ಎಂಬುದಾಗಿ ಅಮ್ಮ ಕಲ್ಲುರ್ಟಿಯ ಮಹಿಮೆಯನ್ನು ಸಾರಲಾಗಿದೆ.
ಹೀಗೆ ‘ಕಲ್ಕುಡ-ಕಲ್ಲುರ್ಟಿ’ ಯರು ಕೆಲವೆಡೆ ಪ್ರದಾನ ದೈವವಾಗಿ, ಕೆಲವೆಡೆ ಪರಿವಾರ ಶಕ್ತಿಗಳಾಗಿ ನೆಲೆಯಾಗಿ ಭಕ್ತರ ಪೊರೆದು ಕಾಯುತ್ತಿದ್ದಾರೆ. ಕಲ್ಕುಡನು ಮಂದರ್ತಿ, ನೀಲಾವರ ಹಾಗೂ ಇನ್ನಿತರ ಕ್ಷೇತ್ರದಲ್ಲಿ ದುರ್ಗೆಯ ಮಗನಾಗಿ ನೆಲೆನಿಂತು ಕ್ಷೇತ್ರ ರಕ್ಷಣೆಯ ಭಾರವನ್ನ ಹೊತ್ತಿದ್ದಾನೆ. ಅಂತೆಯೇ ಶಂಕರನಾರಾಣ(Shankaranarayana)ದಲ್ಲಿ “ಶ್ರೀ ವೀರ ಕಲ್ಲುಕುಟಿಕ’ ನಾಗಿ ನೆಲೆಸಿ ಭಕ್ತರ ಸಕಲವಾದ ನೋವನ್ನು ನೀವಾರಣೆ ಮಾಡುತ್ತಾ ಭಕ್ತರ ಹುಯಿಲು(ದೂರು) ಸ್ವೀಕರಿಸಿ ಅದನ್ನು ಪರಿಹರಿಸಿ ಕೊಡುವ ಕಾರ್ಯವನ್ನು ಮಾಡುತ್ತಾ ಇದ್ದಾನೆ. ಅಂತೆಯೇ ಕಲ್ಲುರ್ಟಿಯು ತುಳುನಾಡಿನಿದ್ದಕ್ಕೂ ಮಂತ್ರದೇವತೆ, ಸತ್ಯದೇವತೆ, ವರ್ತೆ, ಪಾಷಾಣಮೂರ್ತಿ ಅಪ್ಪೆಯಾಗಿ ನೆಲೆಸಿ ಭಕ್ತರ ಪುರೆವ ಕಾಯಕದಲ್ಲಿ ತೊಡಗಿದ್ದಾಳೆ. ಅಂತೆಲೇ ಬಂಟ್ವಾಳ ತಾಲೂಕಿನ ‘ಪಣೋಲಿಬೈಲಿ(Panolibail)’ ನಲ್ಲಿ ನಲೆನಿಂತು ಕಾರಣೀಕ ಶಕ್ತಿಯಾಗಿ ನೆಲೆಸಿದ್ದಾಳೆ. ‘ಕಲ್ಕುಡ-ಕಲ್ಲುರ್ಟಿ’ ಗೆ ರಕ್ತಬಲಿಯನ್ನು ನೀಡುವ ಪದ್ದತಿಯಿದೆ. ಇರ್ವರೂ ರಕ್ತಪ್ರೀಯರಾಗಿದ್ದು ಇವರಿಗೆ ಕೋಳಿ, ಕುರಿಯನ್ನು ಬಲಿ ಕೊಡುತ್ತಾರೆ. ನಮ್ಮೇಲ್ಲರ ಕಾಯ್ವ ಕಾರಣೀಕದ ‘ಕಲ್ಕುಡ-ಕಲ್ಲುರ್ಟಿ’ ಗೆ ಇದೋ ಸಾವಿರ ನಮನಗಳು. ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ.

(ಸೂಚನೆ : ಈ ಲೇಖನದಲ್ಲಿನ ತಪ್ಪು-ಒಪ್ಪುಗಳ ಬಗ್ಗೆ ನಿಮ್ಮ ಸಲಹೆ –ಸೂಚನೆಗಳಿಗೆ ಸದಾ ಬದ್ದನಾಗಿದ್ದೇನೆ. ನನ್ನ ಅಲ್ಪಮತಿಗೆ ತಿಳಿದಷ್ಟು ಇಲ್ಲಿ ನಾನು ನಮೂದಿಸಿದ್ದೇನೆ. ದಯವಿಟ್ಟು ಇದರಲ್ಲಿನ – ತಪ್ಪು-ಒಪ್ಪುಗಳನ್ನು raghu.koteshwara05@gmail.com ವಿಳಾಸಕ್ಕೆ ಕಳುಹಿಸಬೇಕಾಗಿ ವಿನಂತಿ ಅಥವಾ ಈ- ಬ್ಲಾಗ್ ನಲ್ಲಿಯೇ ಕಮೆಂಟ್ ಮಾಡಬಹುದು)